Bengalure: ದೀಪಾವಳಿ ವಿದ್ಯುತ್ ಕಳ್ಳತನಕ್ಕೂ, ಎಚ್ ಡಿ ಕೆಗೂ ಏನಾದರೂ ಸಂಬಂಧ ಇದೆಯಾ?
H D Kumaraswamy clarified about the illegal use of electricity

ಬೆಂಗಳೂರು: ನಿವಾಸದ ದೀಪಾವಳಿಯ ಅಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪದ ಬೆನ್ನಲ್ಲೇ “ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ , ಬೆಸ್ಕಾಂ ಅಧಿಕಾರಿಗಳು ಬರಲಿ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ವಿಚಾರವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ ಎಚ್ಡಿಕೆ, “ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ನೋಟಿಸ್ ನೀಡಲಿ. ನಾನು ದಂಡ ಕಟ್ಟುತ್ತೇನೆ.” ಎಂದಿದ್ದಾರೆ.
ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಲಾಗಿದೆ :
ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ.
ಸೋಮವಾರ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್‌ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ.
ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ ಕರ್ನಾಟಕ ಕಾಂಗ್ರೆಸ್ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಃಸ್ಥಿತಿಯ ಬಗ್ಗೆ ನನಗೆ ಮರುಕ ಇದೆ.
ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧನಿದ್ದೇನೆ.
ಇದನ್ನು ಓದಿ: HSRP Number Plate: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ !