Kadaba: ಕಡಬದಲ್ಲಿ ಆಸಿಡ್‌ ದಾಳಿ ಪ್ರಕರಣ; ಆರೋಪಿ ಪರೀಕ್ಷಾ ದಿನವನ್ನೇ ಆಯ್ಕೆ ಮಾಡಿದ್ದು ಏಕೆ?

Kadaba: ನಿನ್ನೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ ವ್ಯಕ್ತಿಯೋರ್ವ ಆಸಿಡ್‌ ದಾಳಿ ಮಾಡಿದ ಪ್ರಕರಣವೊಂದು ಕಡಬ ಕಾಲೇಜಿನಲ್ಲಿ ನಡೆದಿತ್ತು. ಆರೋಪಿ ಎಂಬಿಎ ವಿದ್ಯಾರ್ಥಿ ಅಭಿನ್‌ ಈ ಕೃತ್ಯ ಎಸಗಿದವ. ಭಾನುವಾರು ತನ್ನ ಹುಟ್ಟೂರಾದ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದು, ನಂತರ ಕಾಲೇಜಿಗೆ ನುಗ್ಗಿ ಈ ಕೃತ್ಯ ಎಸಗಿದ್ದ. ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ನಿವಾಸಿಯಾದ ಅಭಿನ್‌, ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ನೆಲಂಬೂರುನಿಂದ ಹೊರಟಿದ್ದ. ರಾತ್ರಿ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ರೈಲು ನಿಲ್ದಾಣದಲ್ಲೇ ಆತ ರಾತ್ರಿಯಿಡೀ ಕಳೆದಿದ್ದು, ಬೆಳಗ್ಗೆ ಮಂಗಳೂರು ಬಸ್ಸು ಹಿಡಿದು ಕಡಬಕ್ಕೆ ಬಂದಿಳಿದಿದ್ದ.

ಇದನ್ನೂ ಓದಿ: Dakshiana Kannada: ಮನೆಯೊಂದಕ್ಕೆ ದಿಢೀರ್‌ ದಾಳಿ ಮಾಡಿದ ಎನ್‌ಐಎ ಅಧಿಕಾರಿಗಳ ತಂಡ

ಈತ ಕಾಲೇಜು ಪ್ರವೇಶಿಸುವ ಮೊದಲೇ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್‌ ಧರಿಸಿ, ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದಿದ್ದ. ಕಡಬ ಬೇಕರಿಗೆ ಸುಮಾರು ಎಂಟು ಗಂಟೆಗೆ ಬಂದಿದ್ದ ಈತ, ತನ್ನಲ್ಲಿದ್ದ ಎರಡು ಮೊಬೈಲ್‌ ಫೋನ್‌ಗಳನ್ನು ಚಾರ್ಜ್‌ಗೆ ಇಟ್ಟಿದ್ದ. ಸಿಸಿಟಿವಿಯಲ್ಲಿ ಇದೆಲ್ಲ ಸೆರೆಯಾಗಿದೆ.

ಮೊಬೈಲ್‌ ಚಾರ್ಜ್‌ಗಿಟ್ಟ ಬಳಿಕ ಈತ ಸ್ನೇಹಿತರ ಸಹಾಯದಿಂದ ಸಮವಸ್ತ್ರದ ಬಟ್ಟೆಯನ್ನು ಧರಿಸಿದ್ದಾನೆಯೇ ? ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿ ಕಲಿಯುತ್ತಿದ್ದ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್‌ 1 ರಿಂದ ನಡೆಯುತ್ತಿದೆ. ಮೂರು ಕಾಲೇಜಿನ ವಿದ್ಯಾರ್ಥಿಗಳಿಗೆ ಕೂಡಾ ಅದು ಪರೀಕ್ಷಾ ಕೇಂದ್ರವಾಗಿತ್ತು. ಹಾಗಾಗಿ ಪರೀಕ್ಷಾ ಸಮಯದಲ್ಲಿ ಉಳಿದ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಬರುವ ಕಾರಣ, ಈತ ಕೂಡಾ ಬಂದರೆ ಯಾವುದೇ ಅನುಮಾನ ಉಂಟಾಗುವುದಿಲ್ಲ. ಹೀಗಾಗಿ ಆತ ಎಕ್ಸಾಂ ದಿನವನ್ನೇ ಆಯ್ಕೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಕಡಬ ಪೇಟೆಯ ಅಂಗಡಿಯೊಂದರಲ್ಲಿ ಈತ ಬೆಳಿಗ್ಗೆ 7.30 ರ ಸಮಯದಾಚೆ ಆಸಿಡ್‌ ಖರೀದಿ ಮಾಡಿದ್ದಾನೆ ಎಂದು ವರದಿಯಾಗಿದೆ.

ಮೊದಲಿಗೆ ಈತ ಕಾಲೇಜು ಆವರಣಕ್ಕೆ ಬಂದಿದ್ದ ಆರೋಪಿ ಅಭಿನ್‌ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಾಲೇಜಿನ ಆವರಣದ ಮೂಲೆಯೊಂದರಲ್ಲಿ ನಿಂತುಕೊಂಡಿದ್ದ. ತಾನು ಯಾರಿಗೆ ಆಸಿಡ್‌ ಎರೆಚಬೇಕು ಎಂದು ನಿರ್ಧಾರ ಮಾಡಿದ ವಿದ್ಯಾರ್ಥಿನಿ ಮತ್ತು ಇನ್ನಿಬ್ಬರು ಒಂದೇ ಜಾಗದಲ್ಲಿ ಕುಳಿತು ಪರೀಕ್ಷೆಗೆ ಅಂತಿಮ ತಯಾರಿ ಮಾಡುತ್ತಿದ್ದರು. ಇನ್ನೇನು ಲಾಂಗ್‌ಬೆಲ್‌ ಹೊಡೆಯಬೇಕು ಅನ್ನುವಷ್ಟರಲ್ಲಿ ಮೂಲೆಯಲ್ಲಿದ್ದ ಅಬಿನ್‌ ಓಡಿ ಬಂದು ಕೈಯಲ್ಲಿದ್ದ ಆಸಿಡ್‌ ವಿದ್ಯಾರ್ಥಿನಿಗೆ ಎರಚಿದ್ದು, ಆಕೆಯ ಮುಖಕ್ಕೆ ಗಂಭೀರ ಗಾಯವಾಗಿದ್ದರೆ, ಉಳಿದ ಇಬ್ಬರು ವಿದ್ಯಾರ್ಥಿನಿಯರಿಗೆ ಮೈಗೆ ಆಸಿಡ್‌ ಬಿದ್ದಿದೆ.

ಆಸಿಡ್‌ ದಾಳಿಯಾಗುತ್ತಲೇ ಸಂತ್ರಸ್ತ ವಿದ್ಯಾರ್ಥಿನಿಯರು ಜೋರಾಗಿ ಕಿರುಚಾಡಿದ್ದಾರೆ. ಪರೀಕ್ಷೆಯ ಒತ್ತಡ ಇದ್ದರೂ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಓಡಿ ಹೋಗಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಅಟ್ಟಾಡಿಸಿ ಹಿಡಿದಿದ್ದಾರೆ.

ಕಡಬ ತಾಲೂಕಿನ ರೆಂಜಲಾಡಿ ನಿವಾಸಿಯಾಗಿರುವ ಸಂತ್ರಸ್ತೆಯನ್ನು ಈ ಆರೋಪಿ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಯ ತಾಯಿ ಮೂಲತಃ ಕೇರಳದವರು. ಆರೋಪಿ ಅಬಿನ್‌ ಈಕೆಯ ಮನೆಯ ಹತ್ತಿರದ ನಿವಾಸಿ. ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ಮುಖಾಂತರ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿದೆ. ಈ ವಿಚಾರ ಯುವತಿಯ ತಾಯಿಗೆ ಗೊತ್ತಾಗಿದೆ. ಇದನ್ನು ತಾಯಿ ಆಕ್ಷೇಪಿಸಿದ್ದಾರೆ. ಈ ಕಾರಣಕ್ಕೆ ಯುವತಿ ಆರೋಪಿಯನ್ನು ಉಪೇಕ್ಷೆ ಮಾಡಿದ್ದಳು. ಇದರಿಂದ ಕೋಪಗೊಂಡ ಆರೋಪಿ ಆಸಿಡ್‌ ದಾಳಿಯ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.

Leave A Reply

Your email address will not be published.