CAA: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ
CAA: ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಾರಿಗೊಳಿಸಲಾಗುವುದು, ಈ ಸಂಬಂಧ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith shah) ಅವರು ಕೆಲವು ಸಮಯದ ಹಿಂದಷ್ಟೇ ಅಪ್ಡೇಟ್ ಕೊಟ್ಟಿದ್ದು, ಇದೀಗ ಆ ಸಂದರ್ಭಕ್ಕೆ ಮುಹೂರ್ತ ಕೂಡಿಬಂದಿದೆ. ಅಂದರೆ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ಕಾಯ್ದೆ ಸದನದಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.
ಹೌದು, 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಾಗರಿಕರಿಗೆ ಪೌರತ್ವವನ್ನು ನೀಡಲು ಕಾನೂನಿನ ನಿಯಮಗಳನ್ನು ಕೇಂದ್ರ ಇಂದು ಘೋಷಿಸಿದೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ. 2019ರಲ್ಲಿ ರೂಪಿಸಲಾಗಿರುವ ಈ ಸಿಸಿಎ ಕಾಯ್ದೆಯನ್ನು 2024ರ ಲೋಕಸಭಾ ಚುನಾವಣೆಗೂ ಮುನ್ನ ಜಾರಿಗೆ ತರಲಾಗುವುದು ಎಂದು ಇತ್ತೀಚೆಗಷ್ಟೆ ಅಮಿತ್ ಶಾ ಪನರುಚ್ಚರಿಸಿದ್ದರು.
2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಸಿಕ್ಕಿದ್ದರೂ ನಿಯಮಗಳು ರೂಪುಗೊಂಡಿಲ್ಲ. ಇದೀಗ ಅಧಿಸೂಚನೆ ಮೂಲಕ ನಿಯಮಗಳ ಘೋಷಣೆಯಾಗಲಿದೆ.