Crime: ಡೈವೋರ್ಸ್ ಗೆ ಅರ್ಜಿ ಹಾಕಿದ ಪತ್ನಿ, ಮಗಳ ಕಾಲು ಕತ್ತರಿಸಿ ಬಿಸಾಕಿದ ಪೋಷಕರು, ಹೀಗೊಂದು ವಿಚಿತ್ರ ಕ್ರೈಂ!
Crime: ಗಂಡ ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಆತನ ಜೊತೆ ಬಾಳಲು ಸುತಾರಾಂ ಸಾಧ್ಯವಿಲ್ಲ. ಹೀಗಾಗಿ ನಾನು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ ಮಗಳ ಕಾಲುಗಳನ್ನು ಆಕೆಯ ತಂದೆ ಮತ್ತು ಸಂಬಂಧಿಕರು ಸೇರಿಕೊಂಡು ಕತ್ತರಿಸಿ ಹಾಕಿದ ಘಟನೆ (Crime)ನಡೆದಿದೆ.
ಸಂತ್ರಸ್ತೆಯನ್ನು ಸೋಬಿಯಾ ಬಟೂಲ್ ಷಾ ಎಂದು ಗುರುತಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಸೋಬಿಯಾಳ ತಂದೆ ಸೈಯದ್ ಮುಸ್ತಫಾ ಷಾ, ಚಿಕ್ಕಪ್ಪಂದಿರಾದ ಸೈಯದ್ ಕುರ್ಬಾನ್ ಷಾ, ಎಕ್ಸಾನ್ ಷಾ, ನವಾಜ್ ಷಾ ಮತ್ತು ಮುಸ್ತಾಕ್ ಷಾ ರನ್ನು ಹುಡುಕಾಟ ನಡೆಸುತ್ತಿದ್ದಾರೆ.
ಈ ದಾರುಣ ಘಟನೆಯ ಕುರಿತು ಮಾತನಾಡಿರುವ ಸೋಬಿಯಾ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಮದುವೆಯ ಬಳಿಕ ನನ್ನ ಗಂಡ ಮನೆ ಜವಾಬ್ದಾರಿಯನ್ನು ತೆಗೆದುಕೊಂಡಿರಲಿಲ್ಲ. ಈ ಬಗ್ಗೆ ಕೇಳಿದಾಗ ಆತ ನನ್ನನ್ನು ನಿಂದಿಸಿ ಹಲ್ಲೆ ಮಾಡುತ್ತಿದ್ದ. ಇಬ್ಬರು ಮಕ್ಕಳನ್ನು ಕೂಡಾ ನೋಡುವ ಜವಾಬ್ದಾರಿ ನನ್ನ ಪಾಡಿಗೆ ಬಿಟ್ಟಿದ್ದ. ಕರಾಚಿಯಲ್ಲಿ ನಾನು ಒಬ್ಬಳೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ನಾನು ಪಡುತ್ತಿರುವ ಕಷ್ಟ, ದೌರ್ಜನ್ಯದ ಬಗ್ಗೆ ಪೋಷಕರಿಗೆ ಅನೇಕ ಬಾರಿ ಹೇಳಿದ್ದೆ. ಆದರೆ ಅವರು ಇದಕ್ಕೆಲ್ಲಾ ಕಿವಿಗೊಡಲೇ ಇಲ್ಲ. ಬದಲಾಗಿ ನನಗೆ ಬುದ್ಧಿ ಹೇಳಲು ಬಂದಿದ್ದರು. ಹೀಗೆಲ್ಲ ಗಂಡನ ಬಗ್ಗೆ ದೂರುವುದು ಅವಮಾನ ಎಂದು ಕುಟುಂಬ ನನ್ನ ಮಾತನ್ನು ತಳ್ಳಿ ಹಾಕಿತ್ತು. ಹೀಗಾಗಿ ನಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.
‘ನಾನು ವಿಚ್ಛೇದನಕ್ಕೆ ಅರ್ಜಿ ಹಾಕುತ್ತೇನೆ ಎಂದು ನಾನು ನನ್ನ ತಂದೆಗೆ ತಿಳಿಸಿದೆ. ಆಗ ಅವರು ನನ್ನ ಸಂಬಂಧಿಕರೊಡನೆ ಸೇರಿ ಕೊಡಲಿಯಿಂದ ಕಾಲನ್ನು ಕತ್ತರಿಸಿ ಪರಾರಿಯಾಗಿದ್ದಾರೆ. ನಾನು ನೋವಿನಿಂದ ನರಳುತ್ತ ರಸ್ತೆಯಲ್ಲಿ ಬಿದ್ದಿದ್ದರೂ ಸಹ ನನ್ನ ಸಹಾಯಕ್ಕೆ ಬರಲಿಲ್ಲ. ಆಗ ಅಲ್ಲಿದ್ದ ಪೊಲೀಸರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಘಟನೆಯಿಂದ ತೀವ್ರವಾದ ದೈಹಿಕ ಮತ್ತು ಮಾನಸಿಕ ಆಘಾತವನ್ನು ಉಂಟು ಮಾಡಿದ್ದು, ಮತ್ತೆಂದೂ ನಡೆಯಲು ಸಾಧ್ಯವಾಗದ ರೀತಿ ನನಗೆ ಅಂಗ ವೈಕಲ್ಯವುಂಟಾಗಿದೆ ಎಂದು ಸೋಬಿಯಾ ಹೇಳಿದ್ದಾಳೆ.
ಈ ಬಗ್ಗೆ ಅಲ್ಲಿನ ಹಿರಿಯ ಪೊಲೀಸ್ ಅಧೀಕ್ಷಕರು ಮಾತನಾಡಿದ್ದು, ಸೋಬಿಯಾ ತನ್ನ ಪತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಕುಟುಂಬಕ್ಕೆ ಅವಮಾನ ಮಾಡಿದ್ದಾಳೆ ಎಂದು ಆಕೆಯ ತಂದೆ ಮತ್ತು ಸಂಬಂಧಿಕರು ಈ ಅಮಾನವೀಯ ಕೃತ್ಯವನ್ನು ಎಸಗಿದ್ದಾರೆ. ಈಗ ಎಲ್ಲಾ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಇವರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.