Panche: ಪವರ್ಫುಲ್ ಆದ ಪಂಚೆಗೆ ‘ಪಂಚೆ’ ಅನ್ನೋ ಹೆಸರು ಬಂದಿದ್ದು ಹೇಗೆ? ಏನಿದರ ಹಿಸ್ಟರಿ?
Panche: ಪಂಚೆ ಅಂದ್ರೆ ಭಾರತದ ಸಂಸ್ಕೃತಿ(Culture) . ಅದು ಭಾರತೀಯರ ಜೀವನ ಶೈಲಿ. ಅದೊಂದು ಸುಸಂಸ್ಕೃತ ಉಡುಗೆ. ಆದ್ರೆ, ಆಧುನಿಕತೆಯ ಹಣೆಪಟ್ಟಿಯಲ್ಲಿ ತಲೆ ಎತ್ತಿರೋ ಮಾಲ್‌ಗಳು ಕಿತ್ತೊಗಿರೋ ಜೀನ್ಸ್, ಚಡ್ಡಿ-ಮಿಡ್ಡಿ ಹಾಕಿದ್ರೆ ಒಳಬಿಡ್ತಾರಂತೆ. ಪಂಚೆ(Panche) ಹಾಕಿದ್ರೆ ನೋ ಎಂಟ್ರಿ ಅಂತೆ. ಆದ್ರೆ ಅವರಿಗೇನು ಗೊತ್ತು ಈ ಪಂಚೆ ಪವರ್. ಆದ್ರೆ ಇದೀಗ ಪಂಚೆ ತನ್ನ ಪವರ್ ಏನು ಅನ್ನೋದನ್ನು ತೋರಿಸಿದೆ. ರಾಜ್ಯದಲ್ಲೀಗ ‘ಪಂಚೆ’ ಎಂಬುದು ಪವರ್ ಫುಲ್ ಆಗಿಬಿಟ್ಟಿದೆ. ಎಷ್ಟರಮಟ್ಟಿಗೆ ಅಂದ್ರೆ ಒಂದು ಮಾಲ್(Mal) ಅನ್ನೇ ಮುಚ್ಟಿಸುವ ಮಟ್ಟಿಗೆ.
ಹೌದು, ಪಂಚೆ ಉಟ್ಟು ಮಾಲ್ ಸುತ್ತಲು ಬಂದ ರೈತನಿಗೆ ಮಾಲ್ ಸಿಬ್ಬಂದಿಯಿಂದ ಅವಮಾನ ಆದ ಕಾರಣಕ್ಕೆ 7 ದಿನಗಳ ಕಾಲ ಮಾಲೇ ಬಂದಾಗಿಬಿಟ್ಟಿದೆ. ಈ ಮೂಲಕ ಪಂಚೆ ಪವರ್ ಅಂದ್ರೆ ಏನು ಎಂದು ಇಡೀ ದೇಶಕ್ಕೆ ಗೊತ್ತಾಗಿದೆ. ಇದ್ರಿಂದಾಗಿ ಇನ್ಮುಂದೆ ಯಾರೂ ಪಂಚೆ ಸವಾಸಕ್ಕೆ ಬರಲಾರರು. ಅಂದಹಾಗೆ ಇಷ್ಟೊಂದು ಸದ್ದು ಮಾಡುತ್ತಿರುವ ಈ ಪಂಚೆಗೆ ‘ಪಂಚೆ’ ಅಂತ ಹೆಸರು ಬರಲು ಕಾರಣವೇನು? ಏನಿದರ ಹಿಸ್ಟರಿ? ಇಲ್ಲಿದೆ ನೋಡಿ.
ಪಂಚೆ ಇತಿಹಾಸ ಏನು? ಯಾವಾಗಿಂದ ಬಳಕೆ ಇದೆ?:
ಅಂದಹಾಗೆ ಪಂಚೆಗೆ ಇರೋ ಇತಿಹಾಸ ನಿನ್ನೆ ಮೊನ್ನೆಯದ್ದಲ್ಲ. ಅದು ಕ್ರಿಸ್ತಪೂರ್ವದಲ್ಲಿಯೇ ಅಸ್ತಿತ್ವದಲ್ಲಿದದ್ದು. ಹೌದು, ಕ್ರಿ.ಪೂ ದಲ್ಲೇ ಪಂಚೆ ಉಡುತ್ತಿದ್ದ ಬಗ್ಗೆ ಅನೇಕ ಶಿಲಾಶಾಸನಗಳಲ್ಲಿ ಕೆತ್ತಲಾಗಿದೆ. ಸಿಂಧೂ ಕಣಿವೆ ನಾಗರಿಕತೆಯಲ್ಲಿ ಧೋತಿ ಧರಿಸುತ್ತಿದ್ದ ಬಗ್ಗೆ ಹಲವು ಉಲ್ಲೇಖಗಳಿವೆ. ಅಲ್ಲದೆ ಬ್ರಿಟಿಷ್ ಇಂಡಿಯನ್ ಮಿಲಿಟರಿಗೆ ನೇಮಕಗೊಂಡ ಸೈನಿಕರು ಪಂಚೆ ಧರಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತುಂಡು ಪಂಚೆ ಉಟ್ಟು ಭಾಗಿಯಾಗಿದ್ದ ಮಹಾತ್ಮ ಗಾಂಧೀಜಿ. ದೇವತೆಗಳು ಒಂದು ಬಗೆಯ ಪಂಚೆ, ದಾನವರು ತದ್ವಿರುದ್ಧ ಪಂಚೆ ಧರಿಸ್ತಿದ್ದ ನಂಬಿಕೆ ಇದೆ.
ಪಂಚೆ ಅನ್ನೋ ಹೆಸರು ಏಕೆ ಬಂತು?
ಸಾಮಾನ್ಯವಾಗಿ ಪಂಚೆ 5 ಮೀ. ಇರುತ್ತೆ. ಇದಕ್ಕಿಂತ ದೊಡ್ಡ ಪಂಚೆ ಬಳಕೆಯಲ್ಲಿಲ್ಲ. ಸಂಸ್ಕೃತದಲ್ಲಿ ಪಂಚ ಅಂದ್ರೆ 5 ಎಂದರ್ಥ. ಈ ಪದದಿಂದ ಪಂಚೆ ಎಂಬ ಹೆಸರು ಬಂದಿದೆ. ಅಲ್ಲದೆ ಸೊಂಟದ ಬಳಿ ಸಿಕ್ಕಿಸುವಾಗ 5 ಸುತ್ತು ಸುತ್ತೋದ್ರಿಂದಲೂ ಈ ಹೆಸರು ಬಂದಿದೆ. ಭಾರತದ ಎಲ್ಲಾ ರಾಜ್ಯಗಳಲ್ಲೂ ವಿವಿಧ ಹೆಸರಲ್ಲಿ ಪಂಚೆ ಧರಿಸುವ ಜನರಿದ್ದಾರೆ.
ಪಂಚೆಗಿರುವ ವಿವಿಧ ಹೆಸರು:
ತೆಲುಗಿನಲ್ಲಿ ಪಂಚ, ತಮಿಳಿನಲ್ಲಿ ವೇಷ್ಟಿ, ಮಲಯಾಳಂನಲ್ಲಿ ಮುಂಡು, ಮರಾಠಿಯಲ್ಲಿ ಧೋತರ್, ಕೊಂಕಣಿಯಲ್ಲಿ ಅಂಗೋಸ್ತರ್, ಬಂಗಾಳಿಯಲ್ಲಿ ಧುತಿ, ಪಂಜಾಬ್ನಲ್ಲಿ ಲಾಚಾ, ಬಿಹಾರದಲ್ಲಿ ಮರ್ದಾನಿ, ಗುಜರಾತಿಯಲ್ಲಿ ಧೋತಿ ಎಂದು ಕರೆಯುತ್ತಾರೆ.
ಇನ್ನು ಪಂಚೆ ಕೇವಲ ಬಟ್ಟೆ ಮಾತ್ರವಲ್ಲದೇ, ಸಾಂಸ್ಕೃತಿಕ ಪ್ರಾಮುಖ್ಯತೆಯನ್ನ ಸೂಚಿಸುತ್ತೆ. ಈ ಪಂಚೆ ಧರಿಸಿಯೇ ಸಿಎಂ ಆಗಿ ಸಿದ್ದರಾಮಯ್ಯ, ಪಿಎಂ ಆಗಿ ದೇವೇಗೌಡರ ಪದಗ್ರಹಣ ಮಾಡಿದ್ರು. ಈಗಿನ ಪ್ರಧಾನಿ ನರೇಂದ್ರ ಮೋದಿಯೂ ದಕ್ಷಿಣ ಭಾರತಕ್ಕೆ ಬಂದಾಗ ಪಂಚೆ ಧರಿಸ್ತಾರೆ. ಈಗಲೂ ಕೆಲ ದೇವಸ್ಥಾನಗಳಲ್ಲಿ ಪಂಚೆ ಧರಿಸಿದ್ರಷ್ಟೇ ಆಲಯ ಪ್ರವೇಶಕ್ಕೆ ಅನುಮತಿ ಇದೆ. ಅಷ್ಟೇ ಯಾಕೆ ವರನಟ ಡಾ. ರಾಜಕುಮಾರ್ ಕೂಡ ಯಾವಾಗಲೂ ಪಂಚೆಯನ್ನೇ ಧರಿಸುತ್ತಿದ್ದರು.