CM Siddaramaiah: ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು – ತಾಖತ್ ಬಿಜೆಪಿ ನಾಯಕರಿಗಿಲ್ಲ : ಬಿಜೆಪಿ ನಾಯಕರು ವಿರುದ್ಧ ಸಿದ್ದರಾಮಯ್ಯ ಕಿಡಿ
CM Siddaramaiah: ಇತ್ತೀಚೆಗೆ ಸಂಸದ ಅನಂತ್ ಕುಮಾರ್ ಹೆಗಡೆಯವರು (Ananth Kumar Hegde) ನೀಡಿರುವ ಸಂವಿಧಾನ ಬದಲಾವಣೆ ಹೇಳಿಕೆ ಇಡೀ ದೇಶದಲ್ಲಿಯೇ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕವಾಗಿದೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.
“ಈ ಹೇಳಿಕೆಯನ್ನು ಹೆಗಡೆ ತಮ್ಮ ಮನೆಯ ಅಡುಗೆಕೋಣೆಯಲ್ಲಿ ನೀಡಿದ್ದಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಸಂಸದನಾಗಿ ಮಾತನಾಡಿರುವುದು. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ, ಇವರಿಗೆ ಆರ್.ಎಸ್.ಎಸ್ ಬೆಂಬಲದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು – ತಾಖತ್ ಇಲ್ಲ ಅಷ್ಟೆ” ಎಂದು ತಿಳಿಸಿದ್ದಾರೆ.
“ಅನಂತ್ ಕುಮಾರ್ ಹೆಗಡೆ ನಿರಂತರವಾಗಿ ಸಂವಿಧಾನದ ವಿರುದ್ಧ ಮಾತ್ರ ಹೇಳಿಕೆ ನೀಡಿದ್ದಲ್ಲ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಹೇಳಿದ್ದಾರೆ, ದಲಿತರನ್ನು ನಾಯಿಗಳು ಎಂದು ದೂಷಿಸಿದ್ದಾರೆ. ಮನುಸ್ಮೃತಿಯನ್ನು ಬಹಿರಂಗವಾಗಿ ಸಮರ್ಥಿಸಿದ್ದು, ವಿರೋಧ ಪಕ್ಷದ ನಾಯಕರನ್ನು ತುಚ್ಚೀಕರಿಸಿ ಮಾತನಾಡಿದ್ದಾರೆ. ಆಗಲೂ ಸಹ ಬಿಜೆಪಿ ನಾಯಕರು ಹೆಗಡೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಹೆಗಡೆ ಮಾತುಗಳು ಆರ್ ಎಸ್ ಎಸ್ ನ ಮನದ ಮಾತುಗಳೂ ಆಗಿತ್ತು ಎಂದ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದಕ್ಕೆ ಆರ್.ಎಸ್.ಎಸ್ ಬೆಂಬಲ ಇರುವುದರಿಂದ ಬಿಜೆಪಿಯನ್ನೇ ಯಾಕೆ ಪ್ರಧಾನಿ ಮೋದಿ ಅವರನ್ನೇ ಹೆಗಡೆ ಅವರು ಲೆಕ್ಕಕ್ಕಿಟ್ಟಿಲ್ಲ ಎಂದು ಸಿದ್ದರಾಮಯ್ಯನವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.