Puttur: ಪುತ್ತೂರು ಕಿಲ್ಲೆ ಗಣೇಶೋತ್ಸವ ರೂವಾರಿ ಎನ್. ಸುಧಾಕರ ಶೆಟ್ಟಿ ವಿಧಿ ಲೀನ ಸಾಮಾಜಿಕ, ಧಾರ್ಮಿಕ ಮತ್ತು ಕಾಂಗ್ರೆಸ್ ಮುಖಂಡ ಇನ್ನಿಲ್ಲ
Dakshina Kannada news Puttur N Sudhakar Shetty passed away
N Sudhakar Shetty: ಪುತ್ತೂರು: ಸಾಮಾಜಿಕ-ಧಾರ್ಮಿಕ ಮುಂದಾಳು ಮತ್ತು ದಾನಿ ಎನ್ ಸುಧಾಕರ ಶೆಟ್ಟಿ( N Sudhakar Shetty), ‘ಸುದಾಣ್ಣ ‘ ಇನ್ನಿಲ್ಲ. ದಕ್ಷಿಣ ಕನ್ನಡ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲೂ ಪ್ರಸಿದ್ಧಿ ಪಡೆದಿರುವ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಗಣೇಶೋತ್ಸವ ಆಚರಣೆಯನ್ನು ಆಯೋಜಿಸುವ ‘ಕಿಲ್ಲೆ ಮೈದಾನ ದೇವತಾ ಸಮಿತಿ’ಯ ಅಧ್ಯಕ್ಷರಾದ ಉದ್ಯಮಿ, ಸಾಮಾಜಿಕ-ಧಾರ್ಮಿಕ ಮುಂದಾಳು ಮತ್ತು ದಾನಿ ಎನ್ ಸುಧಾಕರ ಶೆಟ್ಟಿ ಅವರು ಭಾನುವಾರ (ಸೆ.10) ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ಬಾರಿಯ ಗಣೇಶೋತ್ಸವ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ, ಅದರ ಪೂರ್ವ ಸಿದ್ಧತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನೆಲ್ಲಿಕಟ್ಟೆ ಸುಧಾಕರ ಶೆಟ್ಟಿ ಅವರ ಅನಿರೀಕ್ಷಿತ ಅಗಲಿಕೆ ಅವರ ಬಂಧುಗಳಿಗೆ, ಹಿತೈಷಿಗಳಿಗೆ ಮತ್ತು ಪುತ್ತೂರಿನ ಜನತೆಗೆ ಭಾರೀ ಆಘಾತ ನೀಡಿದೆ.
ಕಳೆದ 42 ವರ್ಷಗಳಿಂದ ಸುಧಾಕರ ಶೆಟ್ಟಿ ಅವರು ದೇವತಾ ಸಮಿತಿಯ ಅಧ್ಯಕ್ಷರಾಗಿ ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ರೂವಾರಿಯಾಗಿದ್ದಾರೆ.
ಮಾತ್ರವಲ್ಲದೇ, ಅವರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾಗಿ, ಬ್ರಹ್ಮ ರಥ ಸಮರ್ಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ಮಾತ್ರವಲ್ಲದೇ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸ್ಥಳೀಯ ರಾಜಕಾರಣದಲ್ಲೂ ಅವರದು ಪರಿಚಿತ ಹೆಸರು. ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸುಧಾಕರ ಶೆಟ್ಟಿ ಅವರು ಹತ್ತು ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.1999 ಮತ್ತು 2004 ರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ರಾಜಕಾರಣದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದು ಅವರು ಸೋಲು ಕಂಡಿದ್ದರು.
ವಿದ್ಯಾರ್ಥಿ ದಿಸೆಯಿಂದಲೂ ಸಾಮಾಜಿಕ ಧಾರ್ಮಿಕ ರಾಜಕೀಯ, ಕ್ರೀಡಾ ಕ್ಷೇತ್ರಗಳ ಗುರುತಿಸಿಕೊಂಡಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದರು. ಎಲ್ಲರ ಪ್ರೀತಿಪಾತ್ರರಾಗಿದ್ದ ‘ಸುಧಣ್ಣ’. ಇಂದು (ಸೆ.11) ಅವರ ಮೃತದೇಹ ನೆಲ್ಲಿಕಟ್ಟೆಯಲ್ಲಿರುವ ಅವರ ಮನೆಗೆ ಬರಲಿದೆ ಎನ್ನುವ ಮಾಹಿತಿ ಇದ್ದು ಅಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.