Chandigarh: ಹರಿಯಾಣ ಐ. ಎನ್. ಎಲ್. ಡಿ. ಪಕ್ಷದ ಮುಖ್ಯಸ್ಥ ನಫೀ ಸಿಂಗ್ ರಥಿಗೆ ಗುಂಡಿಕ್ಕಿ ಹತ್ಯೆ : ಕಾರ್ ಅಡ್ಡಗಟ್ಟಿ ಗುಂಡಿನ ಮಳೆಗರೆದ ಆಘಂತುಕರು.
ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕ ದಳದ ಹರಿಯಾಣ ಘಟಕದ ಅಧ್ಯಕ್ಷ ಮತ್ತು ಮಾಜಿ ಶಾಸಕ ನಫೇ ಸಿಂಗ್ ರಾಥಿಯನ್ನು ಝಜ್ಜರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪಕ್ಷದ ನಾಯಕ ಕೂಡ ಸಾವನ್ನಪ್ಪಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಥಿ ಮತ್ತು ಆತನ ಸಹಚರರು ವಾಹನದೊಳಗೆ ಇದ್ದಾಗ ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಿದ್ದು, ದಾಳಿ ನಡೆಸಿದ ಬಳಿಕ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಬ್ರಹ್ಮ ಶಕ್ತಿ ಸಂಜೀವನಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾಜಿ ಶಾಸಕ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಫೇ ಸಿಂಗ್ ರಾಥಿ ಅವರು ದಾಳಿ ನಡೆದ ಬಹದ್ದೂರ್ಗಢದಿಂದ ಐಎನ್ಎಲ್ಡಿ ಯ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಈ ದಾಳಿಯ ನಂತರ ರಾಜ್ಯ ಪೊಲೀಸರು ಎಚ್ಚರವಹಿಸಿದ್ದು, ಈ ಕೃತ್ಯವನ್ನು ಪತ್ತೆ ಹಚ್ಚಲು ವಿವಿಧ ತಂಡಗಳನ್ನು ಸಜ್ಜುಗೊಳಿಸಿದ್ದು, ಪ್ರಕರಣದ ತನಿಖೆಯನ್ನು ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
“ಈ ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬನೇ ಒಬ್ಬ ತಪ್ಪಿತಸ್ಥನನ್ನು ಬಿಡಲಾಗುವುದಿಲ್ಲ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ “ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ನಫೆ ಸಿಂಗ್ ರಥಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.