2024ರ ದೆಹಲಿ ಸರ್ಕಾರದ ಬಜೆಟ್ ಮಂಡನೆ : ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ₹1,000 ನೀಡುವ ಭರವಸೆ ನೀಡಿದ ಕೇಜ್ರಿವಾಲ್ ಸರ್ಕಾರ
Delhi: ದೆಹಲಿ ಹಣಕಾಸು ಸಚಿವರಾದ ಅತಿಶಿ ಅವರು ಸೋಮವಾರ ದೆಹಲಿ ವಿಧಾನಸಭೆಯಲ್ಲಿ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಿದ್ದು, ಈ ವರ್ಷದ ಬಜೆಟ್ ನ ವಿಶೇಷವಾಗಿ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ಎಎಪಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ ₹1000 ನೀಡುತ್ತದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯು ರಾಮರಾಜ್ಯದ ಆದರ್ಶಗಳಿಂದ ಪ್ರೇರಿತವಾಗಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ. ಹಣಕಾಸು ವರ್ಷ 2024ರ ಒಟ್ಟಾರೆ ದೆಹಲಿ ಬಜೆಟ್ 76,000 ಕೋಟಿ ರೂ. ಗಳನ್ನು ಹೊಂದಿದೆ.
ಇದು ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರದ 10ನೇ ಬಜೆಟ್ ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈ ಹೊಸ ಯೋಜನೆಯ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಎಎಪಿ ಸರ್ಕಾರವು 2,714 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದು ದೆಹಲಿ ವಿಧಾನಸಭೆಯಲ್ಲಿ ಅತಿಶಿ ಹೇಳಿದರು.
ದೆಹಲಿ ಸರ್ಕಾರವು ಈ ಯೋಜನೆಯ ನಿಖರವಾದ ವಿವರಗಳನ್ನು ಬಹಿರಂಗಪಡಿಸದಿದ್ದರೂ, ದೆಹಲಿಯ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹1000 ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ.
ಈ ವರೆಗೂ ಯೋಜನೆಯ ಪ್ರಾರಂಭದ ದಿನಾಂಕವನ್ನು ಇನ್ನೂ ಘೋಷಿಸಿಲ್ಲ, ಆದರೆ ಏಪ್ರಿಲ್-ಮೇ ತಿಂಗಳಲ್ಲಿ ನಿಗದಿಯಾಗಿರುವ ಲೋಕಸಭಾ ಚುನಾವಣೆಯ ನಂತರ ಈ ಯೋಜನೆ ಪ್ರಾರಂಭವಾಗುವ ನಿರೀಕ್ಷೆಯಿದೆ.
ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ₹2,000 ಕೋಟಿ ಮೀಸಲಿಡಲಾಗಿದ್ದು, ಈ ಯೋಜನೆಗೆ ನೋಂದಾಯಿತ ಮತದಾರರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಹಾಗೆಯೇ ಯಾವುದೇ ಪಿಂಚಣಿ ಯೋಜನೆಯನ್ನು ಹೊಂದಿರಬಾರದು ಮತ್ತು ಸರ್ಕಾರಿ ಉದ್ಯೋಗಿಯಾಗಿರಬಾರದು ಎಂದು ತಿಳಿಸಿದೆ.