ಕಾಂತಾರದ ದೈವದ ರೂಪ ತಾಳುವ ನಲಿಕೆಯವರ ವೃತ್ತಿಯೇ ಒಂದು ವರ್ಣರಂಜಿತ ಕಥೆ : ಕಟ್ಟಬೇಕಿದೆ ತೆಲಿಕೆಯ ನಲಿಕೆಯವರ ಹೊಸ ಸಂಘ !
ದೈವಾರಾಧನೆಯ ಕೇಂದ್ರ ಶಕ್ತಿಗಳೆನಿಸಿಕೊಂಡು ತುಳುನಾಡಿನ ಸಂಸ್ಕೃತಿಗೆ ಇಡೀ ಜಗತ್ತಿನಲ್ಲೇ ವಿಶಿಷ್ಟ ಛಾಪು ಮೂಡಿಸಿದವರಲ್ಲಿ ತುಳುನಾಡಿನ ನಲಿಕೆ ಸಮುದಾಯದವರು ಪ್ರಮುಖರಾಗಿದ್ದಾರೆ. ಅವರು ಗಗ್ಗರ ಕಟ್ಟಿ, ಎಡಗಾಲು ತುದಿ ಬೆರಳಲ್ಲಿ ನಿಲ್ಲಿಸಿ, ಒಮ್ಮೆ ಗಗ್ಗರ, ಮತ್ತೊಮ್ಮೆ ಆಕಾಶ ನೋಡುತ್ತಾ ಗಿಜಿ ಗಿಜಿ ಕುಳುಕಿದರೆ ಸಾಕು ಭೂತ ಕೆಲ ನಿಮಿಷಗಳಲ್ಲೇ ಆಹ್ವಾನ. ನಂತರ ಒರಟು ಕಲ್ಲು ನೆಗ್ಗು ತುಂಬಿದ ನೆಲದಲ್ಲಿ ದೇಹ ಬುಗುರಿಯಾಗುತ್ತದೆ. ಗಗ್ಗರ ಕಾಲು ಕಿವಿಚಿ ರಕ್ತ ಜಿನುಗಿದರೂ ಯಾವುದರ ಪರಿವೆಯೂ ಇಲ್ಲದೆ ‘ಕಾಂತಾರ’ ದ ರೂಪ ತಾಳುವ ಈ ಸಮುದಾಯದ ವೃತ್ತಿಯೇ ಒಂದು ವರ್ಣ ರಂಜಿತ ಕಥೆ !
ಆದರೆ ಬಣ್ಣ ಹಚ್ಚಿ ದೈವಾರಾಧನೆಯ ಕಟ್ಟು ಕಟ್ಟಳೆಗಳಲ್ಲಿ ತೊಡಗಿ ಒಂದಷ್ಟು ಹೊತ್ತು ದೈವವಾಗಿ ಕಾಣಲ್ಪಡುವ ಈ ಸಮುದಾಯ ದೈವ ಹಿಡಿದ ಸಂದರ್ಭದ ಖದರೆ ಬೇರೆ. ಮೈ ಮೇಲೆ ಭೂಷಣ, ಮನದೊಳಗೆ ದೈವ ಕುಣಿತ ಇರುವ ಸಂದರ್ಭದಲ್ಲಿ- ನಾನು ದೈವ. ‘ ಅಲ್ಪ ಊರುಗ್ ಕಷ್ಟ ಬತ್ತು0ಡ, ಬಾನೋ ಬೊಂಗುರುಂಡ. ಮಾತೆರ್ಲಾ ಎನ್ನ ಪಾತೆರ ಕೇನ್ವರ್. ಅಲ್ಪ ಯಾನ್ ಪನ್ನವೇ ಸತ್ಯ ವಾಕ್ಯ.’
ಆದರೆ ತನ್ನ ಗಗ್ಗರ ಕಳಚಿ ಪಕ್ಕಕ್ಕಿಟ್ಟ ನಂತರ, ಬಳಿದ ಬಣ್ಣ ಗೀಚಿ ಹಾಕಿ, ಕಣ್ಣ ಕಾಡಿಗೆಯನ್ನು ಮೆಲ್ಲನೆ ತುದಿ ಬಟ್ಟೆಯ ಮೊನೆಯಿಂದ ಗೀರಿ ತೆಗೆದ ತರುವಾಯ – ಕಳಚಿದ್ದು ವೇಷವಾ ಅಥವಾ ಸಮಾಜದ ಮುಖವೇ ಎನ್ನುವಷ್ಟರ ಮಟ್ಟಿಗೆ ಬದಲಾವಣೆ. ‘ ಓ ಎನ್ನ ದೈವವೇ ‘ ಎನ್ನುವ ಜನ ‘ ಉಂದಂಬೇ ಬೂದ, ಪೋನಗ ರಡ್ ಸೇರ್ ಅರಿ ಪತೊಂದ್ ಪೊಳಂಬೇ ‘ ನಮ್ಮ ಸಮಾಜ ಮತ್ತೆ ಸಾಮಾಜಿಕವಾಗಿ ಅಸ್ಪ್ರಶ್ಯ ರನ್ನಾಗಿ ಕಾಣಲ್ಪಟ್ಟು ದೂರವಿಡುವುದು ಸಾಮಾಜಿಕ ದುರಂತವೆನಿಸಿದೆ.
ನಲಿಕೆಯವರ ರೋಚಕ ಬದುಕು:
ಸ್ನಾನ ವೃತ ಉಪವಾಸಾದಿ ನಿಯಮ ನಿಷ್ಠೆಯಿಂದ ಶುಚೀರ್ಭೂತರಾಗಿ ದೈವದ ಕೊಡಿಯಡಿಗೆ ಬಂದು, ಎಣ್ಣೆ ಬೂಲ್ಯ ಹಿಡಿದು, ಮುಖದಲ್ಲಿ ಅರ್ದಲದ ಮುಖವರ್ಣಿಕೆ, ಮೈಯ್ಯಲ್ಲಿ ಕೆಂಪಂಗಿ, ಪೈಜಾಮು ದಿರಿಸು, ಸೊಂಟದ ಸುತ್ತ ತೆಂಗಿನ ಗರಿಯ ಸಿರಿ ಹೊದಿಕೆ, ತಲೆಯಲ್ಲಿ ಕಿರೀಟ, ತಲೆಪಟ್ಟಿ, ಸಿರಿಮುಡಿ ಸಿಂಗಾರ ಬೆನ್ನ ಹಿಂದೆ ಬಗೆ ಬಗೆಯ ಆಕಾರ ವರ್ಣ ಚಿತ್ತಾರಗಳ ವಿಶಾಲ ಅಣಿಗಳ ಅಲಂಕಾರದೊಂದಿಗೆ ತೆಂಬರೆಯ ಬಡಿತ, ಸಂದಿಯ ಲಯ-ಗೇಯತೆ ತಾಸೆ, ದೋಲು, ವಾದ್ಯ ಕೊಂಬು ಕಹಳೆಗಳ ನಿನಾದದೊಂದಿಗೆ ದೈವದ ಕೊಡಿಯಡಿಗೆ ಬಂದು ಬಲಿಮುದ್ರೆಯ ಮುಂದಿರಿಸಿದ ಗಗ್ಗರವನ್ನು ಕೈಯ್ಯಲ್ಲಿ ಹಿಡಿದು ಮೇಲೆ ಆಕಾಶ, ಕೆಳಗೆ ನೆಲ ಭೂಮಿ, ನೆರೆದ ಭಕ್ತರ ಮುಂದೆ ಎಡಬಲ ಸುತ್ತ ಮುತ್ತ ಅಷ್ಟ ದಿಕ್ಕುಗಳಿಗೂ ದೃಷ್ಟಿ ನೆಟ್ಟು ಗಗ್ಗರದೆಚ್ಚಿಯ ವಾಸಯ, ಹದಿನಾರು ಕಟ್ಟು ಕಟ್ಟಳೆ, ಹದಿನಾರು ಅವತಾರ, ಹದಿನಾರು ಸುತ್ತು ಬಲಿ, ಅಬ್ಬರದ ಹೆಜ್ಜೆ, ಗಗ್ಗರದ ಸದ್ದಿನೊಂದಿಗೆ ಆವೇಶ, ಆರ್ಭಟ, ಹಾರಾಟ.
ಅವತಾರ, ಪ್ರತಾಪಗಳನ್ನು ಮೆರೆಯುತ್ತಾ ನೆಲ ಬಿರಿಯುವಂತೆ ಕುಣಿದು ಕುಪ್ಪಳಿಸಿ, ನರ್ತಿಸಿ ದೈವವಾಗಿ ನೆರೆದ ಭಕ್ತ ಸಮೂಹಕ್ಕೆ ಭಯ-ಅಭಯಗಳ ನುಡಿ ಕೊಟ್ಟು ನ್ಯಾಯಾ ತೀರ್ಮಾನಗಳನ್ನು ಕೈಗೊಳ್ಳುವ ತುಳುನಾಡಿನ ದೈವಾರಾಧನ ಕೇಂದ್ರ ಶಕ್ತಿಗಳಾದ ನಲಿಕೆ ಅಥವಾ ನಲ್ಕೆ (ಅಜಲ, ಪಾಣಾರ) ಸಮುದಾಯದವರು ದೈವ ಕಟ್ಟುತ್ತಾರೆಂದರೆ ಅಲ್ಲೊಂದು ಅದ್ಭುತ ದೈವ ಜಗತ್ತೇ ಅನಾವರಣಗೊಳ್ಳುತ್ತದೆ.
ಇಡೀ ಜಗತ್ತಿನಲ್ಲಿ ದೈವಾರಾಧನಾ ಕಲೆಯನ್ನೇ ತಮ್ಮ ವೃತ್ತಿ ಮತ್ತು ಪ್ರವೃತ್ತಿ (ಉಪವೃತ್ತಿ) ಯನ್ನಾಗಿಸಿಕೊಂಡಿರುವ ಸಮುದಾಯವೆಂದರೆ ಅದು ನಲಿಕೆ (ಅಜಲ, ನಲ್ಕೆ, ಪಾಣಾರ) ಸಮುದಾಯವಾಗಿರುತ್ತದೆ. ರಾಜ ಮಹಾರಾಜರುಗಳ ಕಾಲದಿಂದಲೇ ತುಳುನಾಡಿನದ್ಯಂತ ಸಾವಿರದ ಒಂದು ಮುಖಚುಕ್ಕಿ (ಮುಖವರ್ಣಿಕೆ) ಇಟ್ಟು ಸಾವಿರದ ಒಂದು ದೈವಗಳಿಗೆ ನೇಮಕೈಗೊಳ್ಳುವ ಅಧಿಕಾರ ಪ್ರಾಪ್ತವಾಗಿರುವುದು ಈ ಸಮುದಾಯಕ್ಕೆ ಮಾತ್ರವೇ. ಹೀಗಾಗಿಯೇ ಇಂದಿಗೂ ಈ ಸಮುದಾಯ ತುಳುನಾಡಿನ ಎಲ್ಲಾ ದೈವಗಳಿಗೆ ನೇಮ ಕಟ್ಟುವ ಅಧಿಕಾರವನ್ನು ಪಡೆದುಕೊಂಡಿದ್ದಾರೆ.
ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗೂ ಶ್ಯೆಕ್ಷಣಿಕವಾಗಿ ತೀರಾ ಸಂಕಷ್ಟಕ್ಕೊಳಗಾಗಿರುವ ಈ ನಲಿಕೆ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕೆಂಬ ಸದುದ್ದೇಶದಿಂದ ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಸೇಸಪ್ಪ ನಲಿಕೆ ಎಂಬವರು ತಮ್ಮ ಅಧ್ಯಕ್ಷತೆಯಲ್ಲಿ ನಲಿಕೆ ಸಂಘವನ್ನು ಸ್ಥಾಪಿಸಿ ತಮ್ಮ ಸಮುದಾಯದವರ ಸಮಸ್ಯೆ ಸಂಕಷ್ಟಗಳಿಗೆ ಸ್ಪಂದಿಸತೊಡಗಿದರಲ್ಲದೆ ಮಾಜೀ ಶಾಸಕ ವಸಂತ ಬಂಗೇರರ ಬೆಂಬಲ, ಸಹಕಾರದಲ್ಲಿ ಬೆಳ್ತಂಗಡಿಯ ಪಣೆಜಾಲಿನಲ್ಲಿ ಸಮುದಾಯ ಭವನವನ್ನೂ ಸಹ ನಿರ್ಮಿಸುವಲ್ಲಿ ಸಫಲರಾದರು.
ಆದರೆ ಒಂದಷ್ಟು ನಿಗದಿತ ವರ್ಷಗಳ ಕಾಲ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ ಬಳಿಕ ಸಂಘದ ಬೈಲಾ ಪ್ರಕಾರ ತಮ್ಮ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟು ಬೇರೊಬ್ಬ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆಗೆ ಅವಕಾಶ ಕಲ್ಪಿಸಿದ್ದರು.
ಹೀಗಾಗಿ ಕೆಲವು ವರ್ಷಗಳ ಹಿಂದೆ ನೂತನ ಅಧ್ಯಕ್ಷರಾಗಿ ಪ್ರಭಾಕರ ಗೇರುಕಟ್ಟೆಯವರನ್ನು ಆಯ್ಕೆ ಮಾಡಲಾಯಿತು. ಆದರೆ ಯಾವುದೇ ಸಂಘ ಸಂಸ್ಥೆಗಳದ ಬೈಲಾ ಪ್ರಕಾರ ಕನಿಷ್ಟ 5 ವರ್ಷಕ್ಕೊಮ್ಮೆಯಾದರೂ ಹಿಂದಿನ ಪದಾಧಿಕಾರಿಗಳ ಬದಲಾವಣೆಯಾಗಿ ಹೊಸ ಅಧ್ಯಕ್ಷ, ಪದಾಧಿಕಾರಿಗಳನ್ನೊಳಗೊಂಡ ನೂತನ ಸಮಿತಿ ನೇಮಕವಾಗಬೇಕು. ಆದರೆ ಬೆಳ್ತಂಗಡಿ ತಾಲೂಕಿನ ನಲಿಕೆ ಸಂಘದಲ್ಲಿ ಮಾತ್ರ ಈಗಿನ ಅಧ್ಯಕ್ಷ ಪ್ರಭಾಕರ ಗೇರುಕಟ್ಟೆಯವರ ಅಧಿಕಾರಾವಧಿ ಬೈಲಾ ಪ್ರಕಾರ ಮುಗಿದಿದ್ದರೂ ಸಹಾ ಈವರೆಗೂ ಕೂಡಾ ಹೊಸ ಅಧ್ಯಕ್ಷ, ಪದಾಧಿಕಾರಿಗಳ ನೇಮಕವಾಗದೇ ಇರುವುದು ಯಾಕೆ ಎಂಬ ಪ್ರಶ್ನೆ ಆ ಸಮುದಾಯದ ಹಲವರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.
ಅದರಲ್ಲೂ ಮುಖ್ಯವಾಗಿ ಈ ಸಮುದಾಯದಲ್ಲಿ ದೈವಾರಾಧನಾ ಕ್ಷೇತ್ರದಲ್ಲಿ ತೊಡಗಿಕೊಂಡವರು ಮಾತ್ರಲ್ಲದೆ ವಿವಿಧ ಕಲೆ, ಸಂಗೀತ, ನಾಟಕ, ಸಿನಿಮಾ, ಸಾಹಿತ್ಯ, ಮುಂತಾದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರನ್ನು ದೂರವಿಟ್ಟು ಈ ಸಂಘಟನೆ ಕೇವಲ ದೈವ ಕಟ್ಟುವವರನ್ನು ಮಾತ್ರ ಕೇಂದ್ರೀಕರಿಸಿಕೊಂಡು ಎಲ್ಲರಿಂದ ಹಣ ಸಂಗ್ರಹಿಸಿ ಕೇವಲ ಆಟೋಟ ಸ್ಪರ್ಧೆ, ಫಿಲ್ಮಿ ಡ್ಯಾನ್ಸ್, ಇತ್ಯಾದಿಗಳನ್ನು ನಡೆಸು ವುದಕ್ಕಷ್ಟೇ ಸಂಘಟನೆಯನ್ನು ಸೀಮಿತಗೊಳಿಸಿಕೊಂಡಿದ್ದು ವಿಪರ್ಯಾಸ. ಆದರೆ ಈ ಸಮುದಾಯಕ್ಕೆ, ಅದರಲ್ಲೂ ಮುಖ್ಯವಾಗಿ ಯುವ ಸಮುದಾಯಕ್ಕೆ ಅಗತ್ಯವಾಗಿ ಆಗಬೇಕಾಗಿರುವುದು ಆಟೋಟ, ಡ್ಯಾನ್ಸ್, ಮೋಜು,ಮಜಾ ಮಸ್ತಿಗಿಂತಲೂ ಮುಖ್ಯವಾಗಿ ವಿಚಾರ, ಚಿಂತನೆ ಮತ್ತು ಜ್ಞಾನ ಮೂಡಿಸುವಿಕೆ ಹಾಗೂ ದೈವಾರಾಧನೆಯ ಆಚಾರ, ಕಟ್ಟುಕಟ್ಟಳೆ, ನಿಯಮ ನಿಷ್ಠೆಗಳ ಜಾಗೃತಿ ಮೂಡಿಸುವಿಕೆಯ ಕೆಲಸ.
ಆದರೆ ಈ ಸಂಘಟನೆಯಲ್ಲಿ ಇಲ್ಲಿಯವರೆಗೆ ಇಂತಹಾ ಪ್ರಯತ್ನ ನಡೆದೇ ಇಲ್ಲ. ಒಂದುವೇಳೆ ಇನ್ನು ಮುಂದೆಯೂ ನಡೆಯದೇ ಇದ್ದಲ್ಲಿ ನಿಯಮ, ನಿಷ್ಠೆ, ಕಟ್ಟು ಕಟ್ಟಳೆಗಳ ಮೂಲಕ ಕೈಯ್ಗೊಳ್ಳಬೇಕಾಗುವ ನೇಮ ನಡಾವಳಿಗಳಲ್ಲಿ ಅನುಭವವಿಲ್ಲದ ಎಳೆಯರೂ (ಹದಿ ಹರೆಯದವರೂ ವೇಷ ತೊಟ್ಟು) ತೊಡಗಿ ಪವಿತ್ರವಾದ ದೈವಾರಾಧನೆ ದಿಕ್ಕು ತಪ್ಪುವ ಸಾಧ್ಯತೆಗಳು ಇರುವುದಂತೂ ಖಂಡಿತ. ಹಾಗಾಗಿ ಹೊಸ ರಕ್ತದ ಹುಡುಗರ ಜತೆ ಹಳೆಯ ತಲೆಗಳ ಸಮ್ಮಿಲನ ಆಗುವಂತಹ ಸಂಘ ಸಂಘಟನೆಗಳು ಮರು ಸ್ಥಾಪನೆ ಆಗಲಿ. ಹೊಸತು ನಲಿಕೆ ತೆಲಿಕೆ ಸಂಘದ ಒಳಗೆ ಮತ್ತು ಸಮಾಜದ ತುಂಬಾ ಮೂಡಲಿ.