Chandrayaan-3: ನಭಕ್ಕೆ ಬೆಂಕಿ ಬೆರೆಸಿ ಜಿಗಿದ ರಾಕೆಟ್, ಅಂತರಿಕ್ಷಕ್ಕೆ ಕೈ ಚಾಚಿತು ಭಾರತ ; ಚಂದ್ರಯಾನ 3 – ಶುಭ ಪ್ರಯಾಣ !

Latest news country ambitious project Chandrayaan-3 has been successfully launched

Chandrayaan-3: ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು (ಶುಕ್ರವಾರ) ಮಧ್ಯಾಹ್ನ 2.35 ಕ್ಕೆ ಚಂದ್ರಯಾನ-3 ನೌಕೆಯು ಬೆಂಕಿ ಬೆರೆಸಿಕೊಂಡು ಉರಿಯುತ್ತ ಸುಧೀರ್ಘ ಪ್ರಯಾಣಕ್ಕೆ ಹೊರಟಿದೆ. ಚಂದ್ರಯಾನ ನೌಕೆಯು ಆಗಸ್ಟ್ 23 ಅಥವಾ 24ರಂದು ಚಂದ್ರನ ಅಂಗಳಕ್ಕೆ ತಲುಪಲಿದೆ ಎಂದು ತಿಳಿದುಬಂದಿದೆ.

ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ ಅಂತ್ಯದಲ್ಲಿ ನಡೆಯಲಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಭಾರತ ಆಗಲಿದೆ. ಈವರೆಗೆ ಅಮೆರಿಕ, ಚೀನಾ ಮತ್ತು ರಷ್ಯಾ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹವನ್ನು ಲ್ಯಾಂಡ್ ಮಾಡಿವೆ.

ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ. ಇದನ್ನು ಲಾಂಚ್ ವೆಹಿಕಲ್ ಮಾರ್ಕ್ 3 (LM-3) ಎಂದು ಮರುನಾಮಕರಣ ಮಾಡಲಾಗಿದ್ದು, ಈ GSLV 43.5 ಮೀಟರ್ ಎತ್ತರವಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವಿದೆ.

ಚಂದ್ರಯಾನ-3 ನ್ನು 615 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಲ್ಯಾಂಡರ್ ರೋವರ್ ಮತ್ತು ಪ್ರೊಪಲ್ಟನ್ ಮಾಡ್ಯೂಲ್‌ಗೆ ಸುಮಾರು 250 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಉಡಾವಣೆಗೆಂದೇ 365 ಕೋಟಿ ರೂಪಾಯಿ ಖರ್ಚಾಗಿದೆ ಎಂದು ತಿಳಿದುಬಂದಿದೆ.

ಚಂದ್ರಯಾನ -1:
ಚಂದ್ರಯಾನ -1 ಅನ್ನು ಅಕ್ಟೋಬರ್ 2008 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಉಡಾವಣೆ ಮಾಡಿತು. ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 00:52 UTC ಕ್ಕೆ PSLV-XL ರಾಕೆಟ್ ಅನ್ನು ಬಳಸಿಕೊಂಡು ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಚಂದ್ರಯಾನ -1 8 ನವೆಂಬರ್ 2008 ರಂದು ಚಂದ್ರನ ಕಕ್ಷೆಗೆ ಸೇರಿತು.
ಕಾರ್ಯಾಚರಣೆಯು ಚಂದ್ರನ ಕಕ್ಷೆ ಮತ್ತು ಇಂಪ್ಯಾಕ್ಟರ್ ಅನ್ನು ಒಳಗೊಂಡಿತ್ತು. 14 ನವೆಂಬರ್ 2008 ರಂದು, ಚಂದ್ರಯಾನ ಆರ್ಬಿಟರ್‌ನಿಂದ 14:36 UTC ಯಲ್ಲಿ ಚಂದ್ರನ ಇಂಪ್ಯಾಕ್ಟ್ ಪ್ರೋಬ್ ಬೇರ್ಪಟ್ಟಿತು ಮತ್ತು ನಿಯಂತ್ರಿತ ರೀತಿಯಲ್ಲಿ ದಕ್ಷಿಣ ಧ್ರುವವನ್ನು ಸೇರಿತು. ಈ ಕಾರ್ಯಾಚರಣೆಯೊಂದಿಗೆ, ISRO ಚಂದ್ರನ ಮೇಲ್ಮೈಯನ್ನು ತಲುಪಿದ ಐದನೇ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಯಿತು.

ಸುಮಾರು ಒಂದು ವರ್ಷದ ನಂತರ ಆರ್ಬಿಟರ್ ಸ್ಟಾರ್ ಟ್ರ್ಯಾಕರ್‌ನ ವೈಫಲ್ಯ ಮತ್ತು ಕಳಪೆ ಥರ್ಮಲ್ ಶೀಲ್ಡ್ ಸೇರಿದಂತೆ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಲಾರಂಭಿಸಿತು. ಚಂದ್ರಯಾನ-1 28 ಆಗಸ್ಟ್ 2009 ರಂದು ಸುಮಾರು 20:00 UTC ಯಲ್ಲಿ ಸಂವಹನವನ್ನು ನಿಲ್ಲಿಸಿತು. ಅದಕ್ಕೂ ಮೊದಲೇ ಹೇಳಿಕೆ ನೀಡಿದ ISRO, ಅಧಿಕೃತವಾಗಿ ಚಂದ್ರಯಾನ 1 ಮಿಷನ್ ಮುಗಿದಿದೆ ಎಂದು ಘೋಷಿಸಿತು.

ಚಂದ್ರಯಾನ 2:
ಚಂದ್ರಯಾನ ಒಂದರ ಯಶಸ್ವಿ ಪ್ರಯೋಗದ ಸುಧೀರ್ಘ 10 ವರ್ಷಗಳ ನಂತರ ಮತ್ತೆ ಭಾರತ ಚಂದ್ರಯಾನ 2 ಉಡ್ಡಯನಕ್ಕೆ ತಯಾರಿ ನಡೆಸಿತ್ತು. 2019 ರಲ್ಲಿ ಚಂದ್ರಯಾನ-2 ಯೋಜನೆ ಕೈಗೊಳ್ಳಲಾಗಿತ್ತು. ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ 22 ಜುಲೈ 2019 ರಂದು 09:13:12 UTC ಕ್ಕೆ LVM3-M1 ರಾಕೆಟ್‌ನಿಂದ ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ತನ್ನ ಕಾರ್ಯಾಚರಣೆಯಲ್ಲಿ ಉಡಾವಣೆ ಮಾಡಲಾಯಿತು.

ಅವತ್ತು ಖುದ್ದು ಪ್ರಧಾನಮಂತ್ರಿಯವರು ಬೆಂಗಳೂರಿಗೆ ಆಗಮಿಸಿ ಇಸ್ರೋ ಕೇಂದ್ರದಲ್ಲಿ ಬಂದು ಕೂತಿದ್ದರು. ದೇಶಕ್ಕೆ ದೇಶವೇ, ಅಲ್ಲದೆ ವಿದೇಶಗಳು ಕೂಡ ಭಾರತದ ಚಂದ್ರಯಾನ 2 ಮಿಷನ್ ಬಗ್ಗೆ ಕುತೂಹಲಗೊಂಡು ಆ ನೌಕೆ ಚಂದ್ರನ ಮೇಲೆ ಇಳಿಯುವುದನ್ನು ಕಾತುರದಿಂದ ಕಾಯುತ್ತಿದ್ದರು. ಎಲ್ಲ ಪ್ರಕ್ರಿಯೆಗಳೂ ಸರಿಯಾಗಿಯೇ ನಡೆದಿದ್ದವಾದರೂ ಚಂದ್ರನ ಮೇಲೆ ರೋವರ್ ಇಳಿಯುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದುಕೊಂಡು ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ಅಂದರೆ ಕೊನೆಯ ಕೆಲವೇ ಮೀಟರುಗಳ ದೂರದಲ್ಲಿ ಸಂಪರ್ಕ ಕಡಿತಗೊಂಡು ರೋವರ್ ಚಂದ್ರನ ಗುರುತ್ವಾಕರ್ಷಣೆಗೆ ಸಿಕ್ಕಿ ಬಿದ್ದುಬಿಟ್ಟಿತ್ತು. ಹಾಗೆ ಚಂದ್ರಯಾನ- 2 ಕೊನೇ ಹಂತದಲ್ಲಿ ವಿಫಲವಾಗಿತ್ತು. ಆಗ ಆಗಿನ ಇಸ್ರೋ ಅಧ್ಯಕ್ಷ ಭಾಸ್ಕರ್ ಕಣ್ಣೀರು ಹಾಕಿ, ದೇಶದ ಪ್ರಧಾನ ಮಂತ್ರಿ ಮತ್ತು ಇಡೀ ದೇಶದ ಕ್ಷಮೆ ಕೇಳಿದ್ದರು. ಅವತ್ತು ಭಾಸ್ಕರ ಅವರನ್ನು ಪ್ರಧಾನಿ ಸಂತೈಸಿದ ಘಟನೆಯು ಇಡಿ ವಿಶ್ವಕ್ಕೆ ಮಾದರಿ ನಡೆ ಎನ್ನಿಸಿತು. ಆ ಘಟನೆಯು ವಿಜ್ಞಾನಿಗಳಲ್ಲಿ ತುಂಬಾ ಆತ್ಮವಿಶ್ವಾಸ ಮೂಡಿಸಿತ್ತು.

ಬಹುಶಹ ಆದಿ ಆತ್ಮವಿಶ್ವಾಸ ಮತ್ತು ನಿರಂತರ ಕೆಲಸಗಳ ಪ್ರಯತ್ನಗಳ ಫಲವಾಗಿ ಇದೀಗ ಚಂದ್ರಯಾನ ಮೂರು ಯಶಸ್ವಿಯಾಗಿ ತಯಾರಾಗಿ ಉಡ್ಡಯನ ಆಗಿದೆ. ಈ ಬಾರಿ ಮತ್ತೆ ಭರವಸೆಯ ಹೊತ್ತು ಚಂದ್ರಯಾನ-3 ಚಂದ್ರನ ಅಂಗಳಕ್ಕೆ ತಲುಪಲು ಎಲ್ಲಾ ತಯಾರಿ ಮಾಡಿಕೊಂಡು ಹೊರಟಿದೆ. ಈ ಸಲ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲವಾಗುವುದಿಲ್ಲ. ರಾತ್ರಿ ಹಗಲು ಕೆಲಸ ಮಾಡಿ ನೌಕೆ ಕಟ್ಟಿದ ವಿಜ್ಞಾನಿಗಳ ಪ್ರಯತ್ನ ಈ ಬಾರಿ ವಿಫಲವಾಗುವುದಿಲ್ಲ. ಚಂದ್ರಯಾನ 3 ರ ಮಿಷನ್ ಸಕ್ಸಸ್ ರಿಪೋರ್ಟ್ ತಿಳಿಯಲು ನಾವು ಆಗಸ್ಟ್ ನ ತನಕ ಕಾಯಬೇಕಾಗಿದೆ.

 

 

ಇದನ್ನು ಓದಿ: Marriage: ಏಕಕಾಲಕ್ಕೆ ಇಬ್ಬರು ಯುವಕರನ್ನು ಮದ್ವೆಯಾಗಲು ಯುವತಿಯಿಂದ ಅರ್ಜಿ, ಸಬ್ ರಿಜಿಸ್ಟ್ರಾರ್ ಕಚೇರಿಯೇ ಗೊಂದಲದಲ್ಲಿ ! 

Leave A Reply

Your email address will not be published.