KEA Counselling: ಮೆಡಿಕಲ್, ಎಂಜಿನಿಯರಿಂಗ್ ಮುಂತಾದ ಸೀಟು ಹಂಚಿಕೆ ಗೊಂದಲಕ್ಕೆ KEA ನಿಂದ ಸ್ಪಷ್ಟನೆ

KEA counselling: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಹತ್ವ ಮಾಹಿತಿ ಒಂದು ನೀಡಲಾಗಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸುಗಳ ಪ್ರವೇಶಕ್ಕೆ (KEA counselling) ಈ ಬಾರಿ ಏಕಕಾಲದಲ್ಲೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಗುರುವಾರ ಪ್ರಕಟನೆ ಹೊರಡಿಸಿದ್ದು, ಮೊದಲ ಸುತ್ತಿನ ಸೀಟು ಹಂಚಿಕೆಗೆ ಆದ್ಯತೆಗಳನ್ನು ದಾಖಲಿಸಲು ಎಂಜಿನಿಯರಿಂಗ್, ಪಶುವೈದ್ಯಕೀಯ ಇತ್ಯಾದಿ ಕೋರ್ಸ್‍ಗಳಿಗೆ ಅವಕಾಶ ನೀಡಿದ್ದು, ಇದು ಏಳು ದಿನಗಳವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ನೀಟ್ ಪರೀಕ್ಷೆಯ ಫಲಿತಾಂಶದ ಪಟ್ಟಿಯನ್ನು ಕೆಇಎಗೆ ಹಸ್ತಾಂತರಿಸಿದ ನಂತರ ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಇತರ ವೈದ್ಯಕೀಯ ಕೋರ್ಸುಗಳ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸುಗಳ ಪ್ರವೇಶ ವಿಷಯದಲ್ಲಿ ಅಭ್ಯರ್ಥಿಗಳಾಗಲಿ ಅಥವಾ ಪೋಷಕರಾಗಲಿ ಗಾಬರಿ ಪಡುವ ಅಗತ್ಯ ಇಲ್ಲ. ನೀಟ್ ಮಾಹಿತಿ ಇನ್ನೂ ಬರುವುದು ತಡವಾಗುತ್ತಿರುವ ಕಾರಣ ಎಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸ್ ಗಳ ಪ್ರವೇಶ ಸಂಬಂಧ ಆದ್ಯತೆಗಳನ್ನು ದಾಖಲಿಸಲು ಮೊದಲು ಅವಕಾಶ ನೀಡಲಾಗಿದೆ. ನಂತರ ವೈದ್ಯಕೀಯ ಕೋರ್ಸ್ ಗು ಅವಕಾಶ ಕೊಡಲಾಗುತ್ತೆ. ಅದರ ನಂತರ ಸೀಟು ಹಂಚಿಕೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಸದ್ಯ ರಾಷ್ಟ್ರೀಯ ವೈದ್ಯಕೀಯ ಆಯೋಗದ ಜತೆಗೂ ಕೆಇಎ ನಿರಂತರ ಸಂಪರ್ಕದಲ್ಲಿ ಇದ್ದು, ಈ ವಾರದಲ್ಲಿ ರಾಷ್ಟ್ರಮಟ್ಟದ ವೈದ್ಯಕೀಯ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅದರ ನಂತರ ರಾಜ್ಯದ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಲಾಗುವುದು. ಇನ್ನು ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಈ ಹಂತದಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದು ಕಷ್ಟ ಸಾಧ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ನೀಡುವ ಸೂಚನೆ ಪ್ರಕಾರ ಅವರಿಗೂ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ .

Leave A Reply

Your email address will not be published.