Teacher – Student: ಪ್ರವಾಸದಲ್ಲಿ ವಿದ್ಯಾರ್ಥಿ ಜತೆ ಶಿಕ್ಷಕಿಯ ಅಶ್ಲೀಲ ಫೋಟೋ ವೈರಲ್: ಪೋಕ್ಸೊ ಕೇಸ್ ರದ್ದು ಮಾಡಲ್ಲವೆಂದ ಕರ್ನಾಟಕ ಹೈಕೋರ್ಟ್
Teacher – Student: ಕೋಲಾರದ ಚಿಂತಾಮಣಿ ತಾಲೂಕಿನ ಗ್ರಾಮವೊಂದರ ಶಾಲಾ ಶಿಕ್ಷಕಿಯೊಬ್ಬರು 10 ನೇ ತರಗತಿ ವಿದ್ಯಾರ್ಥಿ ಜತೆ ಪ್ರವಾಸಕ್ಕೆ ತೆರಳಿದ್ದಾಗ ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕಿಯನ್ನು ಅಮಾನತು ಮಾಡಲಾಗಿತ್ತು. ಕಳೆದ ವರ್ಷ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ಈ ಬಗ್ಗೆ ಫೋಕ್ಸೋ ಕಾಯ್ದೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಈ ಬಗ್ಗೆ ಟೂರ್‌ನಲ್ಲಿ ವಿದ್ಯಾರ್ಥಿ ಜತೆ ಶಿಕ್ಷಕಿ ಅಸಹಜ ಪೋಟೋ ತೆಗೆಸಿಕೊಂಡ ಪ್ರಕರಣ ರದ್ದುಗೊಳಿಸಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಹೌದು, ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಯೋರ್ವನೊಂದಿಗೆ ಅಸಹಜ ರೀತಿಯಲ್ಲಿ ಫೋಟೋ-ವಿಡಿಯೋ ಕ್ಲಿಕ್ಕಿಸಿಕೊಂಡ ಮುಖ್ಯ ಶಿಕ್ಷಕಿ ನಡೆಗೆ ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎನ್ನಬಹುದೇ ಎಂದು ಪ್ರಶ್ನಿಸಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ನಿರಾಕರಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಮುಖ್ಯ ಶಿಕ್ಷಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ, ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಲಹೆ ನೀಡಿ ವಿಚಾರಣೆಯನ್ನು ಆ.2ಕ್ಕೆ ಮುಂದೂಡಿತು.
ಅರ್ಜಿದಾರ ಪರ ವಕೀಲರು, ‘ಅರ್ಜಿದಾರರು ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದಾರೆ. ಕೆಲ ಪೋಟೋ ತೆಗೆದುಕೊಂಡ ಕಾರಣ ಅವರ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ‘ ಎಂದರು. ಅದಕ್ಕೆ ನ್ಯಾಯಮೂರ್ತಿಗಳು, ‘ ಪ್ರಕರಣದ ದಾಖಲೆಗಳನ್ನು ಓದಿದ್ದೇನೆ. ಏನ್ರಿ ಶಿಕ್ಷಕಿ ಮಾಡಿರುವ ಕೆಲಸ? ಏಕೆ ಹಾಗೆ ಮಾಡಿದ್ದಾರೆ? ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಡ್ಯೂಯೆಟ್ ಹಾಡುತ್ತಿದ್ದರೇ? ಇದು ಶಿಕ್ಷಕಿ ಮಾಡುವ ಕೆಲಸವೇ? ಎಂದು ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲರು, ‘ ಪೋಟೋಗಳು ಅಸಹಜವಾಗಿಯೇ ಇವೆ. ಆದರೆ, ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ತಾಯಿ-ಮಗನ ಸಂಬಂಧವಿದೆ. ವಿದ್ಯಾರ್ಥಿಗೆ ಅರ್ಜಿದಾರರು ಕೇರ್ ಟೇಕಿಂಗ್ ಶಿಕ್ಷಕಿಯಾಗಿದ್ದಾರೆ ‘ ಎಂದರು. ನ್ಯಾಯಮೂರ್ತಿಗಳು,”ಅವು ಕೇರ್ ಟೇಕಿಂಗ್ ಚಿತ್ರಗಳೇ,” ಎಂದು ಮರು ಪ್ರಶ್ನೆ ಹಾಕಿದರು.
ಅರ್ಜಿದಾರರ ಪರ ವಕೀಲರು, ‘ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ಯಾವುದೇ ಲೈಂಗಿಕ ಉದ್ದೇಶವಿರಲಿಲ್ಲ. ಅರ್ಜಿದಾರರ ವಿರುದ್ಧ ಪೋಕ್ಸೊ ಕಾಯಿದೆಯ ಸೆಕ್ಷನ್ 8 ಮತ್ತು 12ರ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸೆಕ್ಷನ್ 8 ಮತ್ತು 1ರಡಿ ಅಪರಾಧ ಅನ್ವಯವಾಗಬೇಕಾದರೆ ಲೈಂಗಿಕ ಉದ್ದೇಶವಿರಬೇಕಾಗುತ್ತದೆ. ಅರ್ಜಿದಾರೆ ಮತ್ತು ವಿದ್ಯಾರ್ಥಿ ನಡುವೆ ಲೈಂಗಿಕ ಉದ್ದೇಶವಿರಲಿಲ್ಲಎಂದು ಸಾಕ್ಷ್ಯ ಹೇಳಿದ್ದಾರೆ ಎಂದು ನ್ಯಾಯಾಲಯದ ಗಮನಸೆಳೆದರು.
ಅರ್ಜಿದಾರರ ಪರ ವಕೀಲರು, ‘ಶಿಕ್ಷಕಿ ಅಪ್‌ಲೋಡ್ ಮಾಡಿಲ್ಲ. ಕೆಲ ಸಾಕ್ಷಿಗಳು ಅಪ್‌ಲೋಡ್ ಮಾಡಿದ್ದಾರೆ. ಅರ್ಜಿದಾರರ ನಡೆ ವಿಪರೀತವಾಗಿದೆ ಎನ್ನುವುದು ಒಪ್ಪುತ್ತೇನೆ. ಆದರೆ, ನಿಜವಾಗಿಯೂ ಅವರ ಮಧ್ಯೆ ಲೈಂಗಿಕ ಉದ್ದೇಶವಿರಲಿಲ್ಲ. ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಅತ್ಯುತ್ಸಾಹದಿಂದ ಘಟನೆ ನಡೆದಿದೆ ಎಂದರು.
ಅದರಿಂದ ಮತ್ತೆ ಬೇಸರಗೊಂಡ ನ್ಯಾಯಮೂರ್ತಿಗಳು, ” ಏನದು ವಿದ್ಯಾರ್ಥಿ ಜತೆ ಅತ್ಯುತ್ಸಾಹ? ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎಂದು ಕರೆಯಲಾಗುತ್ತದೆಯೇ? ಶಿಕ್ಷಕಿಯಾದವರು ಮಾಡಲೇಬಾರದ ಕೆಲಸವಿದು. ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗದು. ಜತೆಗೆ ಆರೋಪಗಳನ್ನು ಕೈ ಬಿಡಲು ವಿಚಾರಣಾ ನ್ಯಾಯಾಲಯ ಅರ್ಜಿ ಸಲ್ಲಿಸಬೇಕು” ಎಂದು ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ.