Dr. G. Parameshwar:ದಲಿತ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ: ಸದ್ಯಕ್ಕೆ ದಲಿತ ಸಿಎಂ ವಿಚಾರ ಅಪ್ರಸ್ತುತ ಎಂದ ಪರಮೇಶ್ವರ್
Dr. G. Parameshwar :ಇತ್ತೀಚೆಗೆ ರಾಜ್ಯದಲ್ಲಿ ಲೋಕಸಭಾ ಸಮರ ಕಾವೇರುತ್ತಿದ್ದಂತೆ ಇದೀಗ ದಲಿತ ಸಿಎಂ ಕೂಗು ಸಹ ಕೇಳಿ ಬರುತ್ತಿದೆ. ಒಂದೆಡೆ ಖರ್ಗೆ ಅವರ ಬೆಂಬಲಿಗರು ಖರ್ಗೆಯವರಿಗೆ ಮುಖ್ಯಮಂತ್ರಿಯ ಸ್ಥಾನ ದಕ್ಕ ಬೇಕೆಂದು ಹೇಳುತ್ತಿದ್ದರೆ, ಇನ್ನೊಂದೆಡೆ ಡಾ. ಜಿ. ಪರಮೇಶ್ವರ್(Dr. G. Parameshwar) ಅವರ ಬೆಂಬಲಿಗರು ಪರಮೇಶ್ವರ್ ಅವರು ರಾಜ್ಯದ ಮುಂದಿನ ಸಿಎಂ ಆಗಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಈ ನಡುವೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಬೆಂಬಲಿಗರ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಸ್ಥಿರ ಸರ್ಕಾರವಿದ್ದು, ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಹಾಗಾಗಿ ದಲಿತ ಸಿಎಂ ವಿಚಾರ ಈಗ ಅಪ್ರಸ್ತುತವಾಗಿದೆ. ಸದ್ಯಕ್ಕೆ ಆ ವಿಷಯದ ಬಗ್ಗೆ ಚರ್ಚಿಸದಿರುವುದೇ ಸೂಕ್ತ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ, ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನಿಸಬೇಕು. ಕಾಂಗ್ರೆಸ್‌ಗೆ ಹೆಚ್ಚು ಸೀಟು ಬರಬೇಕು ಎಂಬುದಷ್ಟೇ ನಮ್ಮ ಗುರಿ. ಪ್ರಸ್ತುತ ಟಿಕೆಟ್ ಆಕಾಂಕ್ಷಿಗಳಾಗಿರುವ ಕೆಲವರಲ್ಲಿ ಅಸಮಾಧಾನ ಇರುತ್ತದೆ. ಸರಿಮಾಡಿಕೊಂಡು ಹೋಗಬೇಕು ಎಂದರು.
ಲೋಕಸಭೆ ಚುನಾವಣೆಯಲ್ಲಿ ಗುಲ್ಬರ್ಗದಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆಯ ಬಗ್ಗೆ ಮಾತನಾಡಿ ಖರ್ಗೆ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಅವರೇ ಎಐಸಿಸಿ ಅಧ್ಯಕ್ಷರಿದ್ದು, ಅವರೇ ತೀರ್ಮಾನ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಒಟ್ಟಾರೆ ದಲಿತ ಸಿಎಂ ಕೂಗು ಕೇಳಿ ಬಂದಾಗಲೆಲ್ಲಾ ಅದು ಒಂದಲ್ಲ ಒಂದು ರೀತಿಯಲ್ಲಿ ಧಮನವಾಗುತ್ತಲೆ ಬರುತ್ತಿದೆ.
ಇದನ್ನೂ ಓದಿ : ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯೆಲ್ ಹಠಾತ್ ರಾಜೀನಾಮೆ : ಅಸಲಿಗೆ ಇದರ ಹಿಂದಿದೆಯ ರಾಜಕೀಯ ಕೈವಾಡ ?