Puttur: ದ.ಕ.ಜಿಲ್ಲೆಯಲ್ಲೂ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ : ಬೆಳ್ತಂಗಡಿ ಬಳಿಕ ಈಗ ಪುತ್ತೂರಲ್ಲೂ ಕೊಳೆತ ಮೊಟ್ಟೆಗಳ ಸರಬರಾಜು
Latest Dakshina Kannada news bad egg distributed to anganawadi in Puttur
Puttur : ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿರುವ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಯೋಜನೆಯಲ್ಲಿ ಮೊಟ್ಟೆಗಳನ್ನು ನೀಡಲಾಗುತ್ತಿದ್ದು,ಇದೀಗ ವಿತರಣೆ ಮಾಡುವ ಮೊಟ್ಟೆಗಳು ಕೊಳೆತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆ ಕಂಡು ಬಂದಿತ್ತು.ಬಳಿಕ ಹಾಸನ, ಹಾವೇರಿ, ಕೊಡಗು ಜಿಲ್ಲೆಯಲ್ಲಿರುವ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾದ ಬಗ್ಗೆ ವರದಿಯಾಗಿತ್ತು. ಇದೀಗ ಮತ್ತೆ ದ.ಕ. ಜಿಲ್ಲೆಯ ಕೆಲವು ಅಂಗನವಾಡಿಗಳಲ್ಲೂ ಕೊಳತೆ ಮೊಟ್ಟೆಗಳು ವಿತರಣೆಯಾಗಿದೆ.
ಜಿಲ್ಲೆಯ ಪುತ್ತೂರು(Puttur) ತಾಲೂಕಿನ ಮುಂಡೂರು ಗ್ರಾ.ಪಂ.ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಅಂಗನವಾಡಿ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ಅಂಗನವಾಡಿಗಳಲ್ಲಿ ಈ ಬಗ್ಗೆ ದೂರು ವ್ಯಕ್ತವಾಗಿದೆ. ಕೆಲವೆಡೆ ಕೊಳೆತ ಮೊಟ್ಟೆ ಸಿಕ್ಕರೂ ಯಾರಿಗೂ ದೂರು ನೀಡದೆ ಸುಮ್ಮನಾದರೆ,ಕೆಲವರು ದೂರು ನೀಡುತ್ತಿದ್ದಾರೆ ಇದರಿಂದಾಗಿ ಪ್ರಕರಣ ಬೆಳಕಿಗೆ ಬರುತ್ತಿದೆ.
ಈ ಹಿಂದೆ ಅಂಗನವಾಡಿಗಳಿಗೆ ಸ್ಥಳೀಯವಾಗಿಯೇ ಮೊಟ್ಟೆ ಖರೀದಿಸುತ್ತಿದ್ದುದರಿಂದ ಸಮಸ್ಯೆ ಇರಲಿಲ್ಲ. ಈಗ ಟೆಂಡರ್ ಪ್ರಕ್ರಿಯೆ ಆರಂಭವಾದ ಬಳಿಕ ಸಮಸ್ಯೆ ಉದ್ಭವವಾಗಿದೆ. ಹಿಂದಿನ ಮಾದರಿಯಲ್ಲಿಯೇ ಮೊಟ್ಟೆ ವಿತರಣೆಗೆ ಕ್ರಮ ಕೈಗೊಂಡರೆ ಸಮಸ್ಯೆ ಉದ್ಭವವಾಗದು ಎನ್ನುತ್ತಾರೆ ಸ್ಥಳೀಯರು. ರಾಜ್ಯದ ಬೇರೆ ಬೇರೆ ಕಡೆಯಿಂದ ಟೆಂಡರ್ ಪಡೆದವರು ಮೊಟ್ಟೆ ತರಿಸಿಕೊಂಡು ವಿತರಣೆ ಮಾಡುವಾಗ ಕೆಲ ದಿನಗಳು ಬೇಕಾಗಿರುವುದರಿಂದ ಮೊಟ್ಟೆ ಕೊಳೆತುಹೋಗುವ ಸಾಧ್ಯತೆ ಹೆಚ್ಚು.
ಈಗಾಗಲೇ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆಯ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತನಿಖೆಗೆ ಆದೇಶ ನೀಡಿದ್ದು, ವರದಿ ಸಲ್ಲಿಕೆಯಾದ ಬಳಿಕ ಕ್ರಮ ಕೈಗೊಳ್ಳಲಾಗಯತ್ತದೆ ಎಂದು ತಿಳಿದುಬಂದಿದೆ.