Forest and Revenue Joint Survey: ಅರಣ್ಯ ಸುತ್ತ-ಮುತ್ತ ಕೃಷಿ ಮಾಡೋ ರೈತರಿಗೆ ಭೂಮಿ ಮಂಜೂರು ; ಸದ್ಯದಲ್ಲೇ ಈ ಜಿಲ್ಲೆಗಳ ರೈತರಿಗೆ ಹಕ್ಕು ಪತ್ರ ವಿತರಣೆ !!

Forest and Revenue Joint Survey: ಅರಣ್ಯದ ಅಕ್ಕ-ಪಕ್ಕ ಜಮೀನು ಹೊಂದಿ, ಕೃಷಿ ಮಾಡಿಕೊಂಡು ಜೀವನ ನಡೆಸುವ ರೈತರು ಅರಣ್ಯ ಇಲಾಖೆಯಿಂದ ಒಂದಲ್ಲಾ ಒಂದು ತೊಂದರೆಗೆ ಒಳಗಾಗುತ್ತಿದ್ದಾರ. ಅವರ ಕಷ್ಟ ಯಾರಿಗೂ ಬೇಡವಾಗಿದೆ. ಆದರೀಗ ಇಂತಹ ರೈತರಿಗೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ(Revenue Minister Krishm Bhairegowda)ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೌದು, ಅನೇಕ ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ರೈತರು ನಿಟ್ಟುಸಿರುಬಿಡುವ ಸಂದರ್ಭ ಹತ್ತಿರವಾಗಿದೆ. ಸಚಿವರು ಅರಣ್ಯ ಮತ್ತು ಕಂದಾಯ ಜಂಟಿ ಸರ್ವೇ(Forest and Revenue Joint Survey) ನಡೆಸುವ ಮೂಲಕ ಈ ರೈತರ ಸಮಸ್ಯೆಗೆ ಅಂತ್ಯ ಹಾಕುವ ಭರವಸೆ ನೀಡಿದ್ದಾರೆ. ‘ರಾಜ್ಯದಲ್ಲಿ ಒಂದು ವೇಳೆ ಕಂದಾಯ ಭೂಮಿಯನ್ನು ತಪ್ಪಾಗಿ ಅರಣ್ಯ ಇಲಾಖೆ ನೋಟಿಫೈ ಮಾಡಿರುವುದು ಜಂಟಿ ಸರ್ವೆ ಅಥವಾ ಡ್ರೋನ್ ಸರ್ವೆಯಿಂದ ಖಚಿತವಾದಲ್ಲಿ ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು, ಶೀಘ್ರದಲ್ಲಿ ರೈತರಿಗೆ ಆ ಜಮೀನನ್ನು ಮರಳಿ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಅಂದಹಾಗೆ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರ ಜೊತೆ ಈ ಕುರಿತು ಚರ್ಚೆ ನಡೆಸಲಾಗಿದೆ. ಜಂಟಿ ಸರ್ವೆ ಬಳಿಕ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಗಡಿಗಳನ್ನು ನಿಖರವಾಗಿ ಗುರುತಿಸಲಾಗುತ್ತದೆ. ಗಡಿ ಗುರುತಿಸಿದ ಬಳಿಕ ಅಂತಹ ಜಮೀನಿನಲ್ಲಿ ಒಂದು ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ, ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಲಾಗುತ್ತದೆ. ಫಾರಂ-57 ಅಡಿಯಲ್ಲಿ ಅರ್ಹ ರೈತರು ಅರ್ಜಿ ಸಲ್ಲಿಸಿದ್ದರೆ, ಬಗರ್‌ಹುಕುಂ ಆ್ಯಪ್ ಮೂಲಕ ಭೂ ಮಂಜೂರು ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.

ಈ ಜಿಲ್ಲೆಯ ರೈತರಿಗೆ ಸದ್ಯದಲ್ಲೇ ಹಕ್ಕು ಪತ್ರ?

ಅರಣ್ಯದಂಚಿನ ರೈತರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಳೆದ ಚಳಿಗಾಲದ ಅಧಿವೇಶನದಲ್ಲೇ ಭರವಸೆ ನೀಡಿತ್ತು. ಆ ಪ್ರಕಾರ ಕಳೆದ ಫೆಬ್ರವರಿ 16ರಂದು ಸರಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿತ್ತು. ಅಂತೆಯೇ ಈ ಬೆನ್ನಲ್ಲೇ ಸರ್ವೇ ಕಾರ್ಯ ಭರದಿಂದ ಸಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ.

ಸರ್ವೇ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಸಚಿವರು ಕಳೆದ ಎರಡು ತಿಂಗಳುಗಳಿಂದ ಜಂಟಿ ಸರ್ವೆ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಭೂ ಮಾಪಕರು (ಸರ್ವೆಯರ್) ಹಾಗೂ ಪರವಾನಗಿ ಹೊಂದಿರುವ ಭೂ ಮಾಪಕರ ಸಹಾಯದಿಂದ ಸರ್ವೆ ಕೆಲಸ ಆರಂಭಿಸಲಾಗಿದೆ ಎಂದಿದ್ದಾರೆ.

ಜಿಲ್ಲಾವಾರು ಮಾಹಿತಿ

• ಚಾಮರಾಜನಗರ: ಜಿಲ್ಲೆಯಲ್ಲಿ ಒಟ್ಟು 28,45,964 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದ್ದು, ಈ ಪೈಕಿ 12,70,847 ಎಕರೆ ಭೂಮಿಯನ್ನು ಅಳತೆ ಮಾಡಲಾಗಿದೆ. 11,541 ಎಕರೆ ವಿಸ್ತೀರ್ಣದ ಭೂಮಿ ಅಳತೆಗೆ ಬಾಕಿ ಇದ್ದು ಕ್ರಮ ಜರುಗಿಸಲಾಗಿದೆ. ಈವರೆಗಿನ ಸರ್ವೆ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 7910 ಎಕರೆ ಕಂದಾಯ ಜಮೀನು ಇದ್ದು, ಇದನ್ನು ಅರಣ್ಯ ಇಲಾಖೆ ನೋಟಿಫಿಕೇಶನ್ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಈ ಜಮೀನನ್ನು ಡೀನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ’

• ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಅಧಿಸೂಚನೆಯಂತೆ ಪರಿಭಾವಿತ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 47,809.31 ಎಕರೆ. ಈ ಪೈಕಿ 21,662 ಎಕರೆ ಪ್ರದೇಶದ ಅಳತೆ ಕಾರ್ಯ ಮುಗಿದಿದ್ದು, 26,147 ಎಕರೆ ವಿಸ್ತೀರ್ಣದ ಪ್ರದೇಶ ಅಳತೆಗೆ ಕ್ರಮ ಜರುಗಿಸಲಾಗಿದೆ.

• ಕೊಡಗು : ಜಿಲ್ಲೆಯಲ್ಲಿ ಒಟ್ಟು ಪರಿಭಾವಿತ ಅರಣ್ಯ ಪ್ರದೇಶದ ಪೈಕಿ ಈವರೆಗೆ ಒಟ್ಟು 20,769 ಎಕರೆ ಭೂಮಿಯನ್ನು ಅಳತೆ ಮಾಡಲಾಗಿದೆ. ಉಳಿದ ಪ್ರದೇಶವನ್ನೂ ಶೀಘ್ರ ಅಳತೆಗೆ ಕ್ರಮವಹಿಸಲಾಗಿದೆ.

• ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯ ಪ್ರದೇಶದ ವಿಸ್ತೀರ್ಣ ಒಟ್ಟು 21983 ಎಕರೆ ಎಂದು ಗುರುತಿಸಲಾಗಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ 800 ಎಕರೆ ಜಮೀನಿನಲ್ಲಿ ಅಳತೆ ಕಾರ್ಯ ನಡೆಸಲಾಗಿದೆ.

• ಚಿಕ್ಕಮಗಳೂರು : ಜಿಲ್ಲೆಯಲ್ಲಿ 130927 ಎಕರೆ ವಿಸ್ತೀರ್ಣದ ಜಮೀನನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಗುರುತಿಸಿದ್ದು, ಈಗಾಗಲೇ 17 ಜನ ಭೂ ಮಾಪಕರನ್ನು ಸರ್ವೆ ಕೆಲಸಕ್ಕೆ ನಿಯೋಜಿಸಲಾಗಿದೆ. ಪ್ರಾಥಮಿಕವಾಗಿ 300 ಎಕರೆ ಪ್ರದೇಶದ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ: 

ರಾಜ್ಯಾದ್ಯಂತ ಪೋಡಿ, ಹದ್ದುಬಸ್ತು, ನ್ಯಾಯಾಲಯದಲ್ಲಿರುವ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆಯೂ ಭೂ ಮಾಪಕರ ಜವಾಬ್ದಾರಿ ಪ್ರಮುಖವಾದದ್ದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮೇಲ್ಕಾಣಿಸಿದ ಜಿಲ್ಲೆಗಳ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲೂ ಸಹ ಆದ್ಯತೆ ಮೇಲೆ ಶೀಘ್ರದಲ್ಲೇ ಜಂಟಿ ಸರ್ವೆ ಕೆಲಸಕ್ಕೆ ಹಂತಹಂತವಾಗಿ ಮುಂದಾಗುವಂತೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ” ಎಂದು ಸಚಿವರು ಹೇಳಿದ್ದಾರೆ.

1 Comment
Leave A Reply

Your email address will not be published.