Sowjanya Murder Case: ಸೌಜನ್ಯ ಪ್ರಕರಣ: ಒಕ್ಕಲಿಗರ 150 ಮುಖಂಡರಿಂದ ಆದಿಚುಂಚನಗಿರಿ ಶ್ರೀಗಳ ಭೇಟಿಗೆ ದಿನ ನಿಗದಿ; ಉಗ್ರ ಸ್ವರೂಪ ಪಡೆಯಲು ಹೊರಟ ಹೋರಾಟ !
Sowjanya Murder Case: ಧರ್ಮಸ್ಥಳದ (dharmastala) ಯುವತಿ ಸೌಜನ್ಯಳ ಅತ್ಯಾಚಾರ & ಕೊಲೆ ಪ್ರಕರಣ (Sowjanya Murder Case) ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಸೆ.10ರಂದು 150ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಸಮುದಾಯದ ನಾಯಕರು ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ (Sowjanya case) ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹ ಕೇಳಿಬರುತ್ತಿದ್ದು, ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಲಿದೆ. ಇದೀಗ ಪ್ರಬಲ ಒಕ್ಕಲಿಗ ಸಮುದಾಯ ಕೂಡ ಕಣಕ್ಕೆ ಇಳಿದಿದ್ದು ಸೌಜನ್ಯ ನ್ಯಾಯದ ಹೋರಾಟಕ್ಕೆ ಹೆಚ್ಚು ಬಲ ಸಿಕ್ಕಿದೆ.
ಒಕ್ಕಲಿಗ ಸಮುದಾಯದ ಪ್ರಬಲ ಮಠವಾಗಿರುವ ಶ್ರೀ ಆದಿಚುಂಚನಗಿರಿ ಮಠ ಸೌಜನ್ಯ ಗೌಡ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ತನ್ನ ಸಂಪೂರ್ಣ ಬೆಂಬಲವನ್ನು ನೀಡಿದೆ. ಇದರಿಂದ ಸಹಜವಾಗಿಯೇ ಸೌಜನ್ಯ ಹೋರಾಟಕ್ಕೆ ಭಾರಿ ಮಟ್ಟದ ಬಲ ಸಿಕ್ಕಂತಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಗೌಡರ ಯಾನೆ ಒಕ್ಕಲಿಗರ ಸಂಘದ ಒಟ್ಟು 150 ಕ್ಕೂ ಹೆಚ್ಚು ಮಂದಿ ಪ್ರಮುಖರು ಸೆ.10 ರಂದು ಶ್ರೀ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಸೌಜನ್ಯ ಹೋರಾಟ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಡಿ ಬಿ ಬಾಲಕೃಷ್ಣ ಅವರು ಈ ಬಗ್ಗೆ ತಿಳಿಸಿದ್ದಾರೆ. ಸೌಜನ್ಯ ಹತ್ಯೆ ಪ್ರಕರಣದ ಹಿಂದೆ ಕಾಣದ ಕೈಗಳಿವೆ. ಮೊದಲು ಆ ಕೈಗಳನ್ನು ಬಂಧಿಸಬೇಕು. ಮುಂದೆ ಯಾವುದೇ ಹೆಣ್ಣಿಗೂ ಈ ರೀತಿ ಆಗಬಾರದು, ಇಂತಹ ಅನ್ಯಾಯ ಆಗಬಾರದು. ಹಾಗಾಗಿ ಕೂಡಲೇ ಈ ಪ್ರಕರಣದ ಮರು ತನಿಖೆಯನ್ನು ನಡೆಸಿ, ಕೃತ್ಯವೆಸಗಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು ಎಂದರು.
ಜೊತೆಗೆ ಈ ಪ್ರಕರಣದ ಕುರಿತು ಮಾತನಾಡಲು ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಲಿದ್ದೇವೆ. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗೌಡರ ಯಾನೆ ಒಕ್ಕಲಿಗರ ಸಂಘದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಬಿಗ್ ಶಾಕ್ ! ಚುನಾವಣೆ ಹೊತ್ತಲ್ಲೇ ಪಕ್ಷ ತೊರೆದ ದೇಶದ ಪ್ರಭಾವಿ ನಾಯಕ !