ಸೌಜನ್ಯ ಗೌಡ ಅತ್ಯಾಚಾರ ಪ್ರಕರಣ: ಶೀಘ್ರ ಮರು ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜಾ
Belthagadi :ಕಳೆದ ಹನ್ನೆರಡು ವರ್ಷಗಳ ಹಿಂದೆ ಬೆಳ್ತಂಗಡಿ (Belthangdi )ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಗೌಡ (Sowjanya) ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿದ್ದ ಆರೋಪಿ ಸಂತೋಷ್ ರಾವ್ ದೋಷ ಮುಕ್ತಗೊಂಡ ಬೆನ್ನಲ್ಲೇ ಮತ್ತೊಮ್ಮೆ ಹೋರಾಟದ ಕಿಚ್ಚು ಹತ್ತಿದ್ದು, ಶೀಘ್ರ ಮರು ತನಿಖೆ ನಡೆಸಲು ಹಲವೆಡೆ ಪ್ರತಿಭಟನೆ ಆರಂಭಗೊಂಡಿದೆ.
ಕಳೆದ ಕೆಲ ದಿನಗಳ ಹಿಂದೆ ಒಡನಾಡಿ ಸಂಸ್ಥೆ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನಾ ಹೋರಾಟ ಆರಂಭಗೊಂಡಿದ್ದು,ಮರು ತನಿಖೆ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎನ್ನುವ ಆಗ್ರಹದ ಹೋರಾಟಕ್ಕೆ ಸಾಹಿತಿಗಳು,ಹಿರಿಯ ನಾಗರಿಕರು,ಸಮಾನ ಮನಸ್ಕರು ಸಹಿತ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು.
ಈ ನಡುವೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದು, 2012 ರಲ್ಲಿ ನಡೆದ ಪ್ರಕರಣದ ತನಿಖೆಯಲ್ಲಿ ಲೋಪ ಹಾಗೂ ಇದ್ದ ಓರ್ವ ಆರೋಪಿಯೂ ದೋಷ ಮುಕ್ತಗೊಂಡಿದ್ದು, ಇಡೀ ಪ್ರಕರಣವನ್ನು ಮರು ತನಿಖೆ ನಡೆಸಬೇಕು. ಈಗಾಗಲೇ ನಾಗರೀಕ ಸಮಾಜ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅವರ ಭಾವನೆಯನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ವಿಚಿತ್ರ ಎಂದರೆ ನಾಡಿನ ರಾಜಕೀಯಕ್ಕೆ ಘಟಾನುಘಟಿ ನಾಯಕರನ್ನು, ಮಂತ್ರಿಗಳನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಬುದ್ಧಿವಂತರು ಅಮಾಯಕ ಹೆಣ್ಣು ಮಗಳು ಸೌಜನ್ಯ ಹತ್ಯೆ ಕುರಿತು ಇಷ್ಟು ದಿನ ಮೌನ ವ್ರತ ಆಚರಿಸಿದ್ದರು. ಈಗ ಆಕೆಯ ಸಾವಿಗೆ ನ್ಯಾಯ ಒದಗಿಸುವ ಬಗ್ಗೆ ಹೋರಾಟ ರಾಜ್ಯದಾದ್ಯಂತ ಪಸರಿಸಿದಾಗ ಸ್ಥಳೀಯವಾಗಿ ಶಾಸಕರು ಮತ್ತು ಬಿಜೆಪಿ ನಾಯಕರುಗಳು ಜನರಿಂದ ತೀವ್ರ ಟೀಕೆಯನ್ನು ಎದುರಿಸಿದ್ದರು. ನಿಧಾನವಾಗಿ ಜನ ಅಭಿಪ್ರಾಯ ಮೂಡಿ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಜನರು ಏಳುವ ಲಕ್ಷಣಗಳು ಕಂಡಾಗ ಎಚ್ಚೆತ್ತು ಮೆಲ್ಲಗೆ ಪತ್ರ ಹಿಡಿದು ಮುಖ್ಯಮಂತ್ರಿ ಮುಂದೆ ನಿಂತಿದ್ದಾರೆ. ಇದು ಸೌಜನ್ಯ ಪ್ರಕರಣದ ಹೋರಾಟದ ಪರವಾಗಿ ಒಂದು ಒಳ್ಳೆಯ ಬೆಳವಣಿಗೆ ಎಂದೇ ಹೇಳೋಣ.
ಇದನ್ನೂ ಓದಿ :50 ಸಾವಿರ ಹೂಡಿಕೆಯಿಂದ ಬರೋಬ್ಬರಿ 11,400 ಕೋಟಿ ರೂ.ಬೃಹತ್ ಸಾಮ್ರಾಜ್ಯ ಕಟ್ಟಿದ ಹೋಮಿಯೋಪತಿ ವೈದ್ಯ !