Mangalore Loksabha: ನನ್ನ ಸ್ಪರ್ಧೆ ಮೋದಿಯ ವಿರುದ್ಧವಲ್ಲ ಬಿಜೆಪಿ ಅಭ್ಯರ್ಥಿಯ ವಿರುದ್ಧ – ಪದ್ಮರಾಜ್ ಜಾಣ ಹೇಳಿಕೆ
Mangaluru: ಲೋಕಸಭೆ ಸಮರಕ್ಕೆ ಇಡೀ ದೇಶ ಬಿರುಸಿನಿಂದ ಸಜ್ಜಾಗುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಹಂತಹಂತವಾಗಿ ಬಿಡುಗಡೆ ಮಾಡುತ್ತಾ ಅಚ್ಚರಿಯ ಮೇಲೆ ಅಚ್ಚರಿ ಮೂಡಿಸುತ್ತಿವೆ. ಈ ನಡುವೆ ಘೋಷಣೆಯಾದ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರವನ್ನೂ ಶುರು ಮಾಡಿದ್ದಾರೆ. ಬಿಜೆಪಿ ನಾಯಕರು ಮೋದಿಯನ್ನು ಮುಂದಿಟ್ಟುಕೊಂಡು, ಮೋದಿ ಹೆಸರೇಳಿ ವೋಟು ಕೇಳುತ್ತಿದ್ದರೆ ಕಾಂಗ್ರೆಸ್ನ ಹಾಗೂ ಇತರ ಪಕ್ಷಗಳ ನಾಯಕರು ಪ್ರತಿಸ್ಪರ್ಧಿಗಳು ಲೆಕ್ಕಕ್ಕೇ ಇಲ್ಲ ಎನ್ನುವಂತೆ, ತಮ್ಮ ಎದುರಾಳಿ ಮೋದಿಯೇ ಎನ್ನುವಂತೆ ನೇರವಾಗಿ ಮೋದಿಯನ್ನು ವಿರೋಧಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ. ಆದರೆ ಇದೆಲ್ಲದರ ನಡುವೆ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾದ ದಕ್ಷಿಣ ಕನ್ನಡದ ಮಂಗಳೂರು(Mangaluru) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ನಡೆಯೇ ವಿಭಿನ್ನವಾಗಿದೆ. ಕರಾವಳಿಯ ಯುವ ನಾಯಕ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ನನ್ನ ಸ್ಪರ್ಧೆ ಮೋದಿಯ ಎದುರು ಅಲ್ಲ, ನನ್ನ ಸ್ಪರ್ಧೆ ಏನಿದ್ದರೂ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ(Brijesh Chowta) ಎದುರು ಎಂದು ಹೇಳುವ ಮೂಲಕ ಜಾಣತನ ಮೆರೆದಿದ್ದಾರೆ.
ಇದನ್ನೂ ಓದಿ: ಕೋಟಾಗೆ ಹಿಂದಿ ಬರಲ್ಲ ಹೇಳಿಕೆ, ಜಯಪ್ರಕಾಶ್ ಹೆಗ್ಡೆ ಕನ್ನಡ ವಿರೋಧಿ ಎಂದು ಬಿಜೆಪಿ ಕಿಡಿ !
ಹೌದು, ಹಿಂದುತ್ವದ ಭದ್ರಕೋಟೆಯಾಗಿರುವ ಕರಾವಳಿಯಲ್ಲಿ ಯಾರೇ ಬಿಜೆಪಿ ಅಭ್ಯರ್ಥಿ ಆದರೂ ಅಲ್ಲಿ ಮೋದಿಯದ್ದೇ(PM Modi) ಅಧಿಪತ್ಯ. ಮೋದಿ ಮೋದಿ ಎನ್ನುತ್ತಲೇ ಜನ ಅಭ್ಯರ್ಥಿಗೆ ವೋಟು ನೀಡುವುದು. ಅಲ್ಲಿ ಅಭ್ಯರ್ಥಿ ಗೌಣ ಎನ್ನುವಷ್ಟರ ಮಟ್ಟಿಗೆ ಕರಾವಳಿ ಮೋದಿಮಯ. ಇಂದು ಇದು ಕರಾವಳಿಯಲ್ಲಿ ಮಾತ್ರವಲ್ಲ ದೇಶದ ಮುಕ್ಕಾಲು ಭಾಗಗಳಲ್ಲಿಯೂ ಇದನ್ನೇ ಕಾಣಲು ಸಾಧ್ಯ. ಜನರೆಲ್ಲರೂ ಮೋದಿ ಎನ್ನುವಾಗ, ಹಿಂದೂ, ಹಿಂದುತ್ವ ಎಂದು ಬೊಬ್ಬಿರಿಯುವಾಗ ಅವರನ್ನೆಲ್ಲ ಎದುರು ಹಾಕಿಕೊಂಡು ಚುನಾವಣೆ ಎದುರಿಸಲು ಸಾಧ್ಯವೇ ಹೇಳಿ ? ಅದರಲ್ಲೂ ಈಗ ರಾಜ್ಯದಲ್ಲಿ ಕೊಂಚ ಕಾಂಗ್ರೆಸ್ ಹವಾ ಇರುವಾಗ ಸ್ವಲ್ಪವಾದರೂ ಎಚ್ಚರಿಕೆಯ ಹೆಜ್ಜೆಯನ್ನು ಇಡಲೇ ಬೇಕು, ಚುನಾವಣಾ ತಂತ್ರವನ್ನು ಯೂಸ್ ಮಾಡಲೇ ಬೇಕು. ಆದರೆ ಇದನ್ನು ಯಾರೊಬ್ಬರೂ ಮಾಡುವುದಿಲ್ಲ. ಆದರೀಗ ದಕ್ಷಿಣ ಕನ್ನಡದ ಕಾಂಗ್ರೆಸ್(Congress)ಅಭ್ಯರ್ಥಿ, ಯುವ ನಾಯಕ ಪದ್ಮರಾಜ್ ಅವರು ಈ ಹೊಸ ಉಪಾಯವನ್ನು ಬಳಸಲು ಮುಂದಾಗಿದ್ದಾರೆ.
ಹೌದು, ಕರಾವಳಿಯಲ್ಲಿ ಈ ಸಲ ನೇರಾ ನೇರ ಸ್ಪರ್ಧೆ ಏರ್ಪಡಲಿದೆ. ಮೋದಿ ಹೆಸರೇಳಿ ಚುನಾವಣೆ ಗೆಲ್ಲೋದು ಅಷ್ಟು ಸುಲಭದ ಮಾತಾಗಿಲ್ಲ. ಯಾಕೆಂದರೆ ಈ ಸಲ ಬಿಜೆಪಿಯಿಂದ ಚುನಾವಣೆ ನಿಂತಿರುವುದು ಪಿಟೀಲು ನಳೀನ್ ಕುಮಾರ್ ಕಟೀಲು(Nalin kumar Kateel) ಅಲ್ಲ. ಹಾಗೂ ಕಾಂಗ್ರೆಸ್ ನಿಂದ ನಿಂತಿರವುದು ಕೂಡ ಸುಲಭವಾಗಿ ಸೋಲುವಂತ ಆಸಾಮಿಯಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಎದುರುಬದುರಾಗಿರುವುದು ಎರಡು ಯುವ ಹುಲಿಗಳು. ಬಿಸಿ ರಕ್ತ ತುಂಬಿದ ಯುವ ನೇತಾರರು. ಮಾತಲ್ಲಿ ಅಲ್ಲದೆ ಕೆಲಸ-ಕಾರ್ಯಗಳಿಂದಲೇ ಜನರನ್ನು, ಕಾರ್ಯಕರ್ತರನ್ನು ಬಡಿದೆಬ್ಬಿಸುವವರು ಅವರು. ಹೀಗಾಗಿ ಕೊಂಚ ವ್ಯತ್ಯಾಸವಾದರೂ ಬಿಜೆಪಿ(BJP) ಭಧ್ರಕೋಟೆ ಕೈ ಪಾಳಯದ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಗಮನದಲ್ಲಿರಿಸಿಕೊಂಡ ಕಾಂಗ್ರೆಸ್ ಕ್ಯಾಂಡಿಡೇಟ್ ಪದ್ಮರಾಜ್(Padmaraj) ದಾಳ ಬಿಚ್ಚಿದ್ದಾರೆ. ಅವರು ನೇರವಾಗಿ ಮಾಧ್ಯಮಗಳೆದುರು ಬಂದು, “ನನ್ನ ಸ್ಪರ್ಧೆ ಮೋದಿಯ ವಿರುದ್ಧ ಅಲ್ಲ, ಬ್ರಿಜೇಶ್ ಚೌಟ ಎದುರು” ಎಂದು ಹೇಳಿಕೆ ನೀಡಿದ್ದಾರೆ.
ಒಂದರ್ಥದಲ್ಲಿ ಹಾಗೂ ಮೇಲ್ನೋಟಕ್ಕೆ ಇದು ಎಲ್ಲಾ ಕ್ಷೇತ್ರಗಳಲ್ಲೂ ಇರುವ ವಾಸ್ತವಂಶವಾದರೂ ಹೇಳಿಕೆಯ ಒಳ ಹೊಕ್ಕು ನೋಡಿದರೆ ಅಲ್ಲಿರುವ ಅರ್ಥವೇ ಬೇರೆ. ಯಾಕೆಂದರೆ ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕಿರುವ ಮೋದಿಯನ್ನು ಎದುರು ಹಾಕಿಕೊಂಡರೆ ಕರಾವಳಿ ಜನ ನನ್ನನ್ನು ಅಟ್ಟುವುದು ಪಕ್ಕಾ ಎನ್ನುವುದನ್ನು ಬಹಳ ನೀಟಾಗಿ ಅರ್ಥೈಸಿಕೊಂಡಂತೆ ಕಾಣುತ್ತೆ ನಮ್ಮ ಕಾಂಗ್ರೆಸ್ ಕ್ಯಾಂಡಿಡೇಟ್ ಪದ್ಮರಾಜ್. ಹಾಗಾಗಿ ನೇರವಾಗಿ ನನ್ನ ಸ್ಪರ್ಧೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಎದುರು ಎಂದು ಹೇಳಿದ್ದು ಮೋದಿಯನ್ನು ಯಾಕೆ ಎದುರು ತರ್ತೀರಾ, ನಿಮ್ಮಲ್ಲಿ ಸ್ವಂತ ಬಲ ಇಲ್ವಾ, ನೀವಷ್ಟು ವೀಕಾ ಎಂದು ತಿವಿದಿದ್ದಾರೆ.
ಕರಾವಳಿಯಲ್ಲಿ ನಳಿನ ಕುಮಾರ್ ಕಟೀಲ್ 2, 75,000 ಕ್ಕೂ ಅಧಿಕ ಮತಗಳಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ವಿರುದ್ಧ ಜಯಗಳಿಸಿದ್ದರು. ಆದರೆ ಈ ಸಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಸ್ಪರ್ಧೆ ಬಲು ಜೋರಾಗಿದ್ದು, ಈ ಹಗ್ಗ ಜಗ್ಗಾಟದಲ್ಲಿ ಯಾರು ಗೆಲ್ಲುತ್ತಾರೆ , ಯಾರ ಪರವಾಗಲಿದೆ ಮಂಗಳೂರು ಲೋಕಸಭಾ ಕ್ಷೇತ್ರ ಎನ್ನುವುದನ್ನು ಕಾಲವೇ ನಿರ್ಣಯ ಮಾಡಬೇಕಿದೆ.