Board Exams: 5,8,9 ನೇ ಕ್ಲಾಸ್ ಮೌಲ್ಯಾಂಕನ ಪರೀಕ್ಷೆ ಇಂದಿನಿಂದ ಪ್ರಾರಂಭ
ಹೈಕೋರ್ಟ್ ಅನುಮತಿ ಮೇರೆಗೆ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ಸೋಮವಾರದಿಂದ ಆರಂಭವಾಗಲಿದ್ದು, ಮಾ. 18ರವರೆಗೆ ನಡೆಯಲಿದೆ.
ಇದನ್ನೂ ಓದಿ: Dakshina Kannada Loka Sabha Elections: ಯಾರಿಗೆ ಸಿಗಲಿದೆ ಬಿ-ಫಾರಂ!?
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿ 69,137 ಶಾಲೆಗಳ 28.14 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. 5ನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ ಸೇರಿ 4 ವಿಷಯಗಳು, 8 ಮತ್ತು 9ನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
5ನೇ ತರಗತಿಗೆ ಪ್ರತಿ ವಿಷಯಕ್ಕೆ 50 ಅಂಕಗಳಿಗೆ ಮೌಲ್ಯಾಂಕನ ನಡೆಸಲಾಗುವುದು. 40 ಅಂಕಗಳ ಲಿಖಿತ ಪರೀಕ್ಷೆಗೆ ರಾಜ್ಯ ಹಂತದಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ನೀಡಲಿದೆ. ಉಳಿದ 10 ಅಂಕಗಳಿಗೆ ಮೌಖಿಕ ಪರೀಕ್ಷೆಯನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಬೇಕು. 8ನೇ ತರಗತಿಗೆ 60 ಅಂಕಗಳಿಗೆ ಮೌಲ್ಯಾಂಕನ ನಡೆಸಲಾಗುವುದು. 50 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 10 ಅಂಕಗಳಿಗೆ ಮೌಖಿಕ ಪರೀಕ್ಷೆಯನ್ನು ಶಾಲಾ ಹಂತದಲ್ಲಿಯೇ ನಡೆಸಬೇಕಿದೆ.
9 ತರಗತಿಗೆ ವಿಷಯಗಳನ್ನು (ಕನ್ನಡ, ಇಂಗ್ಲಿಷ್, ಹಿಂದಿ) 100 ಅಂಕಗಳಿಗೆ ಮತ್ತು ಕೋರ್ ವಿಷಯ (ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ) 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. 5ನೇತರಗತಿ ಪರೀಕ್ಷೆಗಳು ಮಾ.11ರಿಂದ 14ರವರೆಗೆ ಪ್ರತಿ ದಿನ ಮಧ್ಯಾಹ್ನ 2.30ರಿಂದ 4.30ರವರೆಗೆ, 8 ಮತ್ತು 9ನೇ ತರಗತಿಗೆ ಮಾ.11ರಿಂದ 18ರ ವರೆಗೆ ಕ್ರಮವಾಗಿ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ ಹಾಗೂ 2.30ರಿಂದ ಸಂಜೆ 5.15 ರವರೆಗೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.