Parliament Election: ವೀರೇಂದ್ರ ಹೆಗ್ಗಡೆಗೆ ನಡು ಬಗ್ಗಿಸದೆ, ಕಾಲಿಗೆ ಬೀಳದ ಓರ್ವ ಸಂಸದ ಮಂಗಳೂರು ಲೋಕಸಭಾ ಸ್ಥಾನಕ್ಕೆ ಬೇಕಾಗಿದ್ದಾರೆ !
ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಾರೆ. ಅದೇ ರೀತಿ ಮಂಗಳೂರು ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಹೊಸ ಮುಖ – ಬ್ರಿಜೇಶ್ ಚೌಟರನ್ನು ಬಿಜೆಪಿ ಘೋಷಿಸಿದೆ. ಮಂಗಳೂರು ಲೋಕಸಭಾ ಸಂಸದರಾಗಿ ಮೂರು ಸಲದ ಆಯ್ಕೆಯಾಗಿದ್ದ ನಳಿನ್ ಕುಮಾರ್ ಕಟೀಲ್ ನಿಧಾನಕ್ಕೆ ರಾಜಕೀಯ ನೇಪಥ್ಯಕ್ಕೆ ಸರಿಸಲ್ಪಟ್ಟಿದ್ದಾರೆ.
ಕರಾವಳಿಯ ಬಹುದೊಡ್ಡ ಪಿಡುಗೊಂದನ್ನು ತೊಡೆದು ಹಾಕಲು ನಮಗೆ ಬಲಿಷ್ಠ ಸಂಸದರೊಬ್ಬರು ಬೇಕಾಗಿದ್ದಾರೆ. ರಸ್ತೆಗಳು, ಟೋಲ್ ಗಳು, ನೀರಿನ ವ್ಯವಸ್ಥೆಗಳ ಸಮಸ್ಯೆಗಳು – ಇತ್ಯಾದಿಗಳು ಎಲ್ಲವೂ ಹಾಳು ಬಿದ್ದು ಹೋಗಲಿ. ಎಲ್ಲವೂ ಜನರ ಜೀವ ಇದ್ದ ನಂತರ. ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಜನರ ಉಸಿರು ನಿಲ್ಲಿಸುವ ಗ್ಯಾಂಗ್ ಒಂದು ಹಲವಾರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ನೂರಾರು ಜನರನ್ನು ಕೊಂದು ಮುಗಿಸಿದ, ಸೌಜನ್ಯನಂತಹಾ ಅಮಾಯಕ ರನ್ನು ಬೆಳ್ಳಂಬೆಳಕಿನಲ್ಲಿ ತಿಂದು ತೇಗಿದವರು ಇಂದು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇವತ್ತು ಕರಾವಳಿಯಲ್ಲಿ ದೊಡ್ಡದೊಂದು ಸಮಸ್ಯೆ ಇದೆಯೆಂದರೆ ಅದು ಸೌಜನ್ಯ ಪ್ರಕರಣದಂತಹ ನೂರಾರು ಭೀಭತ್ಸ ಹತ್ಯೆಗಳ ಪ್ರಕರಣ.
ತಮ್ಮ ದುಡ್ಡು ಮತ್ತು ಪ್ರಭಾವ ಅಧಿಕಾರಗಳಿಂದ ಎಲ್ಲವನ್ನು ಇಲ್ಲಿಯ ತನಕ ಮುಚ್ಚಿ ಹಾಕಿಕೊಂಡು ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ಇದೀಗ ಅವರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಬೇಕಿದೆ. ಅಂತಹ ಹೋರಾಟಗಳು ಈಗ ಸಾಮಾಜಿಕ ನೆಲೆಯಲ್ಲಿ ನಡೆಯುತ್ತಿದೆ. ಆ ಹೋರಾಟದ ಧ್ವನಿಯನ್ನು ಲೋಕಸಭೆಯಲ್ಲಿ ಎತ್ತಿ ಹಿಡಿಯುವ ಒಂದು ಗಡುಸು ಧ್ವನಿ ಇದೀಗ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬೇಕಾಗಿದೆ. ಆ ದನಿ ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಇರುವ ಬ್ರಿಜೇಶ್ ಚೌಟರದೇ ಆಗಬಹುದು ಅಥವಾ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬರಬಲ್ಲ ಪದ್ಮರಾಜ್ ರದೇ ಇರಬಹುದು ಅಲ್ಲಾ ವಿನಯ್ ಕುಮಾರ್ ಸೊರಕೆಯೇ ಆಗಿರಬಹುದು !!
ಇವತ್ತು ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೊಂದು ದೊಡ್ಡ ಜ್ವಲಂತ ಸಮಸ್ಯೆ ಇದ್ರೆ ಅದು ಅಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮತ್ತು ಕುಟುಂಬದವರ ಅಕ್ರಮ ಭೂಹಗರಣ. ಒಂದು ಅಂದಾಜಿನ ಪ್ರಕಾರ, 4,000 ಅಧಿಕ ಭೂ ಪ್ರದೇಶವನ್ನು ಅರಣ್ಯವನ್ನು ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬ ಕಬ್ಜಾ ಮಾಡಿದೆ. ಅಲ್ಲದೆ ಆ ತಂಡದ ಮೇಲೆ ಹಲವಾರು ಗುರುತರ ಕ್ರಿಮಿನಲ್ ಆಪಾದನೆಗಳಿವೆ. ರಾಜ್ಯದ ಹಲವು ಕೋರ್ಟುಗಳಲ್ಲಿ ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ರಾಜ್ಯದಲ್ಲಿ ಮತ್ತು ದೇಶಾದ್ಯಂತ ವಿಭಿನ್ನ ರೀತಿಯ ಸಾಮಾಜಿಕ ಮತ್ತು ಕಾನೂನು ಹೋರಾಟಗಳು ನಡೆಯುತ್ತಲೇ ಇವೆ. ಆದರೂ ರಾಜಕೀಯ ಕಾರಣಗಳಿಂದಾಗಿ ದುಡ್ಡಿನ ಬಲದಿಂದಾಗಿ ದುಷ್ಟ ಗುಂಪು ಕಾನೂನಿನ ಕುಣಿಕೆಗೆ ಸಿಗದೇ ಓಡಾಡುತ್ತಿದೆ. ಆತನಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರೂ ‘ಮಾತನಾಡುವ ಮಂಜುನಾಥ ಮೂಕ !’
ಈಗ, ಸೌಜನ್ಯ ಹೋರಾಟದ ಪರವಾಗಿ ಮತ್ತು ಗ್ರಾಮಕ್ಕೆ ಗ್ರಾಮದಷ್ಟು ದೊಡ್ಡ ಪ್ರಮಾಣದಲ್ಲಿ ಭೂ ಅರಣ್ಯ ಕಬಳಿಸಿ ಕುಳಿತಿರುವ ಭೂಪತಿಗಳ ವಿರುದ್ಧ ರೂಪುಗೊಂಡಿರುವ ಹೋರಾಟದ ಜನದನಿಯನ್ನು ಲೋಕಸಭೆಯಲ್ಲಿ ಸಂಸದನಾಗಿ ಘರ್ಜಿಸಿ ಹೇಳಬಲ್ಲ ಒಂದು ಧ್ವನಿ ಮಂಗಳೂರು ಲೋಕಸಭಾ ಸ್ಥಾನಕ್ಕೆ ಬೇಕಾಗಿದೆ.
ಬಿಜೆಪಿಯ ಹಳೆಯ ಸಂಸದರು ಮತ್ತು ಇತರ ಬಿಜೆಪಿ ನಾಯಕರುಗಳು ದುಷ್ಟ ಕೂಟದ ಹಿಂದೆ ಮುಂದೆ ಓಡಾಡಿ ತಮ್ಮ ಬೇಳೆ ಬೇಯಿಸಿಕೊಂಡವರು. ನಮಗೆ ಅಂತಹ ಇನ್ನೊಬ್ಬ ಸಂಸದ ಈ ಬಾರಿ ಬೇಕಾಗಿಲ್ಲ. ಮೊನ್ನೆ ಮೊನ್ನೆ ಸೌಜನ್ಯ ತಾಯಿ ಮತ್ತು ಇತರ ಹೋರಾಟಗಾರರು ದೆಹಲಿಯಲ್ಲಿ ಹೋರಾಟ ರೂಪಿಸಿ ಸದ್ದು ಮಾಡಿ ಬಂದಿದ್ದರು. ಈಗ ಆ ಸದ್ದನ್ನು ಲೋಕಸಭೆಯಲ್ಲಿ ಪ್ರತಿಧ್ವನಿಸಬಲ್ಲ ವ್ಯಕ್ತಿತ್ವವನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಜನರು ಆಸೆ ಕಂಗಳಲ್ಲಿ ಎದುರು ನೋಡುತ್ತಿದ್ದಾರೆ.
ಈಗ ಪ್ರತಿಷ್ಠಿತ ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಬ್ರಿಜೇಶ್ ಚೌಟ ಆಯ್ಕೆಯಾಗಿದ್ದಾರೆ, ಅವರಿಗೆ ನಮ್ಮ ಶುಭಾಶಯಗಳು. ಬ್ರಿಜೇಶ್ ಚೌಟ ಓರ್ವ ಮಿಲಿಟರಿ ಮ್ಯಾನ್. ಸೇನೆಯಲ್ಲಿ ಆರ್ಮಿಯಲ್ಲಿ ಕ್ಯಾಪ್ಟನ್ ಆಗಿ ಇದ್ದ ಮನುಷ್ಯ. ಹಾಗಾಗಿ ಸಹಜವಾಗಿ ಶಿಸ್ತು ಇರುತ್ತೆ, ಮಾತು ಸ್ವಲ್ಪ ಕಮ್ಮಿ ಆದ್ರೆ ಕೂಡಾ ಖಡಕ್ ಆಗಿರುತ್ತೆ ಅಂತ ನಮ್ಮಂತ ಸಾಮಾನ್ಯ ಜನ ಅಂದುಕೊಳ್ತೇವೆ. ಅದಕ್ಕೆ ಕಾರಣ ನೀವು ಮಿಲಿಟರಿಯಲ್ಲಿ ಕ್ಯಾಪ್ಟನ್ ಹುದ್ದೆ ನಿರ್ವಹಿಸಿ ಬಂದ ಕಾರಣದಿಂದ ಇರಬಹುದು ಜನ ಭಾವಿಸುತ್ತಾರೆ.
ಮಿಲಿಟರಿಯಲ್ಲಿ ನಡು ಬಗ್ಗಿಸದೆ ಎದೆ ಸೆಟೆಸಿ ನಿಂತ ಬ್ರಿಜೇಶ್ ಚೌಟರೇ, ನಿಮಗೊಂದು ನೇರ ಪ್ರಶ್ನೆ. ನೀವು ಅಂದು ಬರ್ಬರವಾಗಿ ಸತ್ತು ಹೋದ ಸೌಜನ್ಯಳ ಹೋರಾಟದ ಪರವಾಗಿ ಸೆಟೆದು ನಿಲ್ಲಬಲ್ಲಿರಾ ? ಅಥವಾ ಕರಾವಳಿ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮತ್ತು ಇದೀಗ ವ್ಯಾಪ್ತಿ ಹಿಗ್ಗಿಸಿಕೊಂಡು ಲಕ್ಷಾಂತರ ಜನರನ್ನು ಆಕರ್ಷಿಸಿಕೊಂಡು ನಡೆಯುತ್ತಿರುವ ಸೌಜನ್ಯ ಪ್ರಕರಣದ ಹೋರಾಟವನ್ನು ಲೋಕಸಭೆಯ ತನಕ ಎಳೆದು ತರಬಲ್ಲಿರಾ ? ಹಾಗಿದ್ದರೆ ಮಾತ್ರ ನೀವು ಕರಾವಳಿಯ ಹೆಮ್ಮೆಯ ಪುತ್ರ. ಹಾಗೆ ಮಾಡಬಲ್ಲಿರಾದರೆ ನಿಮಗೆ ಕರಾವಳಿಯ ಜನರ ಓಟು ಕೇಳುವ ಹಕ್ಕಿದೆ. ಈ ಪ್ರಶ್ನೆ ನಿಮ್ಮಷ್ಟೇ ಮುಂದೆ ಆಯ್ಕೆಯಾಗುವ ಕಾಂಗ್ರೆಸ್ ಅಭ್ಯರ್ಥಿಗೂ ಸಲ್ಲುತ್ತದೆ.
ವೀರೇಂದ್ರ ಹೆಗ್ಗಡೆಯವರ ಮುಂದೆ ನಡುಬಗ್ಗಿಸಿ ಕಾಲಿಗೆ ಅಡ್ಡ ಬೀಳದೆ, ಆತನ ಯಾವುದೇ ಸಹಾಯ ಹಸ್ತ ಕೇಳದೆ ಇರಬಲ್ಲ ಛಾತಿ ಇದ್ದರೆ ಮಾತ್ರ ಮತ ಕೇಳಲು ಹೊರಡಿ. ಪಕ್ಷ ಯಾವುದೇ ಇರಲಿ, ಜನರು ನಿಮ್ಮ ಕೈ ಹಿಡಿಯದೆ ಬಿಡುವಷ್ಟು ದಡ್ಡರಲ್ಲ. ಇಂತಹಾ ಮನಸ್ಥಿತಿ ಇಲ್ಲದೆ ನೀವು ಮತ ಕೇಳಲು ಹೊರಟಿರಿ ಅಂದಾದಲ್ಲಿ ನೀವು ಕೇಳಲು ಹೊರಟದ್ದು ಮತವಲ್ಲ- ಅದು ಭಿಕ್ಷೆ. ಜನ ಈ ಸಾರಿ ಬುದ್ದಿವಂತರಾಗದೆ ಇದ್ರೆ ಮತ್ತೆಂದೂ ಮತ್ಯಾರೂ ಅವರನ್ನು ರಕ್ಷಿಸಲಾರರು.