Bamboo Chicken: ಇಲ್ಲಿದೆ ನೋಡಿ ವಿಶಿಷ್ಟ ರುಚಿಯ ಆರೋಗ್ಯಪೂರ್ಣ ಆಹಾರ-ಬ್ಯಾಂಬೂ ಚಿಕನ್

ಅಡುಗೆಯಲ್ಲಿ, ಸಾಂಪ್ರದಾಯಿಕ, ನಾಟಿ ಸ್ಟೈಲ್ ನ ಜೊತೆಗೆ ಇಟಾಲಿಯನ್, ಮೆಕ್ಸಿಕನ್, ಚೈನೀಸ್, ಥಾಯ್, ಮುಘಲೈ ಮುಂತಾದ ಪ್ರಕಾರಗಳಿವೆ. ಪ್ರತಿಯೊಂದು ಅಡುಗೆಗೂ ಅದರದ್ದೇ ಆದ ರುಚಿಕಟ್ಟು, ತಯಾರಿ ವಿಧಾನ ಇರುತ್ತದೆ. ಅಡುಗೆ ರುಚಿಯಲ್ಲಿ, ಇವೆಲ್ಲವನ್ನೂ ಸರಿಗಟ್ಟಿ ಬದಿಗೆ ಸರಿಸಿ ನಿಮ್ಮ ರಸರಂಧ್ರಗಳನ್ನು ತೃಪ್ತಿ ಪಡಿಸುವ ಒಂದು ಅಡುಗೆಯನ್ನು ನಿಮಗಿವತ್ತು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಅದು ಟ್ರೈಬಲ್ ಕ್ಯೂಸಿನ್, ಅಂದರೆ ಆದಿವಾಸಿಗಳು ಕಂಡು ಕೊಂಡ ಬ್ಯಾಂಬೂ ಚಿಕನ್ !
ಬ್ಯಾಂಬೂ ಅಂದರೆ, ಬಿದಿರಿನ ಬಲಿತ ಕಾಂಡದ ಒಂದು ಕಡೆ ಗಂಟು ಇರುವ ತುಂಡನ್ನು ಇಲ್ಲಿ ಅಡುಗೆಗೆ ಪಾತ್ರೆಯ ಬದಲು ಬಳಸಲಾಗುತ್ತದೆ. ಬ್ಯಾಂಬೂ ಚಿಕನ್ ತಯಾರಿಸುವುದು ಅತ್ಯಂತ ಸುಲಭ. ಅಷ್ಟೇ ಅಲ್ಲ, ಈ ಅಡುಗೆ ನೈಸರ್ಗಿಕ ಕೂಡ ; ಅದೇ ಕಾರಣಕ್ಕೆ ಸಿಂಪಲ್ಲಾಗಿ ಮಾಡಿದರೂ ಅದರ ರುಚಿ ಅದ್ವಿತೀಯ.


ಇವತ್ತಿಗೂ ಹಳ್ಳಿಗಳಲ್ಲಿ ತಾಜಾ ತರಕಾರಿಗಳನ್ನು ಮತ್ತು ಮಸಾಲಾ ಪದಾರ್ಥಗಳನ್ನು ಮಾತ್ರ ಬಳಸುತ್ತಾರೆ. ಪಟ್ಟಣಗಳಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ನಾವು ಅಂಗಡಿಯಿಂದ ಕೊಂಡು ತರುತ್ತೇವೆ. ಆದಿವಾಸಿಗಳು ಮತ್ತು ಹಳ್ಳಿಗಳಲ್ಲಿ, ಆಗ ತಾನೆ ತೋಟದಿಂದ ಶುಂಠಿ ಅಗೆದು ತಂದು ಅದಕ್ಕೆ ಬೆಳ್ಳುಳ್ಳಿ ಸೇರಿಸಿ ಕಡೆಯುವ ಕಲ್ಲಿನಲ್ಲಿ ಕುಟ್ಟಿ ಜಜ್ಜಿಕೊಂಡು ಬಳಸುತ್ತಾರೆ. ಆಗ ಮಾತ್ರ ಟ್ರೈಬಲ್ ಅಡುಗೆಯ ರುಚಿ ತನ್ನ ಒರಿಜಿನಲ್ ಮಟ್ಟಕ್ಕೆ ಸಮಗಟ್ಟಲು ಸಾಧ್ಯ.
ಈ ಅಡುಗೆಯನ್ನು ನಾವು ಬಿದಿರಿನ ಕಾಂಡದಲ್ಲಿಟ್ಟು ಬೇಯಿಸುವುದರಿಂದ ಒಟ್ಟಾರೆ ಅಡುಗೆಯನ್ನು ಮನೆಯಿಂದ ಹೊರಗಡೆ, ಒಂದೋ ಕೊಟ್ಟಿಗೆಯಲ್ಲಿ, ಅಥವಾ ಅಂಗಳದಲ್ಲಿ, ನಿಮ್ಮ ತೋಟದ ಒಂದು ಸುರಕ್ಷಿತ ಮೂಲೆಯಲ್ಲಿ, ನದಿಯ ಮರಳಿನಲ್ಲಿ, ಬೆಟ್ಟದ ತಪ್ಪಲಿನಲ್ಲಿ, ನಿಮ್ಮ ಫಾರ್ಮ್ನಲ್ಲಿ ಹೀಗೆ ಒಲೆ ಹಚ್ಚಿಕೊಂಡು ಮಾಡುವ ಅಡುಗೆಯಾಗಿರುತ್ತದೆ. ಆದುದರಿಂದ ಬೆಂಕಿ ಸುತ್ತಮುತ್ತಲ ಪ್ರದೇಶಕ್ಕೆ ಹರಡದಂತೆ ಜಾಗ್ರತೆ ವಹಿಸಬೇಕು. ಒಣಗಿದ ಹುಲ್ಲು ಇರುವ ಜಾಗದಲ್ಲಿ ಅಡುಗೆ ಬೇಡ. ಅಡುಗೆಯ ನಂತರ ಸಂಪೂರ್ಣ ಬೆಂಕಿ ಆರಿಸುವುದು ನಿಮ್ಮ ಮೊದಲ ಜವಾಬ್ದಾರಿ.

ಇದೊಂದು ಆಹಾರ, ನೀವು ಡಯಟ್ ಕಾನ್ಷಿಯಸ್ ಇರಲಿ, ಡಯಾಬಿಟೀಸ್ ಇರುವವರಿರಲಿ, ಕಡಿಮೆ ಖಾರ ಮಸಾಲೆ ಬಳಸುವವರಿರಲಿ, ಫ್ರೈಡ್ ಆಹಾರವನ್ನು ಇಷ್ಟಪಡದ ಆರೋಗ್ಯಪೂರ್ಣ ಅಡುಗೆ ಇಷ್ಟಪಡುವವರಿರಲಿ- ಬ್ಯಾಂಬೂ ಚಿಕನ್ ಎಲ್ಲರನ್ನೂ ಸಮಾನವಾಗಿ ಸರ್ವ್ ಮಾಡುತ್ತದೆ. ಯಾವುದೇ ಭಯವಿಲ್ಲದೆ, ನಿಮ್ಮಅತೃಪ್ತ ನಾಲಿಗೆಯ ಜಿಹ್ವಾ ಚಾಪಲ್ಯವನ್ನು ಒಂದು ದಿನದ ಮಟ್ಟಿಗಾದರೂ ತಣಿಸಿರಿ.
ವೆಜಿಟೇರಿಯನ್ನರು ಚಿಕನ್ ಬದಲು, ಬಲಿತ ಆಲೂಗಡ್ಡೆ ಅಥವಾ ಮರಗೆಣಸನ್ನು ಬಳಸಬಹುದು. ಚಿಕನ್ ನಂತಹ ಚಿಕನ್ ಗೆ ಸ್ಪರ್ಧೆ ನೀಡುವ ರುಚಿ ನೀಡುತ್ತದೆ ಬ್ಯಾಂಬೂ ಪೊಟಾಟೋ ! ಸೂಚನೆ : ಬಿದಿರಿನ ಬೊಂಬು ಸಿಗದೇ ಹೋದರೆ, ಬಲಿತ ಹಸಿರಿರುವ ತೆಂಗಿನ ಕಾಯಿಯ ಚಿಪ್ಪು ಕೂಡ ಆಗುತ್ತದೆ.

ಬೇಕಾದ ವಸ್ತುಗಳು :

  1. ಚಿಕನ್ : 1 ಕೆಜಿ ( ಮಧ್ಯಮ – ಸಣ್ಣ ಗಾತ್ರದ್ದು)
  2. ಲಿಂಬೆ ರಸ : 1
  3. ಕಲ್ಲುಪ್ಪು : ರುಚಿಗೆ ತಕ್ಕಷ್ಟು
  4. ಮೆಣಸಿನ ಪುಡಿ : 2 ಚಮಚ
  5. ಅರಶಿನ ಪುಡಿ : 1 ಚಮಚ
  6. ಕೊತ್ತಂಬರಿ ಪುಡಿ : 2 ಚಮಚ
  7. ಜೀರಿಗೆ ಪುಡಿ : 1 ಚಮಚ
  8. ಶುಂಠಿ ಬೆಳ್ಳುಳ್ಳಿ ಪೇಸ್ಟ್ : 2 ಚಮಚ
  9. ಗರಂ ಮಸಾಲಾ : 1 ಚಮಚ
  10. ತುಪ್ಪ : 2 ಚಮಚ
  11. ಹಸಿ ಮೆಣಸು : 4
  12. ಚಕ್ಕೆ : 3 ತುಂಡು
  13. ಲವಂಗ : 8
  14. ಏಲಕ್ಕಿ : 2
  15. ಕೊತ್ತಂಬರಿ ಸೊಪ್ಪು : 1.5 ಕಪ್ಪು
  16. ಪುದಿನಾ ಸೊಪ್ಪು : 1 ಹಿಡಿ ಹೆಚ್ಚಿದ್ದು
  17. ಶುಂಠಿ 1 ತುಂಡು ಉದ್ದಕ್ಕೆ ಸೀಳಿ ಹೆಚ್ಚಿದ್ದು
  18. ಬೆಳ್ಳುಳ್ಳಿ : 4 ಎಸಳು
  19. ಈರುಳ್ಳಿ : ತಿನ್ನುವಾಗ

ಮಾಡುವ ವಿಧಾನ :

  1. ಮೊದಲಿಗೆ ಚಿಕನ್ ಗೆ ಲಿಂಬೆ ರಸ ಹಿಂದಿ ಚೆನ್ನಾಗಿ ಮಿಕ್ಸ್ ಮಾಡಿರಿ
  2. ನಂತರ, ಕಲ್ಲುಪ್ಪಿನಿಂದ ಗರಂ ಮಸಾಲಾದವರೆಗೆ ( ಐಟಂ ನ. 3 ರಿಂದ 9 ರವರೆಗೆ ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿರಿ
  3. ನಂತರ, ತುಪ್ಪದಿಂದ ಬೆಳ್ಳುಳ್ಳಿಯವರೆಗೆ ( ಐಟಂ ನ. 10 ರಿಂದ 18 ರವರೆಗೆ ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿರಿ
  4. ಈ ಮಿಶ್ರಣದ ಉಪ್ಪು/ಖಾರ ಪರೀಕ್ಷಿಸಿ. ಉಪ್ಪು ನಮ್ಮ ನಾಲಿಗೆಯ ಅಂದಾಜಿಗಿಂತ ಸ್ವಲ್ಪ ಹೆಚ್ಚಿರಬೇಕು. ಯಾಕೆಂದರೆ, ಕೋಳಿ ಮಾಂಸಕ್ಕೆ ಉಪ್ಪು-ಖಾರ ಎಳೆದುಕೊಂಡಾಗ, ಮಾಂಸಕ್ಕೆ ಉಪ್ಪು ಕಮ್ಮಿಯಾಗುತ್ತದೆ.
  5. ಕನಿಷ್ಠ ಎರಡು ಗಂಟೆಗಳಷ್ಟು ಕಾಲ ಮಾಂಸ-ಮಸಾಲಾ ಗುಪ್ಪೆ ಹಾಕಿಟ್ಟು ಮ್ಯಾರಿನೇಟ್ ಮಾಡಿ
  6. ಬಿದಿರಿನ ಕೊಳವೆಯ ತುಂಡಿಗೆ ಮುಕ್ಕಾಲು ಭಾಗದವರೆಗೆ ಚಿಕನ್ ಮಿಶ್ರಣ ತುಂಬಿಸಿ
  7. ನಂತರ ಬಿದಿರಿನ ಕೊಳವೆಯ ಬಾಯಿಯನ್ನು ಗಟ್ಟಿಯಾಗಿ ಹಸಿ ಬಾಳೆ ಎಲೆಯನ್ನು ತುರುಕಿ
  8. ಹೊರಗಡೆ ಕಟ್ಟಿಗೆಯ ಓಲೆ ಹಚ್ಚಿ. ಒಂದೇ ತರಹದ ಕಟ್ಟಿಗೆಯನ್ನು ಉಪಯೋಗಿಸಿ, ಅದರಿಂದ ಒಂದೇ ರೀತಿಯ ಶಾಖ ಉತ್ಪತ್ತಿಯಾಗುತ್ತದೆ. ಬೆಂಕಿ ದೊಡ್ಡದಾಗಿ ಹತ್ತಿಕೊಂಡ ನಂತರ ಒಂದೊಂದಾಗಿ ಬಿದಿರ ಬಾಂಬುಗಳನ್ನು ಒಲೆಯ ಮೇಲೆ ಸಪೋರ್ಟ್ ಇಟ್ಟು ಮಲಗಿಸಿ ಬೇಯಲು ಬಿಡಿ. ಶಾಖ ಬಿದಿರಿನ ಎಲ್ಲಾ ಮೂಲೆಗೂ ತಲುಪಲು ಪ್ರತಿ 8-10 ನಿಮಿಷಕ್ಕೊಮ್ಮೆ ರೋಲು ಮಾಡುತ್ತಾ ಇರಿ. ಸುಮಾರು ಅರ್ಧಗಂಟೆ ದೊಡ್ಡ ಉರಿಯಲ್ಲಿ ಬೇಯಲಿ. ನಂತರ ಕಾಲು ಗಂಟೆ ಕೆಂಡದ ಶಾಖದಲ್ಲಿ ಬೇಯಲು ಬಿಡ್.
  9. ಬೆಂದ ಮೇಲೆ, ಬಾಳೆ ಎಲೆಯ ಮೇಲೆ ಕೊಳವೆಯಿಂದ ಮಾಂಸ ಸುರಿದು ಈರುಳ್ಳಿ ತುಂಡು, ಕೊತ್ತಂಬರಿ ಬೇಕಿದ್ದರೆ ಹಾಕಿ ಕೊಡಿ.

 

Leave A Reply

Your email address will not be published.