7th Pay Commission : 7ನೇ ವೇತನ ಆಯೋಗ ಜಾರಿ- ಆಗಸ್ಟ್ 1 ರಿಂದ ಸರ್ಕಾರಿ ನೌಕರರಿಗೆ ಸಿಗೋ ಸಂಬಳ ಎಷ್ಟು, ಸೌಲಭ್ಯಗಳೇನು?
7th Pay Commission: ರಾಜ್ಯ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಆಗಸ್ಟ್ 1 ರಿಂದಲೇ ಸರ್ಕಾರಿ ನೌಕರರಿಗೆ 7 ವೇತನ ಆಯೋಗ ಜಾರಿಯಾಗುವಂತೆ ಸಿಎಂ ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದಾರೆ. ಹೌದು, 7ನೇ ವೇತನ ಆಯೋಗದ (7th Pay Commission) ಶಿಫಾರಸ್ಸು ಜಾರಿಗೊಳಿಸಲು ಸರ್ಕಾರ (Karnataka Government) ತೀರ್ಮಾನಿಸಿದ್ದು ಆಗಸ್ಟ್ 1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಂಯ್ಯ(CM Siddaramaiah) ಪ್ರಕಟಿಸಿದ್ದಾರೆ. ಹಾಗಿದ್ರೆ 7ನೇ ವೇತನ ಆಯೋಗ ಜಾರಿ ಬಳಿಕ ಸರ್ಕಾರಿ ನೌಕರರಿಗೆ ಸಿಗೋ ಸಂಬಳ ಎಷ್ಟು, ಸೌಲಭ್ಯಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ವೇತನ ಆಯೋಗ ಮಾಡಿದ ಪ್ರಮುಖ ಶಿಫಾರಸ್ಸುಗಳು :
ಆಯೋಗದ ಶಿಫಾರಸು ಏನು?
ಸುಧಾಕರ್ ರಾವ್ ನೇತೃತ್ವದ ಏಳನೇ ವೇತನ ಆಯೋಗವು ಇದೇ ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 244 ಪುಟಗಳ ವರದಿಯನ್ನು ಸಲ್ಲಿಸಿತ್ತು. ಅಷ್ಟರಲ್ಲೇ ಲೋಕಸಭೆ ಚುನಾವಣೆ ಬಂದಿದ್ದರಿಂದಾಗಿ, ಈ ಕುರಿತು ನಿರ್ಣಯ ಕೈಗೊಂಡಿರಲಿಲ್ಲ. ಆರಂಭಿಕ ವೃಂದದ ನೌಕರರ ಕನಿಷ್ಠ ಮೂಲ ವೇತನ ತಿಂಗಳಿಗೆ ₹17 ಸಾವಿರ ಇದ್ದು, ಅದನ್ನು ಗರಿಷ್ಠ ₹27 ಸಾವಿರಕ್ಕೆ ಹಾಗೂ ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ ₹1,04,600 ಇದ್ದು, ಅದನ್ನು ₹1,67,200ಕ್ಕೆ ಪರಿಷ್ಕರಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 1:8.93ಕ್ಕೆ ಹೆಚ್ಚಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಈ ಶಿಫಾರಸು ಅನ್ವಯವಾಗಲಿದೆ. ಇವುಗಳ ವಿವರವಾದ ಮಾಹಿತಿ ಬಗ್ಗೆ ತಿಳಿಯೋಣ.
1. 7ನೇ ರಾಜ್ಯ ವೇತನ ಆಯೋಗವು ಶೇ.31 ತುಟ್ಟಿ ಭತ್ಯೆಯನ್ನು ವಿಲೀನಗೊಳಿಸುವ ಮೂಲಕ ಮತ್ತು ಶೇ.27.50ರಷ್ಟು ಫಿಟ್‌ಮೆಂಟ್ ಪ್ರಯೋಜನವನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ.17,000 ರಿಂದ ರೂ.27,000ಕ್ಕೆ ಪರಿಷ್ಕರಿಸುವುದು.
2. ವೇತನ ರಚನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ವೇತನದ ನಡುವೆ ಅಸ್ತಿತ್ವದಲ್ಲಿರುವ 1:8.86 ರ ಅನುಪಾತವನ್ನು ಹೆಚ್ಚು ಕಡಿಮೆ ಹಾಗೇ ಉಳಿಸಿಕೊಳ್ಳುವುದು ಮತ್ತು ಗರಿಷ್ಠ ವೇತನವನ್ನು 2,41,200 ರೂ.ಗೆ ನಿಗದಿಪಡಿಸುವುದು.
3. ಹೊಸ ವೇತನ ಶ್ರೇಣಿಗಳನ್ನು ದಿನಾಂಕ: 01.07.2022 ರಿಂದ ಕಾಲ್ಪನಿಕವಾಗಿ ಅನ್ವಯಿಸುತ್ತದೆ. ಅನುಷ್ಠಾನಗೊಳಿಸುವ ನೈಜ್ಯ ದಿನಾಂಕವನ್ನು ರಾಜ್ಯ ಸರ್ಕಾರವು ನಿರ್ಧರಿಸುವುದು.
4. ನೌಕರರ ಕುಟುಂಬದ ಕನಿಷ್ಠ ಬಳಕೆ ವೆಚ್ಚದ ಲೆಕ್ಕಾಚಾರಕ್ಕಾಗಿ ಬಳಸಲಾಗುವ ಅಕ್ರೋಯ್ತಾಸೂತ್ರವನ್ನು ಚಾಲ್ತಿಯಲ್ಲಿರುವ ‘1’ ಮತ್ತು ‘0.8’, ರ ಪ್ರಮಾಣದ ಬದಲಿಗೆ ಪ್ರಾತಿನಿಧಿಕ ಕುಟುಂಬದವಯಸ್ಕ ಪುರುಷ ಮತ್ತು ಮಹಿಳಾ ಸದಸ್ಯರಿಗೆ ‘1’ ಸಮಾನ ಪ್ರಮಾಣವನ್ನು ನೀಡುವ ಮೂಲಕ, ಎರಡೂ ಲಿಂಗಗಳನ್ನು ಸಮಾನವಾಗಿ ಪರಿಗಣಿಸಿ, ಸ್ವಲ್ಪ ಮಟ್ಟಿಗೆ ಮಾರ್ಪಡಿಸಲಾಗಿದೆ.
5. ಪರಿಷ್ಕೃತ ಪ್ರತ್ಯೇಕ (Individual) ವೇತನ ಶ್ರೇಣಿಗಳೊಂದಿಗೆ, ಪರಿಷ್ಕೃತ ಮುಖ್ಯ ಶ್ರೇಣಿಯನ್ನು ರೂಪಿಸಲಾಗಿದೆ. ಚಾಲ್ತಿಯಲ್ಲಿರುವ ರೂ.400ರಿಂದ ರೂ.3,100ರ ಬದಲಿಗೆ ವಾರ್ಷಿಕ ಬಡ್ತಿ ದರಗಳು ಮುಖ್ಯ ಶ್ರೇಣಿಯಾದ್ಯಂತ ರೂ.650 ರಿಂದ ರೂ.5,000 ವರೆಗೆ ಆಗಿರುತ್ತದೆ.
6. ಪ್ರಸ್ತುತ ಜಾರಿಯಲ್ಲಿರುವಂತೆ, ಒಂದು ಕ್ಯಾಲೆಂಡರ್ ವರ್ಷದಲ್ಲಿ 1ನೇ ಜನವರಿ ಅಥವಾ 1ನೇ ಜುಲೈನಲ್ಲಿ ವಾರ್ಷಿಕ ಬಡ್ತಿ ದರಗಳನ್ನು ಮಂಜೂರು ಮಾಡುವುದನ್ನು ಮುಂದುವರುಸಲು ಆಯೋಗವು ಶಿಫಾರಸು ಮಾಡುತ್ತದೆ.
7. ಕೇಂದ್ರದ ತುಟ್ಟಿ ಭತ್ಯೆ ಸೂತ್ರ ಮತ್ತು ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸಲಾಗುತ್ತದೆ. ದಿನಾಂಕ: 01.07.2022 ರಂತೆ 361.704 ಸೂಚ್ಯಂಕ ಮಟ್ಟದಲ್ಲಿ ಸಂಪೂರ್ಣವಾಗಿ ತಟಸ್ಥಗೊಂಡಿರುವ ತುಟ್ಟಿ ಭತ್ಯೆಯೊಂದಿಗೆ, ದಿನಾಂಕ: 01.07.2022 ರಿಂದ, ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ, ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಬೇಕಾದ ತುಟ್ಟಿಭತ್ಯೆಯು ಪರಿಷ್ಕೃತ ಮೂಲ ವೇತನದ ಶೇ.0.722 ರಷ್ಟು ಆಗಿರುತ್ತದೆ.
8. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಯ ವೇತನ ಶ್ರೇಣಿಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕರಿಸಿದ ರೀತಿಯಲ್ಲಿಯೇ ಪರಿಷ್ಕರಿಸಬೇಕು.
9. ರಾಜ್ಯ ಸರ್ಕಾರವು, ಕೇಂದ್ರದ ವೇತನ ರಚನೆಯನ್ನು ಅಳವಡಿಸಿಕೊಳ್ಳಲು ಒಂದು ವಿಧಾನವನ್ನು ಆಯೋಗವು ರೂಪಿಸಿದೆ. ಆದಾಗ್ಯೂ ಪ್ರಸ್ತುತ, ರಾಜ್ಯ ಸರ್ಕಾರವು ಮುಖ್ಯ ಶ್ರೇಣಿ ಮತ್ತು ವಿಭಜಿತ ಪ್ರತ್ಯೇಕ ವೇತನ ಶ್ರೇಣಿಗಳನ್ನು ಒಳಗೊಂಡಿರುವ ಅಸ್ತಿತ್ವದಲ್ಲಿರುವ ವೇತನದ ಮಾದರಿಯನ್ನು ರಾಜ್ಯ ಸರ್ಕಾರವು ಉಳಿಸಿಕೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದಿನ ವೇತನವನ್ನು ಪರಿಷ್ಕರಿಸಿದಾಗ ರಾಜ್ಯ ಸರ್ಕಾರವು ಕೇಂದ್ರೀಯ ವೇತನ ರಚನೆಯ ಆಧಾರದ ಮೇಲೆ ಪರ್ಯಾಯ ರಚನೆಯನ್ನು ಅಳವಡಿಸಿಕೊಳ್ಳಲು ಸೂಕ್ತ ಸಮಯವಾಗಿರುತ್ತದೆ.
10. ಮಾಸಿಕ ಪಿಂಚಣಿ ಪ್ರಮಾಣವು ಅಂತಿಮವಾಗಿ ಪಡೆದ ಮೂಲ ವೇತನದ ಶೇ.50ರಷ್ಟರಲ್ಲಿಯೇ ಮುಂದುವರಿಯುತ್ತದೆ ಮತ್ತು ಕುಟುಂಬ ಪಿಂಚಣಿಯು ಅಂತಿಮವಾಗಿ ಪಡೆದ ಮೂಲ ವೇತನದ ಶೇ.30ರಷ್ಟು ಮುಂದುವರಿಯುತ್ತದೆ. ಅದರಂತೆ, ಕನಿಷ್ಠ ಪಿಂಚಣಿಯನ್ನು ರೂ.13,500 (ಕನಿಷ್ಠ ವೇತನ ರೂ. 27,000ರ ಶೇ.50 ರಷ್ಟು) ಮತ್ತು ಗರಿಷ್ಠ ಪಿಂಚಣಿಯನ್ನು ರೂ.1,20,600 (ಗರಿಷ್ಠ ರೂ.2,41,200 ವೇತನದ ಶೇ.50 ರಷ್ಟು) ಪರಿಷ್ಕರಿಸುವುದು.
11. 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ.10 ರಷ್ಟನ್ನು ಆಯೋಗವು ಶಿಫಾರಸು ಮಾಡುತ್ತದೆ.
12. ಆಯೋಗವು ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರನ್ನು ಒಳಗೊಳ್ಳುವ ಉದ್ದೇಶಿತ “ಸಂಧ್ಯಾಕಿರಣ” ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಒತ್ತಾಯಿಸುತ್ತದೆ ಮತ್ತು ಈ ಮಧ್ಯೆ, ರಾಜ್ಯ ಸರ್ಕಾರವು ಈ ಯೋಜನೆಯ ಅನುಷ್ಠಾನವನ್ನು ಪ್ರಾರಂಭಿಸುವವರೆಗೆ ಎಲ್ಲಾ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ವೈದ್ಯಕೀಯ ಭತ್ಯೆಯಾಗಿ ತಿಂಗಳಿಗೆ ರೂ.500 ಪಾವತಿಸುವುದು.
13. ಪಿಂಚಣಿದಾರರು ಆತ ಅಥವಾ ಆಕೆಯು ಮರಣದ ಹೊಂದಿದಲ್ಲಿ, ಅವರ ಅಂತ್ಯಕ್ರಿಯೆ ವೆಚ್ಚಗಳನ್ನು ಭರಿಸಲು ರೂ.10,000 ಗಳ ಮೊತ್ತವನ್ನು ಪಿಂಚಣಿದಾರರ ನಾಮ ನಿರ್ದೇಶಿತನಿಗೆ ಪಾವತಿಸುವುದು.
14. ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು, 2002ರಲ್ಲಿ ಮಹಿಳಾ ಸರ್ಕಾರಿ ನೌಕರರು / ಪಿಂಚಣಿದಾರರು ತಮ್ಮ ಮಗು / ಮಕ್ಕಳನ್ನು ಕೆಲವು ಸಂದರ್ಭಗಳಲ್ಲಿ ಸಂಗಾತಿಯ ಬದಲಿಗೆ ಕುಟುಂಬ ಪಿಂಚಣಿಗೆ ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಬಹುದು ಎಂದು ಆಯೋಗವು ಪ್ರಸ್ತಾಪಿಸಿದೆ.
15. ಎ, ಬಿ ಮತ್ತು ಸಿ ಸ್ಥಳಗಳ ಮೂರು ವರ್ಗಗಳಿಗೆ ಅಸ್ತಿತ್ವದಲ್ಲಿರುವ ಶೇ.24, ಶೇ.16 ಮತ್ತು ಶೇ.8 ರಿಂದ ಪರಿಷ್ಕೃತ ಮೂಲ ವೇತನದ ಕನಿಷ್ಠ ಶೇ.20, ಶೇ.15 ಮತ್ತು ಶೇ. 7.5 ಕ್ಕೆ ಅನುಕ್ರಮವಾಗಿ ಮನೆ ಬಾಡಿಗೆ ದರಗಳನ್ನು ಪರಿಷ್ಕರಿಸಲಾಗಿದೆ. ಶಿಫಾರಸು ಮಾಡಲಾದ ಪರಿಷ್ಕೃತ ವೇತನ ಶ್ರೇಣಿಗಳ ಆಧಾರದ ಮೇಲೆ, ಇದು 3 ವರ್ಗಗಳಿಗೆ ತಿಂಗಳಿಗೆ ರೂ.1,320, ರೂ.1,330 ಮತ್ತು ರೂ.690 ಅನುಕ್ರಮವಾಗಿ ಹೆಚ್ಚಳವಾಗಿರುವುದರಿಂದ ನಿಶ್ಚಳವಾಗಿ ಮನೆ ಬಾಡಿಗೆ ಭತ್ಯೆಯಲ್ಲಿ ಸುಮಾರು ಶೇ.40 ರಷ್ಟು ಹೆಚ್ಚಳವಾಗಿದೆ.
16. ಸೋಲಾರ್ ವಾಟರ್ ಹೀಟರ್, ಸೋಲಾರ್ ಕುಕ್ಕರ್. ಮೊಪೆಡ್ ಮತ್ತು ಮೋಟಾರು ವಾಹನಗಳ ದುರಸ್ತಿ ಮತ್ತು ಉಪಕರಣಗಳಿಗೆ ಮುಂಗಡಗಳನ್ನು ಸ್ಥಗಿತಗೊಳಿಸುವುದು.
17. ವೃಂದ ಎ ನೌಕರರಿಗೆ ಗರಿಷ್ಠ ರೂ.65 ಲಕ್ಷ ಮತ್ತು ಇತರ ನೌಕರರಿಗೆ ರೂ.40 ಲಕ್ಷಗಳ ಗೃಹ ನಿರ್ಮಾಣ ಭತ್ಯೆಯನ್ನು ಪರಿಷ್ಕರಿಸಿದೆ. ನೌಕರರ ಸೇವಾವಧಿಯಲ್ಲಿ ರಜೆ ಪ್ರಯಾಣ ಭತ್ಯೆಯ ಪ್ರಯೋಜನವನ್ನು ಎರಡು ಬಾರಿಯಿಂದ ಮೂರು ಬಾರಿಗೆ ಹೆಚ್ಚಿಸುವುದು.
18. ಸರ್ಕಾರಿ ನೌಕರರ ತರಬೇತಿಯ ಗುಣಮಟ್ಟವನ್ನು ಸುಧಾರಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಗುರುತಿಸಿ, ತರಬೇತಿ ಸಂಸ್ಥೆಗಳಲ್ಲಿನ ಅಧ್ಯಾಪಕರ ಗುಣಮಟ್ಟವನ್ನು ಹೆಚ್ಚಿಸಲು, ಎಲ್ಲ ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ನಿಯೋಜಿತ ಅಥವಾ ಅಧ್ಯಾಪಕರಾಗಿ ನೇಮಕಗೊಂಡ ನೌಕರರಿಗೆ ಅಸ್ತಿತ್ವದಲ್ಲಿರುವ ವಿಶೇಷ ಭತ್ಯೆಯನ್ನು ಶೇ.25ಕ್ಕೆ ಹೆಚ್ಚಿಸುವುದು.
19. ಪೋಷಕರು ಅಥವಾ ಅತ್ತೆ/ಮಾವಂದಿರು ಅಥವಾ ಕುಟುಂಬದ ಹಿರಿಯರು ಅಥವಾ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಸಣ್ಣ ಮಕ್ಕಳನ್ನು ಆರೈಕೆ ಮಾಡಲು ನೌಕರರಿಗೆ ಆರೈಕೆ ರಜೆ ಎಂಬ ಹೊಸ ಪ್ರಯೋಜನವನ್ನು ಒದಗಿಸಬೇಕೆಂದು ಹಾಗೂ ರಜೆಯ ಅವಧಿಯಲ್ಲಿ ಶೇ.50 ರಷ್ಟು ವೇತನದೊಂದಿಗೆ ಈ ರಜೆಯ ಗರಿಷ್ಠ ಅವಧಿಯು 180 ದಿನಗಳಿಗೆ (6 ತಿಂಗಳು) ನಿಗದಿಪಡಿಸಲು ಆಯೋಗವು ಶಿಫಾರಸು ಮಾಡಿದೆ.
20. ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ಸೇವೆಗೆ ಸೇರುವ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯ ಅವಧಿಯಲ್ಲಿ ಇರುವವರಿಗೆ 18 ವಾರಗಳ ಹೆರಿಗೆ ರಜೆಯನ್ನು ಶಿಫಾರಸು ಮಾಡಿದೆ.
ಎಷ್ಟು ನೌಕರರಿಗೆ ಅನುಕೂಲ?
ವೇತನ ಆಯೋಗದ ಅಂತಿಮ ಶಿಫಾರಸ್ಸುಗಳು ಜಾರಿಯಿಂದ ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಲ್ಲಿ 2.50 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರು ಸೇರಿ ಒಟ್ಟು 12.20 ಲಕ್ಷ ನೌಕರ ಕುಟುಂಬಗಳಿಗೆ ಅನುಕೂಲವಾಗಲಿದೆ.
ಸರ್ಕಾರಕ್ಕೆ ಹೊರೆ ಎಷ್ಟು?
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅಧ್ಯಕ್ಷತೆಯ ವೇತನ ಆಯೋಗದ ಅಂತಿಮ ವರದಿಯಲ್ಲಿ ಶೇಕಡಾ 27.5 ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸು ಜಾರಿಯಿಂದ ವಾರ್ಷಿಕ 18,000 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಹಿಂದಿನ ಸರ್ಕಾರ ವು ನೌಕರ ಸಮುದಾಯದ ಒತ್ತಡದ ಹಿನ್ನೆಲೆಯಲ್ಲಿಆಯೋಗದ ಅಂತಿಮ ವರದಿ ನಿರೀಕ್ಷಿಸಿ ಶೇಕಡಾ 17 ಮಧ್ಯಂತರ ಪರಿಹಾರ ನೀಡಿತ್ತು ಮತ್ತು ಅದಕ್ಕಾಗಿ 11,000 ಕೋಟಿ ರೂ. ಭರಿಸಲಾಗುತ್ತಿದೆ. ಸದ್ಯ ಅಂತಿಮವಾಗಿ ಬಾಕಿ ಶೇಕಡಾ 10.5ರಷ್ಟು ವೇತನ ಹೆಚ್ಚಳ ಮಾಡಿದರೆ ಮತ್ತು ಭತ್ಯೆ ಪರಿಷ್ಕರಣೆಗಳನ್ನು ಒಳಗೊಂಡರೆ ಒಟ್ಟಾರೆ 7,500 ಕೋಟಿ ರೂ. ಅಗತ್ಯವಿದೆ. ಪ್ರಸ್ತುತ ಮಾಸಿಕ ಖರ್ಚು -ವೆಚ್ಚ ಭರಿಸುವುದೇ ಕಷ್ಟವಾಗಿರುವಾಗ ಸದ್ಯಕ್ಕೆ ಈ ಹೆಚ್ಚುವರಿ ವೆಚ್ಚ ಭರಿಸಲು ಸಾಧ್ಯವಿಲ್ಲಎಂಬುದು ಹಣಕಾಸು ಇಲಾಖೆ ನಿಲುವಾಗಿದೆ.