Tiger: ಹೊರಬಿದ್ದಿದೆ ಕಾಡಿನಲ್ಲಿ ಹುಲಿಗಳು ಎಷ್ಟಿವೆ ಎಂಬ ವರದಿ: ನಮ್ಮ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿವೆ ಗೊತ್ತೇ?
Tiger: ವಿಶ್ವದಾದ್ಯಂತ ಕಾಡು ನಾಶವಾಗುತ್ತಿದೆ, ಪರಿಸರ ನಾಶದಿಂದ ಪ್ರಾಣಿ-ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ವರದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಇದಕ್ಕಾಗಿ ಅನೇಕ ಕ್ರಮಗಳನ್ನು ಕೂಡ ತೆಗೆದುಕೊಳ್ಳಲು ವಿವಿಧ ವಿಶ್ವ ಸಂಸ್ಥೆಗಳು ಮುಂದೆ ಬಂದಿವೆ. ಇದೀಗ ಪ್ರಪಂಚದಲ್ಲಿ ಕಾಡು ಹುಲಿಗಳ ಸಂಖ್ಯೆ ಎಷ್ಟಿದೆ..? ಮೊದಲು ಎಷ್ಟಿತ್ತು ಅನ್ನುವ ಬಗ್ಗೆ ವರದಿಯೊಂದು ಹೊರಬಿದ್ದಿದೆ.
2010ರಲ್ಲಿ ಜಾಗತಿಕವಾಗಿ ಸರಿ ಸುಮಾರು 3,200 ಇದ್ದ ಹುಲಿಗಳ ಸಂಮಖ್ಯೆ 2024ರಲ್ಲಿ ಸುಮಾರು 5,500ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ವನ್ಯಜೀವಿ ನಿಧಿ (WWF) ತಿಳಿಸಿದೆ. ಇದರೊಂದಿಗೆ ಚೀನಾ, ರಷ್ಯಾ, ಭಾರತ ಮತ್ತು ನೇಪಾಳ ಮುಂತಾದ ದೇಶಗಳಲ್ಲಿಯೂ ಹುಲಿಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ವರದಿ ಹೇಳಿದೆ.
ಈ ಅಂಕಿಅಂಶಗಳನ್ನು ಈಶಾನ್ಯ ಚೀನಾದ ಹೀಲಾಂಗ್ ಜಿಯಾಂಗ್ ಪ್ರಾಂತ್ಯದ ಹರ್ಬಿನ್ ನಗರದಲ್ಲಿ ನಡೆಯುತ್ತಿರೋ ಹುಲಿಗಳು ಮತ್ತು ಚಿರತೆಗಳ ಸಂರಕ್ಷಣೆ ಮತ್ತು ಚೇತರಿಕೆ (Conservation and Recovery of Tigers and Leopards) ಕುರಿತ 2ನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪ್ರಕಟಿಸಲಾಗಿದೆ.
ವಿಶ್ವದ 70% ಕ್ಕೂ ಹೆಚ್ಚು ಕಾಡು ಹುಲಿಗಳಿಗೆ ನಮ್ಮ ದೇಶ ಭಾರತದಲ್ಲಿ ನೆಲೆಯಾಗಿದೆ ಅನ್ನೋದೆ ನಮ್ಮಲ್ಲರ ಹೆಮ್ಮೆ. ಭಾರತದಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಅತ್ಯಧಿಕ ಹುಲಿಗಳಿವೆ ಎಂದು ವರದಿ ಹೇಳಿದೆ. ಹಾಗೆ ನಮ್ಮ ರಾಜ್ಯ ಕರ್ನಾಟಕ ಮತ್ತು ಉತ್ತರಾಖಂಡ ರಾಜ್ಯಗಳು ನಂತರದ ಸ್ಥಾನದಲ್ಲಿ ನಿಲ್ಲುತ್ತವೆ. ಅಖಿಲ ಭಾರತ ಹುಲಿಗಳ ಸಮೀಕ್ಷೆ ಅಂದಾಜು 2022ರ 5ನೇ ಸುತ್ತಿನ ಸಾರಾಂಶ ವರದಿಯ ಪ್ರಕಾರ, ಭಾರತದಲ್ಲಿ ಕನಿಷ್ಠ 3,167 ಹುಲಿಗಳಿವೆ. ಈ ಮೂಲಕ ಭಾರತವು ವಿಶ್ವದ 70% ಕ್ಕೂ ಹೆಚ್ಚು ಕಾಡು ಹುಲಿಗಳಿಗೆ ನೆಲೆ ನೀಡಿದೆ.
ಮನುಜನ ಅತೀವ ಚಟುವಟಿಕೆಯಿಂದ ಕಾಡಿನ ಪ್ರಾಣಿಗಳ ಮೇಲೆ ಪರಿಣಾಮ ಆಗುವ ಕಾರಣದಿಂದ ಜಾಗತಿಕ ಕಾಡು ಹುಲಿಗಳ ಸಂಖ್ಯೆ ಕುಸಿತವಾಗುತ್ತಿದೆ ಎಂಬ ಅನುಮಾನವಿತ್ತು. ಆದರೆ ಕಳೆದ ದಶಕಗಳಲ್ಲಿ ಕಾಡಿನ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಚೀನಾದಲ್ಲಿ, ಕಾಡು ಹುಲಿಗಳ ಆವಾಸಸ್ಥಾನಗಳನ್ನು ಪರಿಣಾಮಕಾರಿಯಾಗಿ ಪುನಃಸ್ಥಾಪಿಸಲಾಗಿದೆ ಮತ್ತು ಸುಧಾರಿಸಲಾಗಿದೆ. ಇದು ಕಾಡು ಹುಲಿಗಳ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ಬೀಜಿಂಗ್ ಪ್ರತಿನಿಧಿ ಕಚೇರಿಯ ಉಪ ಮಹಾನಿರ್ದೇಶಕ ಝೌ ಫೀ ಅವರು ಸಮಾವೇಶದಲ್ಲಿ ಹೇಳಿದರು.
ಹುಲಿ ಹಾಗೂ ಚಿರತೆಯಂತ ಜೀವ ವೈವಿದ್ಯ ಜೀವಿಗಳನ್ನು ಉಳಿಸುವ ನಿಟ್ಟಿನಲ್ಲಿ ಈಶಾನ್ಯ ಚೀನಾ ಹುಲಿ ಮತ್ತು ಚಿರತೆ ರಾಷ್ಟ್ರೀಯ ಉದ್ಯಾನವನ (Northeast China Tiger and Leopard National Park)ದ ಸ್ಥಾಪನೆಯು ಒಂದು ಗಮನಾರ್ಹ ಪ್ರಯತ್ನವಾಗಿದೆ. ಇದು ಈಶಾನ್ಯ ಪ್ರಾಂತ್ಯಗಳಾದ ಜಿಲಿನ್ ಮತ್ತು ಹೀಲಾಂಗ್ ಜಿಯಾಂಗ್ನಾದ್ಯಂತ 1.4 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ವಿಶ್ವದ ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾದ ಮತ್ತು ಅರಣ್ಯ ಪರಿಸರ ವ್ಯವಸ್ಥೆಯ ಪ್ರಮುಖ ಪ್ರಭೇದವಾದ ಸುಮಾರು 70 ಕಾಡು ಸೈಬೀರಿಯನ್ ಹುಲಿಗಳು ಈಗ ಈ ಉದ್ಯಾನವನದ ವ್ಯಾಪ್ತಿಯಲ್ಲಿ ವಾಸಿಸುತ್ತಿವೆ. 2023 ರಲ್ಲಿ ಉದ್ಯಾನದಲ್ಲಿ 20 ಹುಲಿ ಮರಿಗಳು ಜನಿಸಿವೆ.