ಸೌಜನ್ಯ ಪ್ರಕರಣ: ಹೊರಜಿಲ್ಲೆಯ ಸಂಘಟನೆ ಸೌಜನ್ಯ ಹೋರಾಟಕ್ಕೆ ಬರೋದು ಬೇಡ್ವಂತೆ; ಶಾಕಿಂಗ್ ಹೇಳಿಕೆ ನೀಡಿದ ಬಿಜೆಪಿ ಮುಖಂಡ !
ಯಾವುದೋ ಒಂದು ಹೊರಜಿಲ್ಲೆಯ ಸಂಘಟನೆ ಧರ್ಮಸ್ಥಳದ ಬಗ್ಗೆ ಹೇಳಿಕೆ ಕೊಡುವುದು ಸರಿಯಲ್ಲ. ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಕ್ಷೇತ್ರ, ಸಮುದಾಯದ ಬಗ್ಗೆ ಅಲ್ಲ, ಮನೆ ಮಗಳು ಸೌಜನ್ಯ ಎಂಬ ಬಾಲಕಿಗೆ ಆಗಿರುವ ಅನ್ಯಾಯದ ವಿರುದ್ದ ನಮ್ಮ ಧ್ವನಿಯಾಗಿದೆ ಎಂದು ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಹೇಳಿದರು.
ಅವರು ಕಡಬದಲ್ಲಿ ಬುಧವಾರ ನಡೆದ ಒಕ್ಕಲಿಗ ಗೌಡ ಸಂಘದ ನೇತೃತ್ವದಲ್ಲಿ ಸಾರ್ವಜನಿಕರ ಹಕ್ತೊತ್ತಾಯ ಪ್ರತಿಭಟನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನ್ಯಾಯ ಕೊಡಬೇಕಾದ ಕಾರ್ಯವನ್ನು ಸರ್ಕಾರ ಮಾಡಬೇಕು, ಇದು ಮರು ತನಿಖೆಯಿಂದ ಪರಿಹಾರವಾಗದು. ಅಂದು ತನಿಖೆ ಸಂದರ್ಭದಲ್ಲಿ ಪಾಲ್ಗೊಂಡವರನ್ನು ತನಿಖೆ ಮಾಡಿದರೆ ನಿಜವಾದ ಆರೋಪಿಗಳು ಮುನ್ನೆಲೆಗೆ ಬರಲು ಸಾಧ್ಯ ಎಂದರು. ಈ ಸಂಬಂಧ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ನೀಡಿದ ಹೇಳಿಕೆ ಪ್ರಜ್ಞಾವಂತರಲ್ಲಿ ಗೊಂದಲ ಮೂಡಿಸುವಂತಿದೆ. ಹೋರಾಟಕ್ಕೆ ಒಂದು ವೇಗ ಮತ್ತು ಸ್ಪೂರ್ತಿಯಾಗಿ ಬಂದದ್ದೇ ದಕ್ಷಿಣ ಕನ್ನಡದ ಹೊರಗಿನಿಂದ ಶುರುವಾದ ಹೋರಾಟದ ಪ್ರಕ್ರಿಯೆ. ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ನಂತರ ರಾಜ್ಯದ ಇತರ ಕಡೆಗಳಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಆಯಾ ಪ್ರದೇಶದ ನಾಯಕರುಗಳು ಅನಿವಾರ್ಯವಾಗಿ ಹೋರಾಟ ಅಥವಾ ಸಾಂಕೇತಿಕ ಹೋರಾಟ ಅಥವಾ ಕಣ್ಣೊರೆಸುವ ತಂತ್ರ – ಮುಂತಾದವುಗಳನ್ನು ಶುರು ಮಾಡಿದರು. ಸುಧೀರ್ಘ ದಶಕಗಳ ಕಾಲ ಸೌಜನ್ಯ ಕೊಲೆ ಪ್ರಕರಣದಲ್ಲಿ ಹೋರಾಟ ನಡೆಸುತ್ತಲೇ ಬಂದಿರುವ ಸೌಜನ್ಯ ಗೌಡ ಕುಟುಂಬ ಮತ್ತು ಅದಕ್ಕೆ ಸದಾ ಬೆಂಗಾವಲಾಗಿ ನಿಂತ ಮಹೇಶ್ ಶೆಟ್ಟಿ ತಿಮರೋಡಿಯವರು ಮತ್ತೆ ಮೊನ್ನೆ, ಆರೋಪಿ ಸಂತೋಷ ರಾವ್ ನನ್ನು ಬಿಡುಗಡೆ ಮಾಡಿದಾಗ ದಕ್ಷಿಣ ಕನ್ನಡದ ಹೆಚ್ಚಿನವರು ಸುಮ್ಮನಿದ್ದರು. ಇಂತಹ ಸಂದರ್ಭದಲ್ಲಿ ಇದೇ ಬಿಜೆಪಿ ನಾಯಕ ಹೇಳುವ ‘ ಹೊರಗಿನ ವ್ಯಕ್ತಿಗಳು ‘ ಬೆಂಬಲಕ್ಕೆ ನಿಂತದ್ದು. ಹೊರಗಿನ ವ್ಯಕ್ತಿಗಳು ಹೋರಾಟಕ್ಕೆ ಬಂದರೆ ಕೃಷ್ಣಶಕ್ತಿಯವರಿಗೆ ಏನು ತೊಂದರೆ ಅಥವಾ ಬಿಜೆಪಿಗೆ ಏನಾದರೂ ತೊಂದರೆ ಉಂಟಾ ? ಎಲ್ಲವೂ ಅಯೋಮಯ !!
ಯುವ ಮುಖಂಡ ಪ್ರವೀಣ್ ಕುಂಟ್ಯಾನ ಮಾತನಾಡಿ, ಸೌಜನ್ಯಳಂತೆ ಪುತ್ತೂರಿನಲ್ಲಿ ಹತ್ಯೆಯಾದ ಸೌಮ್ಯಾ ಭಟ್ ಅವರ ಕೊಲೆಯ ಕುರಿತೂ ತನಿಖೆಯಾಗಬೇಕು. ಸೌಮ್ಯ ಕೊಲೆ ಮಾಡಿದ ಆರೋಪಿ ಈವರೆಗೂ ಪತ್ತೆಯಾಗಿಲ್ಲ. ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮನೆಯವರೊಂದಿಗೆ ಮಹೇಶ್ ಶೆಟ್ಟಿ ತಿಮರೋಡಿ ಹೋರಾಟ ನಡೆಸುತ್ತಿದೆ. ಅವರ ಕೈ ಬಲಪಡಿಸಲು ಗ್ರಾಮ ಗ್ರಾಮಗಳಲ್ಲೂ ಹೋರಾಟ ನಡೆಯಬೇಕು ಎಂದರು. ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಮಾತನಾಡಿ, ಸೌಜನ್ಯ ಹತ್ಯೆ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿಗಳಿಗೆ ಮಂಪರು ಪರೀಕ್ಷೆ ನಡೆಸಬೇಕು ಎಂದರು.
ಕಡಬ ಪೇಟೆಯಲ್ಲಿ ಸಾಗಿ ಬಂದ ಮೆರವಣಿಗೆ ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಬಳಿಕ ವಾಹನಗಳಿಗೆ ಜಸ್ಟಿಸ್ ಫಾರ್ ಸೌಜನ್ಯ ಸ್ಟಿಕ್ಕರ್ ಅಳವಡಿಕೆ ಮಾಡಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ನಡೆದ ಮೌನ ಮೆರವಣಿಗೆಯಲ್ಲಿ ಸಮಾಜದ ವಿವಿಧ ವರ್ಗದ ಬಂಧುಗಳು, ಪ್ರಮುಖರು, ಮಹಿಳೆಯರು ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸುರೇಶ್ ಗೌಡ ಬೈಲು, ಕೃಷ್ಣ ಶೆಟ್ಟಿ ಕಡಬ, ಆಶಾ ತಿಮ್ಮಪ್ಪ, ಬಾಲಕೃಷ್ಣ ಬಳ್ಳೇರಿ ಮಾತನಾಡಿದರು.
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕಾಂಗ್ರೆಸ್ ಮುಖಂಡ ಬಾಲಕೃಷ್ಣ ಬಳ್ಳೇರಿ ಮಾತನಾಡಿದರು. ಕಡಬ ಉಪ ತಹಸೀಲ್ದಾರ್ ಗೋಪಾಲ್ ಕೆ. ಅವರು ಮನವಿ ಸ್ವೀಕರಿಸಿದರು. ಪ್ರಶಾಂತ್ ಪಂಜೋಡಿ ಮನವಿ ಓದಿದರು. ಮೋಹನ್ ಕೋಡಿಂಬಾಳ ವಂದಿಸಿದರು.
Comments are closed.