ಅತಿಯಾಸೆ ಗತಿಗೇಡು?ಹಣ ದ್ವಿಗುಣದ ಆಸೆಗೆ ಬಿದ್ದ ಸುಬ್ರಹ್ಮಣ್ಯದ ಯುವಕನಿಗೆ ಸಾವಿರ ಸಾವಿರ ಪಂಗನಾಮ
Subrahmanya :ಹಣ ದ್ವಿಗುಣಗೊಳ್ಳುತ್ತದೆ ಎನ್ನುವ ಮೇಸಜ್ ಓದಿ ವಂಚಕನ ಕೈಗಿತ್ತ ಹಣ ವಾಪಸ್ಸು ಬಾರದೆ, ಅತ್ತ ದ್ವಿಗುಣವಾಗದೇ ಕಂಗಾಲಾದ ಯುವಕನೋರ್ವ ಮೋಸ ಹೋದೆನೆನ್ನುವ ವಿಚಾರ ತಿಳಿಯುತ್ತಿದ್ದಂತೆ ಠಾಣಾ ಮೆಟ್ಟಿಲೇರಿದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ(Subrahmanya)ದಿಂದ ವರದಿಯಾಗಿದೆ.
ಇಲ್ಲಿನ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರು ಬೆಂಡೋಡಿ ನಿವಾಸಿ ಲಿಖಿನ್ ಪಿ.ಟಿ ಎಂಬ ಯುವಕನ ವಾಟ್ಸಪ್ ನಲ್ಲಿ ಜುಲೈ 17 ರಂದು ಹಣ ದ್ವಿಗುಣಗೊಳಿಸುತ್ತೇವೆ, ನಿಮ್ಮ ಹಣ ಡಬಲ್ ಆಗುತ್ತದೆ ಎನ್ನುವ ಸಂದೇಶವೊಂದು ಬರುತ್ತದೆ. ಕೂಡಲೇ ಯುವಕ ಆ ಸಂಖ್ಯೆಯನ್ನು ಸಂಪರ್ಕಿಸಿದ್ದು, ತನ್ನ ಖಾತೆಯಿಂದ ವಂಚಕನ ಖಾತೆಗೆ 5000 ಕಳುಹಿಸಿದ್ದಾನೆ.
ನಾಳೆ ಮುಂಜಾನೆ ಹಣ ಡಬಲ್ ಆಗುತ್ತದೆ ಎನ್ನುವ ಖುಷಿಯಲ್ಲೇ ನಿದ್ದೆಗೆ ಜಾರಿದ ಯುವಕ ಮುಂಜಾನೆ ಎದ್ದು ದ್ವಿಗುಣಗೊಂಡ ಹಣವನ್ನು ಕೇಳಿದಾಗ ಜಿ.ಎಸ್.ಟಿ, ಬ್ಯಾಂಕ್ ಚಾರ್ಜ್ ಹೀಗೇ ಏನೇನೋ ಸಬೂಬು ಹೇಳಿದ ವಂಚಕ ಯುವಕನಿಂದ ಮತ್ತೆ 13000 ಹಾಕಿಸಿಕೊಂಡಿದ್ದಾನೆ.
ಇತ್ತ 13000 ಹಣ ಕಳುಹಿಸಿ 26000 ಕ್ಕಾಗಿ ಕಾದ ಯುವಕ ಮತ್ತೆ ವಂಚಕನಲ್ಲಿ ಹಣ ಕೇಳಿದಾಗ ಆತ ಬೆದರಿಸಿದ್ದು, ಇನ್ನಷ್ಟು ಹಣ ಕಳುಹಿಸು, ಇಲ್ಲದಿದ್ದಲ್ಲಿ ಮೊಬೈಲ್ ಬ್ಲ್ಯಾಕ್ ಮಾಡುವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಯುವಕ ವಂಚನೆಗೆ ಒಳಗಾಗಿರುವುದು ಖಚಿತವಾಗುತ್ತಲೇ ಠಾಣಾ ಮೆಟ್ಟಿಲೇರಿದ್ದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.
ಇಂತಹ ಆನ್ಲೈನ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಅತೀ ಹೆಚ್ಚು ವರದಿಯಾಗುತ್ತಿದ್ದು, ಪೊಲೀಸ್ ಇಲಾಖೆ ಕಠಿಣ ಕ್ರಮ ಹಾಗೂ ವಂಚನೆ ಜಾಲಕ್ಕೆ ಬಲಿಯಾಗದಂತೆ ಮನವಿ ಮಾಡಿಕೊಂಡರೂ ಹಣದಾಸೆಗೆ ಬೀಳುವ ನಾಗರಿಕರಲ್ಲಿ ಈಗಾಗಲೇ ಕೆಲವು ಸಾವು-ನೋವುಗಳು ಸಂಭವಿಸಿದೆ.
ಇದನ್ನೂ ಓದಿ : ಮಂಗಳೂರು ಬೀಚ್‌ಗೆ ಹೋಗುವವರಿಗೆ ಮಹತ್ವದ ಸೂಚನೆ!