Sowjanya case: ಸರ್ಕಾರ ತನಿಖೆ ನಡೆಸಲಿ ಎಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ; ಸರ್ಕಾರಕ್ಕೆ ಬಹಿರಂಗ ಪತ್ರ ಬರೆದು ಒತ್ತಾಯಿಸಲು ಕೇಳಿಬಂದ ಭಾರೀ ಒತ್ತಾಯ !
ಮಂಗಳೂರು: ಧರ್ಮಸ್ಥಳದಲ್ಲಿ ನಡೆದ ಧರ್ಮ ಸಂರಕ್ಷಣಾ ಯಾತ್ರೆ ಭಾರೀ ಜನ ಸಂದಣಿಯ ಜತೆ ನಡೆದಿದೆ. ಕೊಲ್ಲೂರಿನಿಂದ ಹೊರಟ ರಥಯಾತ್ರೆ ಉಡುಪಿಯ ಮೂಲಕ ಸಾಗಿ, ಉಜಿರೆ ತಲುಪಿ ನಂತರ ದೊಡ್ಡ ಸಂಖ್ಯೆಯಲ್ಲಿ ಧರ್ಮಸ್ಥಳದ ತನಕ ಸಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾತಾಡಿ. ಆ ಸಂದರ್ಭದಲ್ಲಿ ಹೇಳಿದ ಒಂದು ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ‘ಸೌಜನ್ಯ ಪ್ರಕರಣವನ್ನು ತನಿಖೆಗೆ ಒಪ್ಪಿಸಲು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ, ಕೋರ್ಟ್ ಗಳನ್ನು ಕೇಳಿಕೊಳ್ಳುತ್ತೇನೆ’ ಎಂದು ವೀರೇಂದ್ರ ಹೆಗ್ಗಡೆಯವರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ. ಸರ್ಕಾರಕ್ಕೆ ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದು ಒತ್ತಾಯ ಮಾಡಬೇಕು ಎನ್ನುವ ಭಾರೀ ಒತ್ತಾಯ ಕೇಳಿ ಬಂದಿದೆ.
ಸೌಜನ್ಯ ಪ್ರಕರಣದ ಆರೋಪಗಳ ಬಗ್ಗೆ ಸೂಚ್ಯವಾಗಿ ಮೌನ ಮುರಿದು ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ಯಾವುದೇ ರೀತಿಯ ತನಿಖೆಯಾಗಲಿ. ದಾಖಲೆಯಿದ್ದರೆ ಸರ್ಕಾರಕ್ಕೆ ಒಪ್ಪಿಸಲಿ, ಸರ್ಕಾರವನ್ನು ಕೇಳಿಕೊಳ್ಳುತ್ತೇನೆ, ಕೋರ್ಟ್ ಗಳನ್ನು ಕೇಳಿಕೊಳ್ಳುತ್ತೇನೆ. ನೀವು ಏನು ಬೇಕಾದರೂ ತನಿಖೆ ಮಾಡಿ. ಯಾವಾಗ ಬೇಕಾದರೂ ತನಿಖೆ ಮಾಡಿ” ಎಂದಿದ್ದಾರೆ. ಹಾಗೆ ಭಾಷಣದಲ್ಲಿ ಅವರು ಹೇಳಿದ ಮರು ತನಿಖೆಯ ಒತ್ತಾಯವನ್ನು ಅವರು ಸರ್ಕಾರಕ್ಕೂ ಮಾಡುತ್ತಾರೆಯಾ ? ಎನ್ನುವ ಚರ್ಚೆಗಳು ಶುರುವಾಗಿದೆ. ಯಾಕೆಂದರೆ ಕಳೆದ ಸಲ ‘ಸಿಐಡಿ ತನಿಖೆಗೆ ಒತ್ತಾಯಿಸಿದವನೇ ನಾನು ಸಿಬಿಐ ತನಿಖೆಗೆ ಒತ್ತಾಯಿಸಿದವನೇ ನಾನು’ ಎಂದು ವೀರೇಂದ್ರ ಹೆಗ್ಗಡೆಯವರು ಹೇಳಿಕೊಂಡಿದ್ದರು. ನನ್ನ ಒತ್ತಾಯದ ಮೇಲೆಯೇ ಸರಕಾರ ತನಿಖೆಗೆ ಆದೇಶಿಸಿತ್ತು ಎಂದು ಅವರು ಹೇಳಿದ್ದರು. ಹಾಗಾಗಿ, ‘ಈ ಸಲ ಕೂಡ ನೀವು ಸರ್ಕಾರಕ್ಕೆ ಒತ್ತಾಯ ಮಾಡಿ. ಅದೊಂದು ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಸೌಜನ್ಯಪರ ಅನುಕಂಪ ಉಳ್ಳವರು ಕೇಳಿ ಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ವೀರೇಂದ್ರ ಹೆಗ್ಗಡೆಯವರ ನಿನ್ನೆಯ ಮಾತು ಮತ್ತು ಅವರು ಮುಂದೆ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಕುತೂಹಲ ಉಂಟಾಗಿದೆ.
ನಿನ್ನೆ ಧರ್ಮ ಸಂರಕ್ಷಣಾ ಯಾತ್ರೆಯ ನಂತರ ಅಲ್ಲಿ ಮಾತನಾಡಿದ ಅವರು, “ಇಲ್ಲಿರುವ ಭಕ್ತರು ಧರ್ಮ ಸೈನಿಕರು. ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಎಂದರೆ ಅದಕ್ಕೆ ಮಂಜುನಾಥ ಸ್ವಾಮಿ ಮತ್ತು ಚಂದ್ರನಾಥ ಸ್ವಾಮಿ ಕಾರಣ. ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ನೀವೇ ಶಿಷ್ಟ ರಕ್ಷಣೆಯನ್ನು ಮಾಡಬೇಕು” ಎಂದು ಭಕ್ತರಿಗೆ ತಿಳಿಸಿದರು. “ಕ್ಷೇತ್ರದ ಕಾರ್ಯವನ್ನು ಜನರು ಮೆಚ್ಚಿದ್ದಾರೆ. ಇಲ್ಲಿಗೆ ಇಂದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ನಮ್ಮಿಂದ ಏನೂ ಅಪೇಕ್ಷಿಸದೆ ನಿಮ್ಮ ಪರವಾಗಿ ಇದ್ದೇವೆ ಎಂದು ಬೆಂಬಲ ನೀಡಿದ್ದೀರಿ. ಯಾವುದೇ ದೇಶವನ್ನು ಹಾಳು ಮಾಡಬೇಕಾದರೆ, ಮೊದಲು ಸಂಸ್ಕೃತಿಯನ್ನ ನಾಶ ಮಾಡು, ಆಗ ಆ ದೇಶ ನಾಶ ಆಗುತ್ತೆ ಅಂತಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅಪಾಯ ಬೇರೆ ಕ್ಷೇತ್ರಗಳಿಗೂ ಬರಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದರು. ಅವರ ಮಾತುಗಳಲ್ಲಿ ಈಗ ಸೌಜನ್ಯ ವಿಷಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಆತಂಕ ಸ್ಪಷ್ಟವಾಗಿ ಕಂಡುಬಂತು. ನಿಂದನೆಯಿಂದ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನೀವೆಲ್ಲರೂ ಸ್ವಾಸ್ಥ್ಯ ಸಂಕಲ್ಪವನ್ನ ಮಾಡಬೇಕು ಎಂದು ಕರೆ ನೀಡಿದರು. ಈ ಸಂದರ್ಭಗಳಲ್ಲಿ ಅವರು ಹೇಳಿದ ಒಂದು ಹೇಳಿಕೆ ಗಮನ ಸೆಳೆಯಿತು. “ದುಷ್ಟಶಕ್ತಿಗಳು ವಿಜೃಂಭಿಸಿವೆ” ಎಂದು ಅವರು ಹೇಳಿದ್ದಾರೆ. ಆ ಮೂಲಕ ಸೌಜನ್ಯ ಹೋರಾಟದ ಬಿಸಿ ಅವರಿಗೆ ತಟ್ಟಿರುವ ಬಗ್ಗೆ ಅವರ ಮಾತುಗಳಲ್ಲಿ ಕಂಡು ಬಂದಿದೆ.
ನಿಮ್ಮ ದೀಕ್ಷೆಯಿಂದ ಈ ಎಲ್ಲಾ ಕಷ್ಟಗಳೂ ದೂರವಾಗಲಿ. ಧರ್ಮಸ್ಥಳಕ್ಕೆ ಆಪತ್ತು ಬಂದಾಗ ನೀವು ಕೈಗೊಂಡ ಈ ಪ್ರಾರ್ಥನೆಯನ್ನು ಸ್ವಾಮಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ಸ್ವಾಮೀಜಿಗಳ ಸಹಾಯವನ್ನು ಅವರು ಯಾಚಿಸಿದರು ಜೊತೆಗೆ ತಾವು ಕೂಡ ಸಹಾಯ ಹಸ್ತ ನೀಡುವುದಾಗಿ ಹೇಳಿದ್ದಾರೆ.