Beltangady: ಮತ್ತೆ ಮನೆ ಕೆಡವಲು ಮುಂದಾದ ಅರಣ್ಯ ಇಲಾಖೆ : ಸ್ಥಳದಲ್ಲಿ ಜಮಾಯಿಸಿದ ಜಿಲ್ಲೆಯ ಬಿಜೆಪಿ ಶಾಸಕರು ,ಸಾರ್ವಜನಿಕರು

karavali putturu belthangady news forest department and mla belthangady news

ಬೆಳ್ತಂಗಡಿ: ಕಳೆಂಜದಲ್ಲಿ ಮೊನ್ನೆ ನಡೆದ ಘಟನೆಯ ಸ್ಥಳದಲ್ಲಿ ಇಂದು ಪುನಃ ಏಕಾಏಕಿ ಬಂದು ಮನೆ ತೆರವಿಗೆ ಬಂದಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಇದೀಗ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಘಟನಾ ಸ್ಥಳದಲ್ಲಿದ್ದಾರೆ.

ಶಾಸಕ ಹರೀಶ್‌ಪೂಂಜ ಅವರು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಬಂದಿದ್ದು, ಇವರ ಜೊತೆ ಜಿಲ್ಲೆಯ ಶಾಸಕರಾದ ರಾಜೇಶ್‌ ನಾಯಕ್‌, ಭರತ್‌ ಶೆಟ್ಟಿ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್‌, ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್‌ ಜೊತೆಗೂಡಿದರು.

ಸೇಸ ಗೌಡ ಅವರ ಮನೆ ಧ್ವಂಸ ಗೊಳಿಸಲು ಅರಣ್ಯ ಇಲಾಖೆ ಸಜ್ಜಾದ ಸರಕಾರದ ವಿರುದ್ಧ ದ.ಕ.ಜಿಲ್ಲೆಯ ಶಾಸಕರು, ಕಾರ್ಯಕರ್ತರು ಸಹಿತ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

ಕೃಷಿ ಚಟುವಟಿಕೆ ಮಾಡಿಕೊಂಡು ಬದುಕುತ್ತಿರುವ ಕುಟುಂಬಕ್ಕೆ ಯಾವುದೇ ಮುನ್ಸೂಚನೆಯನ್ನೂ ನೀಡದೆ ದಬ್ಬಾಳಿಕೆ ಮಾಡಿ ಒಕ್ಕಲೆಬ್ಬಿಸಲು ಸಂಚು ರೂಪಿಸಿರುವ ಕುರಿತು ಸರಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಮುಂದೆ ಏನೇ ಆದರೂ ಅದಕ್ಕೆ ಸರಕಾರವೇ ನೇರ ಹೊಣೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಸ್ಥಳದಲ್ಲಿ  ಬಿಗುವಿನ ವಾತಾವರಣ:
ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದಾರೆ. ಹಾಗೆನೇ ಅರಣ್ಯಾಧಿಕಾರಿಗಳು ಬಡವರ ಮನೆ ತೆರವುಗೊಳಿಸಯೇ ಸಿದ್ಧ ಎಂಬ ಹಠಕ್ಕೆ ಬಿದ್ದಂತಿದೆ. ತೆರವುಗೊಳಿಸುವುದಾದರೆ ಅರಣ್ಯ ಮತ್ತು ಕಂದಾಯ ಇಲಾಖೆ ಸರ್ವೇ ನಡೆಸಿ ತೆರವುಗೊಳಿಸಿ ಎಂದು ಶಾಸಕರು ಆಗ್ರಹಿಸಿದ್ದಾರೆ.

ಸ್ಥಳದಲ್ಲಿ ನೂರಾರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಜಮಾಯಿಸಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಿದ ಮನೆ ತೆರವಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದು, ಇದನ್ನು ತಡೆದ ಎಂಎಲ್‌ಸಿ ಪ್ರತಾಪಸಿಂಹ ನಾಯಕ್‌ ಅವರನ್ನು ಲೆಕ್ಕಿಸದೆ ಎಸಿಎಫ್‌ ಸುಬ್ಬಯ್ಯ ನಾಯ್ಕ್‌ ಹಾಗೂ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್‌ ತಳ್ಳಾಟ ನಡೆಸಿರು ಘಟನೆ ನಡೆದಿದೆ ಎಂದು ವರದಿಯಾಗಿದೆ.

ಘಟನೆ ವಿವರ: ಕಳೆಂಜ ಗ್ರಾಮದ ಅಮ್ಮಿಡ್ಕ ಕುದ್ದಮನೆ ಸೇಸ ಗೌಡ ಎಂಬುವವರ ಕುಟುಂಬವು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಅ.6 ರಂದು ಅರಣ್ಯ ಇಲಾಖೆ ಬಡ ಕುಟುಂಬದ ಫೌಂಡೇಶನ್‌ ಕಿತ್ತೆಸೆದಿದೆ. ಇದರಿಂದ ನೊಂದ ಮನೆ ಮಗ ನೊಂದು ಆತ್ಮಹತ್ಯೆಗೆ ಮುಂದಾಗಿದ್ದ.

ನಂತರ ಸ್ಥಳಕ್ಕೆ ಬಂದ ಶಾಸಕ ಹರೀಶ್‌ ಪೂಂಜ ಅವರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಗಂಭೀರ ಮಾತಿನ ಚಕಮಕಿ ನಡೆಯಿತು. ನಂತರ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಕರೆ ಮಾಡಿದ ಹರೀಶ್ ಪೂಂಜಾ ಸಮಸ್ಯೆ ಬಗ್ಗೆ ಹೇಳಿದ್ದು, ಸಚಿವರು ಸದ್ಯ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮೇಲಾಧಿಕಾರಿಗಳಿಂದ ವರದಿ ಪಡೆದು ಬಳಿಕ ನಿರ್ಧಾರ ಕೈಗೊಳ್ಳಲು ಆದೇಶ ನೀಡಿದ್ದರು.

ಅನಂತರ ಈ ಘಟನೆಯ ಕುರಿತು ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅ.7 ರಂದು ಅಕ್ರಮವಾಗಿ ಮನೆ ನಿರ್ಮಾಣ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರ ಬಗ್ಗೆ ಅ.7ರಂದು ರಾತ್ರಿ ಪ್ರಕರಣ ದಾಖಲು ಮಾಡಿದ್ದಾರೆ.

 

ಇದನ್ನು ಓದಿ: Crude Oil Price: ಇಸ್ರೇಲ್-ಪ್ಯಾಲೆಸ್ತೀನ್‌ ಯುದ್ಧ ಪರಿಣಾಮ; ಕಚ್ಚಾ ತೈಲ ಬೆಲೆ ಏರಿಕೆ ಸಂಭವ, ಭಾರತದ ಮೇಲೆ ಪರಿಣಾಮ?! ಇಂದಿನ ಡೀಸೆಲ್‌, ಪೆಟ್ರೋಲ್‌ ದರವೆಷ್ಟು?

Leave A Reply

Your email address will not be published.