

Madhu bangarappa: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಕೂಡ ಸದಾ ಕ್ರಿಯಾಶೀಲರಾಗಿರುವಂತಹ ಮಧು ಬಂಗಾರಪ್ಪನವರು(Madhu bangarappa) ಶಿಕ್ಷಣ ಮಂತ್ರಿಗಳಾಗಿದ್ದು ಹಲವಾರು ಮಹತ್ವದ ನಿಯಮಗಳನ್ನು ಜಾರಿಗೆ ತರುವುದಾಗಲಿ, ನಿರ್ಧಾರಗಳನ್ನು ಕೈಗೊಳ್ಳುವುದಾಗಲಿ ಮಾಡುತ್ತಿದ್ದಾರೆ. ಅಂತೆಯೇ ಇದೀಗ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಸಚಿವರು ಹೊಸ ರೂಲ್ಸ್ ತಂದಿದ್ದಾರೆ.
ಹೌದು, ಇತ್ತೀಚೆಗಷ್ಟೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ವಾರಕ್ಕೆ ಎರಡು ಬಾರಿ ಮೊಟ್ಟೆ, ಕಡಲೆ ಮತ್ತು ಬಾಳೆಹಣ್ಣುಗಳನ್ನು ನೀಡುವ ನಿಬಂಧನೆಯನ್ನು ಸರ್ಕಾರ ಪರಿಚಯಿಸಿತ್ತು. ಸಚಿವರು ಇದನ್ನು ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಶಾಲೆಯಲ್ಲಿ ಸ್ವಚ್ಛತೆ ಕಾರ್ಯದ ಕುರಿತು ಹೊಸ ಆದೇಶ ಹೊರಡಿಸಿರೋ ಸಚಿವರು ಖಡಕ್ ಸಂದೇಶವನ್ನೂ ರವಾನಿಸಿದ್ದಾರೆ.
ಅದೇನೆಂದರೆ ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯ ಸ್ವಚ್ಛತೆ ಕೆಲಸ ನೀಡುವಂತಿಲ್ಲ. ಇದು ಉತ್ತಮ ನಡೆ ಅಲ್ಲ. ಆದೇಶ ನೀಡಿದ ಮೇಲೂ ಸ್ವಚ್ಛತೆ ಕೆಲಸ ನೀಡಿದ್ದು ಕಂಡು ಬಂದರೆ ಅಲ್ಲಿನ ಶಿಕ್ಷಕರು ಮತ್ತು ಆ ಶಾಲೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸ ನಿಯಮ ತಂದಿದ್ದಾರೆ. ಅಲ್ಲದೆ ಶಾಲೆಯ ಸ್ವಚ್ಛತೆಗೆ ಗುತ್ತಿಗೆ ಆಧಾರದ ಮೇಲೆ ಹೊರ ನೌಕರರ ನೇಮಕ ಮಾಡಲು ಕೂಡ ಚಿಂತನೆ ನಡೆಸಲಾಗಿದೆ. ಸರಕಾರ ಸ್ವಚ್ಛತೆಗೆ ಸಹ ಪ್ರತ್ಯೇಕ ಅನುದಾನ ನೀಡುತ್ತಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಅದೇಶಿಸಿದ್ದಾರೆ.
ಅಂದಹಾಗೆ ಶಾಲೆಯಲ್ಲಿ ಈ ಸ್ವಚ್ಛತೆ ಕುರಿತಾಗಿ, ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವ ಬಗ್ಗೆಯಾಗಲಿ ಹಿಂದಿನಿಂದಲೂ ಭಾರೀ ಚರ್ಚೆಯಾಗುತ್ತಿತ್ತು. ಸರ್ಕಾರಗಳು ನಿಯಮ ತಂದರೂ ಚಾಚೂತಪ್ಪದೆ ಪಾಲನೆಯಾಗುತ್ತಿರಲಿಲ್ಲ. ಆದರೀಗ ನೂತನ ಶಿಕ್ಷಣ ಸಚಿವರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ, ಕೆಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದರಿಂದ ಮುಂದೆ ಇದ ಪರಿಣಾಮುಕಾರಿಯಾಗಿ ಜಾರಿಯಾಗಬಹುದೆಂದು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: KSRTC : ರಾತ್ರೋ ರಾತ್ರಿ ಕಠಿಣ ನಿರ್ಧಾರ ಮಾಡಿದ KSRTC- ಪ್ರಯಾಣಿಕರು ಶಾಕ್ !!













