Dakshina Kannada : ನಿಫಾ ವೈರಸ್ ಹೆಚ್ಚಳ- ಕರ್ನಾಟಕದ ಈ ಜಿಲ್ಲೆಯಲ್ಲಿ ಹೈ ಅಲರ್ಟ್! ಆರೋಗ್ಯ ಇಲಾಖೆಯಿಂದ ಬಂತು ಮಾರ್ಗಸೂಚಿ !

Nipah Virus: ಕೇರಳದಲ್ಲಿ ನಿಫಾ ವೈರಸ್(Nipah Virus) ಅಬ್ಬರ ಜೋರಾಗಿದೆ. ಕೇರಳದಲ್ಲಿ ತೀವ್ರ ಜ್ವರದಿಂದ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಇವರಿಗೆ ನಿಫಾ ವೈರಸ್ ತಗುಲಿದ್ದು ದೃಢವಾಗಿದೆ.

ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳವಾದ ಪರಿಣಾಮ ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಇಲಾಖೆ ಮುನ್ನೆಚರಿಕಾ ಕ್ರಮವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಅವರ ನೇತೃತ್ವದಲ್ಲಿ ಇಂದು ಮುಂಜಾನೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಪ್ರತಿ ಜಿಲ್ಲೆಯ ಡಿಹೆಚ್ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದ್ದಾರೆ.

 

ರಾಜ್ಯದ ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದ್ದು, ನಿಫಾ ರೋಗ ಲಕ್ಷಣಗಳು ಪತ್ತೆಯಾದರೆ ನಿಗಾ ವಹಿಸಲು ಸೂಚಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಇನ್ನು 2-3 ದಿನಗಳ ಕಾಲ ಪ್ರಕರಣಗಳ ಬಗ್ಗೆ ನಿಗಾ ವಹಿಸಲಾಗುತ್ತದೆ. ಆರೋಗ್ಯ ಇಲಾಖೆ(Karnataka Health Department) ಈಗ ಪ್ರತ್ಯೇಕ ಸುತ್ತೋಲೆ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡಕ್ಕೆ ಜಿಲ್ಲೆಯ ಮೇಲೆ ವಿಶೇಷ ನಿಗಾ ಇಡಲು ಸೂಚನೆ ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಣೆ ಮಾಡಿದೆ. ಗಡಿಯಲ್ಲಿರುವ 164 ಹಳ್ಳಿಗಳಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಪಾಸಿಟಿವ್ ಕೇಸ್ ಪತ್ತೆಯಾದರೆ ಪ್ರತ್ಯೇಕವಾಗಿ ಐಸೋಲೇಷನ್ ಮಾಡಲು ಸೂಚನೆ ನೀಡಲಾಗಿದೆ.

 

ವೈರಸ್ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?

ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿಂದರೆ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿರುವ ಹಿನ್ನೆಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಕಾಣಿಸಿಕೊಳ್ಳಬಹುದು.ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕೂಡ ಕಾಣಿಸಿಕೊಳ್ಳಬಹುದು. ಈ ರೀತಿಯ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸಿಕೊಳ್ಳುವುದಲ್ಲದೆ ಇವರು ಪ್ರಜ್ಞಾ ಹೀನ ಸ್ಥಿತಿಯಲ್ಲಿರುತ್ತಾರೆ. ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸಿ ಸಾವಿಗೆ ಕೂಡ ಕಾರಣವಾಗಬಹುದು.

ರಾಜ್ಯದಲ್ಲಿ ನಿಫಾ ವೈರಸ್ ಆತಂಕ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ದಕ್ಷಿಣ ಕನ್ನಡದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ನಿಗಾವಹಿಸಲು ಸೂಚಿಸಿ ಹೈ ಅಲರ್ಟ್ ಘೋಷಿಸಲಾಗಿದೆ.

# ಶಂಕಿತ ಪ್ರಕರಣದ ಕುರಿತಂತೆ ಜಿಲ್ಲಾ ಕಣ್ಗಾವಲು ಕಚೇರಿಗೆ ಮಾಹಿತಿ‌ ನೀಡಲು ಸೂಚಿಸಲಾಗಿದೆ.
# ನಿಫಾ ವೈರಸ್ ನಿರ್ವಹಣೆ ಮಾಡಲು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಾದಿರಿಸಲು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
# ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

# ರೋಗಕ್ಕೆ ಸಂಬಂಧಿಸಿದ ಔಷಧಿಗಳನ್ನು ಶೇಖರಿಸಲು ಹಾಗೂ ನಿಫಾ ರೋಗ ಲಕ್ಷಣಗಳ ಕುರಿತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.
# ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್ಐವಿ ಲ್ಯಾಬ್ ಗೆ ಕಳುಹಿಸಲು ಪೂರಕ ವ್ಯವಸ್ಥೆ ಮಾಡಬೇಕು.
# ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

 

Leave A Reply

Your email address will not be published.