Mangalore: ವಿದ್ಯಾರ್ಥಿನಿ ಆತ್ಮಹತ್ಯೆ; ಪರೀಕ್ಷೆಯಲ್ಲಿ ಫೇಲ್ ಆಗಿದ್ದೇ ಕೃತ್ಯ ಎಸೆಗಲು ಕಾರಣವಾಯಿತೇ?
Mangalore: ವಿದ್ಯಾರ್ಥಿನಿಯೋರ್ವಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಯಂತಹ ಘೋರ ಕೃತ್ಯ ಎಸಗಿರುವಂತಹ ಘಟನೆಯೊಂದು ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ.
ಬಿಜೈನಲ್ಲಿ ಇರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತಿದ್ದ ದಂಪತಿಗಳ ಪುತ್ರಿಯಾಗಿರುವ ವಿದ್ಯಾರ್ಥಿನಿಯೇ ಆತ್ಮಹತ್ಯೆಗೈದಿದ್ದಾಳೆ. ಈಕೆ ನಗರದ ಕಾಲೇಜ್‌ವೊಂದರಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ಈ ದುರ್ಘಟನೆ ನಡೆದಿದ್ದು, ತಾಯಿ ಅಪಾರ್ಟ್‌ಮೆಂಟ್ ಗಳ ಕಸ ಸಂಗ್ರಹಿಸಲು ಹೋದಾಗ, ಒಬ್ಬಳೇ ಇದ್ದ ವಿದ್ಯಾರ್ಥಿನಿ ಬಾಗಿಲು ಲಾಕ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಸ ಬಿಸಾಡಿ ತಾಯಿ ವಾಪಾಸ್ ಬಂದಾಗ ಬಾಗಿಲು ಲಾಕ್ ಆಗಿದ್ದು, ಎಷ್ಟೇ ಬಾಗಿಲು ಬಡಿದರೂ ತೆಗೆಯದೇ ಇದ್ದಾಗ, ಕಿಟಕಿಯಿಂದ ನೋಡಿದಾಗ, ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿಯ ತಾಯಿ ಹೇಳಿರುವ ಪ್ರಕಾರ, ಯುವತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇ ಈ ಕೃತ್ಯಕ್ಕೆ ಕೈ ಹಾಕಲು ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.