Uttarpradesh: ತಾಯಿ ಮೇಲೆ ಅತ್ಯಾಚಾರ! 30 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಮಗ!
Uttarpradesh: 29 ವರ್ಷಗಳ ಹಿಂದೆ ಅಪ್ರಾಪ್ತಳನ್ನು ಅತ್ಯಾಚಾರ (Sexual Assault) ಮಾಡಿ ಹುಟ್ಟಿದ ಮಗುವನ್ನು ಆಕೆಯಿಂದ ದೂರ ಮಾಡಿ ವಯಸ್ಸಿಗೆ ಬಂದ ಬಳಿಕ ಆಕೆಗೆ ಮದುವೆ ಮಾಡಿಸಿದರು. ಆದರೆ ಮದುವೆಯಾಗಿ ಒಂದು ಮಗು ಹುಟ್ಟಿದ ಬಳಿಕ ಆಕೆ ಬಾಲ್ಯದಲ್ಲಿ ಅತ್ಯಾಚಾರ ನಡೆದಿದೆ ಎಂದು ತಿಳಿದ ಗಂಡನ ಮನೆಯವರು ಪುಟ್ಟ ಕಂದನೊಂದಿಗೆ ಆಕೆಯನ್ನು ಮನೆಯಿಂದ ಹೊರಗೆ ದಬ್ಬಿದ್ದಾರೆ. ಆದರೆ ನಂತರ ಏನಾಯಿತು ನೀವೇ ನೋಡಿ. ಇದು ಯಾವುದೋ ಸಿನಿಮಾ ಕಥೆಯಲ್ಲ. ಉತ್ತರ ಪ್ರದೇಶದ (uttarpradesh) ಹಳ್ಳಿಯೊಂದರಲ್ಲಿ ನಡೆದ ಸತ್ಯ ಘಟನೆ.
ಈ ಘಟನೆ ಉತ್ತರ ಪ್ರದೇಶದ (Uttarpradesh) ಹರ್ದೋಯ್ ಜಿಲ್ಲೆಯ ಮಹಿಳೆಯೊಬ್ಬಳ ಕಥೆ. ತಾಯಿ ತನ್ನ ಮಗನೊಂದಿಗೆ ಮೂರು ದಶಕಗಳ ಬಳಿಕ ನ್ಯಾಯಕ್ಕಾಗಿ ಹೋರಾಡಿದ ಘಟನೆ ಇದು. ಹರ್ದೋಯ್ ಜಿಲ್ಲೆಯ ಹಳ್ಳಿಯೊಂದರ ಬಡ ಕುಟುಂಬದ ಐವರು ಒಡಹುಟ್ಟಿದವರಲ್ಲಿ ಒಬ್ಬರಾದ ಮಹಿಳೆಯನ್ನು ಓದಲು ಶಹಜಹಾನ್‌ಪುರದಲ್ಲಿರುವ ತನ್ನ ಅಕ್ಕನ ಮನೆಗೆ ಕಳುಹಿಸಲಾಯಿತು.
ಶಹಜಹಾನ್‌ಪುರಕ್ಕೆ ಬಂದ ಬಾಲಕಿಯನ್ನು ಹೊಸ ಶಾಲೆಗೆ ಸೇರಿಸಲಾಯಿತು. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅಕ್ಕನ ಗಂಡ ಕರ್ತವ್ಯ ನಿಮಿತ್ತ ದೂರದೂರದ ಪ್ರದೇಶಗಳಿಗೆ ಹೋಗುತ್ತಿದ್ದರು. ಒಂದು ದಿನ ಅಕ್ಕ ತಂಗಿ ಇಬ್ಬರು ಮನೆಯಲ್ಲಿ ಇದ್ದಾಗ ಇಬ್ಬರು ಮನೆಗೆ ನುಗ್ಗಿದರು. ಅಕ್ಕನ ಮೇಲೆ ಹಲ್ಲೆ ನಡೆಸಿ ಆಕೆಯ ಎದುರೇ ತಂಗಿಯ ಮೇಲೆ ಅತ್ಯಾಚಾರ ನಡೆಸಿದರು. ಈ ಕುರಿತು ಬಾಯಿಬಿಟ್ಟರೆ ತಂಗಿ ಮತ್ತು ಆಕೆಯ ಪತಿಯನ್ನು ಕೊಲ್ಲುವುದಾಗಿ ಬೆದರಿಸಿದರು. ಬಾಲಕಿ ತನಗಾದ ಅನ್ಯಾಯವನ್ನು ಮರೆಯಲು ಪ್ರಯತ್ನಿಸಿದರೂ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳಿಬ್ಬರು ಮತ್ತೆ ಮರಳಿ ಬರುವುದು ವಾಡಿಕೆಯಾಯಿತು. ಈ ನಡುವೆ ಬಾಲಕಿ ತೀವ್ರವಾಗಿ ಅನಾರೋಗ್ಯಕ್ಕೆ ಈಡಾದಾಗ ಅಕ್ಕ ತಂಗಿಯನ್ನು ವೈದ್ಯರ ಬಳಿಗೆ ಕರೆದೊಯ್ದರು. ಆಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿಯಿತು. ಬಳಿಕ ಅವರು ತಾಯಿಗೆ ಎಲ್ಲ ವಿಷಯವನ್ನು ತಿಳಿಸಿದರು.
ನಂತರ ಬಾಲಕಿಯ ಅಕ್ಕನ ಗಂಡ ಮತ್ತು ಅಕ್ಕ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿದರು. ಅವರಲ್ಲಿ ಒಬ್ಬ ಪೊಲೀಸರನ್ನು ಸಂಪರ್ಕಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅದಕ್ಕಾಗಿ ಆ ರಾತ್ರಿಯೇ ಮನೆ ಖಾಲಿ ಮಾಡಿ ಬೇರೆ ನಗರಕ್ಕೆ ಹೊರಟರು.
ಇನ್ನು ತಂಗಿಯೂ ಗರ್ಭಾವಸ್ಥೆಯು ಮುಕ್ತಾಯದ ಹಂತದಲ್ಲಿ ಇದ್ದುದರಿಂದ ಹೆರಿಗೆ ಮಾಡಿಸಲಾಯಿತು. ಮಗುವಿನ ಬಗ್ಗೆ ಕೇಳಿದರೆ ಇಡೀ ಕುಟುಂಬ ಆತ್ಮಹತ್ಯೆ ಮಾಡುವುದಾಗಿ ಬಾಲಕಿಗೆ ತಾಯಿ ಹೇಳಿದ್ದರು. ಹೀಗಾಗಿ ಬಾಲಕಿ ತಾಯಿಯೊಂದಿಗೆ ಮಗುವಿಲ್ಲದೆ ಹಳ್ಳಿಗೆ ಮರಳಿ ಬಂದಳು.
ಆದರೆ ಹಳ್ಳಿಯಲ್ಲಿ ಎಲ್ಲವೂ ಚೆನ್ನಾಗಿ ಇರುತ್ತದೆ ಎಂದು ಭಾವಿಸಿದ್ದ ಅವರಿಗೆ ಅಲ್ಲೂ ಸಾಕಷ್ಟು ಸವಾಲುಗಳು ಎದುರಾಯಿತು. ಹೆರಿಗೆಯ ಅನಂತರ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಿದ ಗ್ರಾಮಸ್ಥರು ಬಾಲಕಿಯ ಕುಟುಂಬವನ್ನು ಬಹಿಷ್ಕರಿಸಿದರು. ಇದರಿಂದ ಅವರು ತಮ್ಮ ಪೂರ್ವಜರ ಗ್ರಾಮವನ್ನು ತೊರೆಯಬೇಕಾಯಿತು.
ನಂತರ 2000ರಲ್ಲಿ ವಯಸ್ಕಳಾದ ಬಾಲಕಿಗೆ ವಾರಣಾಸಿಯ ಹುಡುಗನ ಜೊತೆ ಮದುವೆ ಮಾಡಲಾಯಿತು. ಗಂಡನ ಮನೆಗೆ ಬಂದಾಗ ಅವಳ ಎಲ್ಲಾ ದುಃಖಗಳು ಕೊಂಚ ಕೊನೆಯಾದಂತೆ ಇತ್ತು.
ಆದರೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಒಂದು ದಿನ ಅತ್ತೆಯವರಿಗೆ ವಿಷಯ ತಿಳಿದು ಮಗನನ್ನು ಕರೆದುಕೊಂಡು ಪತಿಯನ್ನು ಬಿಟ್ಟು ಹೋಗುವಂತೆ ಹೇಳಿದರು. ಆದ್ದರಿಂದ 2007ರಲ್ಲಿ ಆಕೆಯ ಮೊದಲ ಮಗುವಿನೊಂದಿಗೆ ಲಕ್ನೋಗೆ ತೆರಳಿ ಹೊಸ ಬದುಕು ಕಟ್ಟಿಕೊಂಡಳು. ಒಂದು ದಿನ ಒಬ್ಬ ಯುವಕ ಆಕೆಯನ್ನು ಹುಡುಕಿಕೊಂಡು ಬಂದಾಗ ಆತನೇ ಆಕೆಯ ಮೊದಲ ಮಗ ಎಂಬುದು ಗೊತ್ತಾಯಿತು. ಬಳಿಕ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸಲು ಪ್ರಾರಂಭಿಸಿದರು. ಮಕ್ಕಳಿಬ್ಬರು ಬೆಳೆದು ದೊಡ್ಡವರಾಗಿ ಕೆಲಸ ಕಂಡುಕೊಂಡರು.
2019ರಲ್ಲಿ ದೊಡ್ಡ ಮಗ ಬಂದು ತಾಯಿಯ ಹಿಂದಿನ ಕಥೆಯನ್ನು ಕೇಳಿ ನಿರಂತರ ಹುಡುಕಾಟದ ಎರಡು ವರ್ಷಗಳ ಬಳಿಕ ಪೊಲೀಸರ ಸಹಾಯದಿಂದ ಅಪರಾಧಿಗಳನ್ನು ಪತ್ತೆಹಚ್ಚಿ, ತಾಯಿ ಮಗ ಇಬ್ಬರೂ ಸೇರಿ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಆರಂಭದಲ್ಲಿ ಇವರ ಬಳಿ ಯಾವುದೇ ಸಾಕ್ಷ್ಯ ಇರದೇ ಇದ್ದುದರಿಂದ ಕೊನೆಗೆ ಡಿಎನ್ ಎ ಪರೀಕ್ಷೆ ನಡೆಸಲಾಯಿತು. ಆರೋಪಿಗಳ ವಿರುದ್ಧ ಇದು ಬಲವಾದ ಸಾಕ್ಷಿಯಾಯಿತು.
ಕೊನೆಗೆ 2024ರ ಮೇ 20ರಂದು 1994 ಮತ್ತು 1996ರ ನಡುವೆ ಮಹಿಳೆಯು ಕೇವಲ 12 ವರ್ಷದವಳಿದ್ದಾಗ ಎರಡು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಕ್ಕಾಗಿ ಮೊಹಮ್ಮದ್ ರಾಜಿ ಮತ್ತು ಹಸನ್ ನಾಕಿ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಷಹಜಹಾನ್‌ಪುರ ಸೆಷನ್ಸ್ ನ್ಯಾಯಾಲಯವು ವಿಧಿಸಿತು. ನ್ಯಾಯಾಲಯವು ಇಬ್ಬರಿಗೂ ತಲಾ 10,000 ರೂ ದಂಡವನ್ನು ವಿಧಿಸಿತು ಎಂದು ತಿಳಿದು ಬಂದಿದೆ.