ಪುತ್ತೂರು : ಹುತ್ತಕ್ಕೆ ಪೂಜೆ ನಡೆಯುವ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.18ರಂದು ಚಂಪಾ ಷಷ್ಟಿ ಮಹೋತ್ಸವ
ಪುತ್ತೂರು ತಾಲೂಕಿನಲ್ಲಿ ವಲ್ಮೀಕ (ಹುತ್ತಕ್ಕೆ ಪೂಜೆ ಸಲ್ಲುವ ವಿಶೇಷ ಹಾಗೂ ಕಾರಣಿಕ ಸಾನಿಧ್ಯ ಕೊಳಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಡಿ.18ರಂದು ನಡೆಯಲಿದೆ.
ಡಿ.18ರಂದು ಬೆಳಿಗ್ಗೆ 9ಕ್ಕೆ ಗಣಪತಿ ಹವನ,11ಕ್ಕೆ ನಾಗತಂಬಿಲ, ಆಶ್ಲೇಷ ಬಲಿ ಸೇವೆ, ಮಧ್ಯಾಹ್ನ ಚಂಪಾಷಷ್ಠಿ ಮಹೋತ್ಸವ, ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ಸೇವೆಗಳು ನಡೆಯಲಿದೆ.
ಬಸ್ ತಂಗುದಾಣದ ಲೋಕಾರ್ಪಣೆ
ಮಾಡಾವು-ಬೆಳ್ಳಾರೆ ಮುಖ್ಯರಸ್ತೆಯ ಅಂಕತ್ತಡ್ಕದಿಂದ ಮುಂದೆ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಬಸ್ ತಂಗುದಾಣದ ಲೋಕಾರ್ಪಣೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ನೂತನ ಬಸ್ತಂಗುದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ
ಬಳಿಕ 11.30ಕ್ಕೆ ದೇವಸ್ಥಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ 2024ರ ಫೆ.17ರಿಂದ ಫೆ.24ರವರೆಗೆ ನಡೆಯಲಿರುವ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಆಮಂತ್ರಣವನ್ನು ಒಳಮೊಗ್ರು ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಚಿಕ್ಕಪ್ಪ ನಾಯ್ಕ್ ಅರಿಯಡ್ಕ ಅವರು ಬಿಡುಗಡೆಗೊಳಿಸುವರು.ದೇವಸ್ಥಾನದ ಬ್ರಹ್ಮಕಲಶೊತ್ಸವ ಸಮಿತಿಯ ಗೌರವಾಧ್ಯಕ್ಷ ,ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿ ಶರತ್ ಕುಮಾರ್ ರೈ ಕಾವು ಉಪಸ್ಥಿತರಿರುವರು.
ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಸಂಜೆ 5.30ರಿಂದ ಆಶಾ ಪ್ರಕಾಶ್ ನಳೀಲು ಅವರ ಸೇವಾರೂಪದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.ಯಕ್ಷಗಾನದ ಅಂಗವಾಗಿ ಚೌಕಿ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು , ಅಭಿವೃದ್ದಿ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಭಟ್ ಮುಂಬೈ ,ಕಾರ್ಯಾಧ್ಯಕ್ಷ ಅರುಣ್ ಕುಮಾರ್ ರೈ ನಳೀಲು,ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುತ್ತಕ್ಕೆ ಪೂಜೆ ಸಲ್ಲುವ ತಾಲೂಕಿನ ಏಕೈಕ ಕ್ಷೇತ್ರ
ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುತ್ತಕ್ಕೆ ಆರಾಧನೆ ನಡೆಯುತ್ತದೆ.ಆದರಿಂದ ಇದು ಭಕ್ತರ ಪಾಲಿನ ಶ್ರದ್ಧೆಯ ಹಾಗೂ ಭಕ್ತಿಯ ಕ್ಷೇತ್ರವಾಗಿದೆ.ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಸೇವೆ ಪಡೆಯುವ ಏಕೈಕ ಕ್ಷೇತ್ರವಾಗಿರುವ ಇಲ್ಲಿ ಕಂಕಣ ಭಾಗ್ಯಕ್ಕಾಗಿ, ಸಂತಾನ ಭಾಗ್ಯಕ್ಕೆ ಉದ್ಯೋಗ, ಇಷ್ಟಾರ್ಥ ಸಿದ್ದಿಗೆ,ವಿದ್ಯೆಗಾಗಿ ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಇಲ್ಲಿ ಹುತ್ತದ ರೂಪದಲ್ಲಿರುವ ಸುಬ್ರಹ್ಮಣ್ಯನಿಗೆ ರಂಗಪೂಜೆ,ಹೂವಿನ ಪೂಜೆ ಹಾಗೂ ರಾಹು ಜಪ,ಆಶ್ಲೇಷ ಬಲಿ,ಕುಂಕುಮಾರ್ಚಣೆ,ಕಾರ್ತಿಕ ಪೂಜೆ ನಾಗನ ಕಟ್ಟೆಯಲ್ಲಿ ನಾಗತಂಬಿಲ ಹಾಗೂ ಇತರ ಸೇವೆಗಳಾದ ಆಶ್ಲೇಷ ಬಲಿ,ಸರ್ಪ ಸಂಸ್ಕಾರ,ನವಗ್ರಹ ಶಾಂತಿ ಹೋಮ ನಡೆಯುತ್ತದೆ.
2024 ರ ಫೆ.17ರಿಂದ ಫೆ.24 ರವರೆಗೆ ಬ್ರಹ್ಮಕಲಶ
ಶ್ರೀಕ್ಷೇತ್ರದಲ್ಲಿ 2004ರ ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನವು ವೇಗದಲ್ಲಿ ಅಭಿವೃದ್ಧಿಯನ್ನು ಕಂಡಿದೆ.ದೇವಸ್ಥಾನದಲ್ಲಿ ಅತಿಥಿ ಗೃಹ,ಅರ್ಚಕರ ಮನೆ,ದೇವಸ್ಥಾನದ ಸುತ್ತ ಇಂಟರ್ಲಾಕ್ ಅಳವಡಿಕೆ,ದೇವಸ್ಥಾನದ ಸುತ್ತ ಶೀಟ್ ಅಳವಡಿಕೆ,ನೂತನ ವಸಂತ ಮಂಟಪ ನಿರ್ಮಾಣ ,ದೇವಸ್ಥಾನದ ಗರ್ಭಗುಡಿಗೆ ಹಾಗೂ ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಸಲಾಗಿದೆ. ಅಲ್ಲದೇ ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ.ಬ್ರಹ್ಮಕಲಶೋತ್ಸವವು 2024ರ ಫೆ.17ರಿಂದ ಫೆ.24 ರವರೆಗೆ ನಡೆಯಲಿದೆ