Tulasi Hair Pack: ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾಗಿರುವ ತುಳಸಿಯಿಂದ ತಲೆಯಲ್ಲಿರುವ ಸಮಸ್ಯೆ ಮಾಯ!!! ಯಾವುದೆಲ್ಲ?
Tulasi Hair Pack: ಹಿಂದಿನ ಕಾಲದಲ್ಲಿ ಏನೇ ಸಮಸ್ಯೆ ಗೆ ಪರಿಹಾರವಾಗಿ ಪ್ರತಿಯೊಂದನ್ನು ನೈಸರ್ಗಿಕವಾಗಿ ಪಡೆದುಕೊಳ್ಳುತ್ತಿದ್ದರು ಮತ್ತು ಅದರಿಂದ ಯಾವುದೇ ವಿಧವಾದ ಸೌಂದರ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೆ ಈಗ ಸಮಯ ಮತ್ತು ನೈಸರ್ಗಿಕ ವಸ್ತುಗಳ ಅಭಾವದಿಂದಾಗಿ ನಮ್ಮ ಸೌಂದರ್ಯ ಹದೆಗೆಡುತ್ತಿದೆ. ಹೆಚ್ಚು ಹೆಚ್ಚು ಹಣ ಖರ್ಚು ಮಾಡಿ ಹೆಚ್ಚು ಹೆಚ್ಚು ರಾಸಾಯನಿಕ ವಸ್ತುಗಳನ್ನೇ ಬಳಸುವಂತಾಗಿದೆ.
ಸದ್ಯ ಕೂದಲ ಅಂದಕ್ಕೂ ಆರೋಗ್ಯಕ್ಕೂ ಸಹ ಆಯುರ್ವೇದವನ್ನು ಪರಿಹಾರವಾಗಿ ನೀವು ಅಳವಡಿಸಿಕೊಳ್ಳಬಹುದು. ಹೌದು, ತುಳಸಿ(Tulasi) ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾಗಿದ್ದು, ಇದರ ಎಲೆಗಳನ್ನು ಬಳಸಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ತುಳಸಿಯು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ತಲೆ ಯನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ತುಳಸಿಯನ್ನು ಬಳಸುವುದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ. ಈ ಎಲೆಗಳು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುವಲ್ಲಿಯೂ ಪರಿಣಾಮಕಾರಿ. ಇನ್ನು ಕೂದಲನ್ನು ಸ್ವಚ್ಛಗೊಳಿಸಲು ನೀವು ತುಳಸಿ ಎಣ್ಣೆಯನ್ನು ಬಳಸಬಹುದು. ಹಾಗಾದರೆ ತುಳಸಿ ಎಲೆಗಳನ್ನು ಹೇಗೆ ಬಳಸಬೇಕು ಎಂದು ನೋಡೋಣ.
ತುಳಸಿ ಮತ್ತು ಅಲೋವೆರಾ ಹೇರ್ ಪ್ಯಾಕ್ (Tulasi Hair Pack):
ಕೆಲವು ತುಳಸಿ ಎಲೆಗಳನ್ನು ಸ್ವಲ್ಪ ನೀರಿನೊಂದಿಗೆ ಪುಡಿಮಾಡಿ ಮತ್ತು ಪೇಸ್ಟ್ ತಯಾರಿಸಿ. ನಂತರ 1-2 ಚಮಚ ಶುದ್ಧ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ತುಳಸಿಯ ಪೇಸ್ಟ್ಗೆ ಸೇರಿಸಿ. ಒಟ್ಟಿಗೆ ಮಿಶ್ರಣ ಮಾಡಿ ಮತ್ತು ಈ ಹೇರ್ ಪ್ಯಾಕ್ ಅನ್ನು ನೆತ್ತಿಯ ಮೇಲೆ ಮತ್ತು ಕೂದಲಿಗೆ ಅನ್ವಯಿಸಿ. 20-30 ನಿಮಿಷಗಳ ನಂತರ ತೊಳೆಯಿರಿ.
ತುಳಸಿ ಮತ್ತು ಜೇನು ಹೇರ್ ಪ್ಯಾಕ್:
ಇದಕ್ಕಾಗಿ ನಿಮಗೆ 10-15 ತುಳಸಿ ಎಲೆಗಳು ಮತ್ತು ಒಂದು ಚಮಚ ಜೇನುತುಪ್ಪ ಬೇಕಾಗುತ್ತದೆ. ಹೇರ್ ಪ್ಯಾಕ್ ಮಾಡಲು, ಮೊದಲು ತುಳಸಿ ಎಲೆಗಳನ್ನು ತೊಳೆಯಿರಿ. ಈಗ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಪೇಸ್ಟ್ಗೆ ಸ್ವಲ್ಪ ನೀರು ಸೇರಿಸಿ. ನಂತರ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿ, 30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ತುಳಸಿ ಮತ್ತು ತೆಂಗಿನ ಹಾಲು ಹೇರ್ ಪ್ಯಾಕ್:
ಈ ಹೇರ್ ಪ್ಯಾಕ್ ಮಾಡಲು, ತುಳಸಿ ಪೇಸ್ಟ್ ಮಾಡಿ ಅದನ್ನು ತೆಂಗಿನ ಹಾಲಿನಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುದಿಸಿ, ಅದು ತಣ್ಣಗಾದಾಗ, ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷ ಬಿಟ್ಟು ನಂತರ ತೊಳೆಯಿರಿ.
ತುಳಸಿ ಮತ್ತು ಆಲೀವ್ ಎಣ್ಣೆ ಪ್ಯಾಕ್ :
ಗ್ರೈಂಡರ್ನಲ್ಲಿ ಕೆಲವು ತಾಜಾ ತುಳಸಿ ಎಲೆಗಳನ್ನು ನೀರು ಸೇರಿಸಿ ಸ್ವಲ್ಪ ಪೇಸ್ಟ್ ತಯಾರಿಸಿ ನಂತರ ಹೊರತೆಗೆದು ಬಟ್ಟಲಿನಲ್ಲಿ ಇರಿಸಿ. ತುಳಸಿ ಪೇಸ್ಟ್ಗೆ 1-2 ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಮಿಶ್ರಣವನ್ನು ನೆತ್ತಿಯ ಮೇಲೆ ಮತ್ತು ಕೂದಲಿಗೆ ಅನ್ವಯಿಸಿ ಮತ್ತು ಬೆರಳ ತುದಿಯಿಂದ ಮೃದುವಾಗಿ ಮಸಾಜ್ ಮಾಡಿ. ಇದನ್ನು 30-40 ನಿಮಿಷಗಳ ನಂತರ ಅದನ್ನು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
ತುಳಸಿ ಮತ್ತು ತೆಂಗಿನ ಎಣ್ಣೆ ಹೇರ್ ಪ್ಯಾಕ್ :
ಈ ಪ್ಯಾಕ್ ಮಾಡಲು, ತುಳಸಿ ಎಲೆಗಳನ್ನು ತೊಳೆದು ಒಣಗಿಸಿ. ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಆಮ್ಲಾ ಪುಡಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ. ಅದನ್ನು ಕುದಿಸಿ. ಈ ಎಣ್ಣೆಯು ತಣ್ಣಗಾದಾಗ, ಅದನ್ನು ಶುದ್ಧವಾದ ಬಟ್ಟಲಿನಲ್ಲಿ ಸಂಗ್ರಹಿಸಿ. ಈ ಎಣ್ಣೆಯಿಂದ ನಿಮ್ಮ ಕೂದಲಿಗೆ ಪ್ರತಿದಿನ ಮಸಾಜ್ ಮಾಡಬಹುದು.
ತುಳಸಿ ಎಲೆ ಮತ್ತು ನೆಲ್ಲಿಕಾಯಿ ಪೌಡರ್ ಪ್ಯಾಕ್ :
ಇನ್ನು ನಿಮ್ಮ ಕೂದಲು ವಯಸ್ಸಾಗುವುದಕ್ಕಿಂತ ಮುಂಚೆಯೇ ಬಿಳಿಯಾಗಿದೆ ಎಂದಾದರೆ ತುಳಸಿ ಎಲೆಗಳನ್ನು ನೆಲ್ಲಿಕಾಯಿ ಪೌಡರ್ನೊಂದಿಗೆ ಮಿಶ್ರ ಮಾಡಿ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ರಾತ್ರಿ ಇದನ್ನು ಹಚ್ಚಿ ಮತ್ತು ಈ ಪ್ಯಾಕ್ ಅನ್ನು ಹಾಗೆಯೇ ಬಿಡಿ. ಬೆಳಗ್ಗೆ ಎಂದಿನಂತೆ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಇದು ಕೂದಲುದುರುವುದನ್ನು ತಡೆಯುತ್ತದೆ ಮತ್ತು ಕೂದಲು ತುಂಡಾಗುವುದನ್ನು ಕಡಿಮೆ ಮಾಡುತ್ತದೆ ಹಾಗೆಯೇ ಸೀಳು ಕೂದಲನ್ನು ನಿವಾರಿಸುತ್ತದೆ.
ಒಟ್ಟಿನಲ್ಲಿ ನಿಮ್ಮ ತಲೆಬುಡಕ್ಕೆ ತುಳಸಿ ಎಲೆಯ ಪೇಸ್ಟ್ ಹಚ್ಚವುದರಿಂದ ಇದರಿಂದ ಕೂದಲಿನ ಬೇರುಗಳಿಗೆ ಪುನರುಜ್ಜೀವನವುಂಟಾಗುತ್ತದೆ. ನಿಮ್ಮ ತಲೆಬುರುಡೆಯನ್ನು ಇದು ತಣ್ಣಗೆ ಇರಿಸುತ್ತದೆ ಮತ್ತು ರಕ್ತಸಂಚಾರವನ್ನು ವೃದ್ಧಿಗೊಳಿಸುತ್ತದೆ, ಇದರಿಂದ ಕೂದಲಿನ ಬೆಳವಣಿಗೆ ಉಂಟಾಗುತ್ತದೆ. ಇನ್ನು ನಿಮ್ಮ ದೈನಂದಿನ ಎಣ್ಣೆಗೆ ತುಳಸಿಯ ಪೇಸ್ಟ್ ಅನ್ನು ಸೇರಿಸಿ ಮತ್ತು ಮಸಾಜ್ ಮಾಡಿಕೊಳ್ಳಿ ಇದು ಡ್ಯಾಂಡ್ರಫ್ ಅನ್ನು ನಿವಾರಿಸುತತದೆ. ಜೊತೆಗೆ ತುರಿಕೆಯಿಂದ ಮುಕ್ತಿ ಪಡೆದುಕೊಳ್ಳಬಹುದಾಗಿದೆ.
ತುಳಸಿಯಲ್ಲಿರುವ ಗುಣಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ. ಈ ಹೇರ್ ಪ್ಯಾಕ್ ಅನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮನೆಯಲ್ಲಿ ತುಳಸಿ ಹೇರ್ ಪ್ಯಾಕ್ ತಯಾರಿಸುವುದು ಕಷ್ಟವಲ್ಲ. ಸದ್ಯ ಆರೋಗ್ಯಕರ ಕೂದಲಿಗೆ ತುಳಸಿಯ ಎಲ್ಲಾ ಪ್ರಯೋಜನಗಳನ್ನು ನೀವು ಪಡೆಯಬಹುದು.