Sowjanya murder case: ಧರ್ಮಸ್ಥಳ ಸೌಜನ್ಯ ಗೌಡ ಕೊಲೆ ಕೇಸ್: ತನಿಖೆ ಸರಿಯಾಗಿಲ್ಲ, ಪೋಲೀಸ್, ವೈದ್ಯರಿಂದಲೇ ಮೋಸ- ಮಕ್ಕಳ ನ್ಯಾಯಾಲಯ ಅಭಿಪ್ರಾಯ – ಸೌಜನ್ಯಾ ಗೌಡ ಹೋರಾಟಕ್ಕೆ ಮತ್ತಷ್ಟು ಬಲ !
Latest karnataka news No proper investigation conduct in Dharmasthala Sowjanya murder case take a action against erring officials
Sowjanya Gowda murder case: ಧರ್ಮಸ್ಥಳದಲ್ಲಿ ಕಳೆದ 12 ವರ್ಷದ ಹಿಂದೆ ನಡೆದ 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯ ಗೌಡ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Sowjanya murder case) ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ ನಂತರ ಇದೀಗ ಪ್ರಕರಣಕ್ಕೆ ಒಂದು ಮಹತ್ವದ ತಿರುವು ಸಿಕ್ಕಿದೆ. ಇದ್ದ ಓರ್ವ ಆರೋಪಿಯನ್ನು ಬಿಡುಗಡೆ ಮಾಡಿದ ನಂತರ ಈಗ ಈ ವಿಶೇಷ ಬೆಳವಣಿಗೆ ನಡೆದಿದ್ದು, ಪ್ರಕರಣ ಸರಿಯಾದ ತನಿಖೆ ಸರಿಯಾಗಿ ನಡೆಸಿಲ್ಲ ಎಂದು ಮಕ್ಕಳ ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಈ ಮೂಲಕ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಸೌಜನ್ಯ ಗೌಡ ಅತ್ಯಾಚಾರ ಕೊಲೆ ಹೋರಾಟಕ್ಕೆ ಮಹತ್ವದ ಜಯ ಸಿಕ್ಕಂತಾಗಿದೆ.
ಅಂದು ನಡೆದ ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿರಲಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಖುಲಾಸೆ ಸಮಿತಿಯ ಮುಂದೆ ಇಡಲು ಇದು ಸೂಕ್ತವಾದ ಪ್ರಕರಣವಾಗಿದೆ ಎಂದು ಮಕ್ಕಳ ನ್ಯಾಯಾಲಯವು ತಿಳಿಸಿದೆ. ಅದನ್ನೇ ಹಲವು ವರ್ಷಗಳಿಂದ ಸೌಜನ್ಯಾ ಗೌಡ ಪೋಷಕರು ಮತ್ತು ಹೋರಾಟಗಾರರು ಹೇಳಿಕೊಂಡು ಬರುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬವರ್ಗದ ಮೇಲೆ ಆಗ ಆರೋಪ ಕೇಳಿಬಂದಿತ್ತು. ಸೌಜನ್ಯ.ಗೌಡ ಪೋಷಕರು ಪೊಲೀಸರಿಗೆ ಧರ್ಮಸ್ಥಳ ಧಣಿಗಳ ಕುಟುಂಬ ವರ್ಗದ ಮೇಲೆ ನೇರ ಆರೋಪ ಮಾಡಿದ್ದರು. ಕೊಲೆ ನಡೆದ 2 ದಿನಗಳ ನಂತರ ಸಂತೋಷ್ ರಾವ್ ಎಂಬ ಓರ್ವ ವ್ಯಕ್ತಿಯನ್ನು ಧರ್ಮಸ್ಥಳದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಎಳೆದು ತಂದು, ಇವನೇ ಆರೋಪಿ ಎಂದು ತೋರಿಸಿದ್ದರು. ಆತನ ಮೇಲೆಯೇ ತನಿಖೆ ನಡೆದು, ಇತ್ತೀಚೆಗೆ ಆತ ನಿರಪರಾಧಿ ಎಂದು ಸಾಬೀತಾಗಿತ್ತು.
ತನಿಖೆಗಳ ವಿವರ:
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಅಕ್ಟೋಬರ್ 2012 ರಲ್ಲಿ ದಾಖಲಿಸಲಾಗಿ, ನಂತರ ಅದನ್ನ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದರು. ನಂತರ ಬೆಳ್ತಂಗಡಿ ತಾಲೂಕಿನಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೃಹತ್ ಪ್ರಮಾಣದ ಹೋರಾಟಗಳು ನಡೆದ ನಂತರ ಅದನ್ನು ನವೆಂಬರ್ 2013 ರಲ್ಲಿ ಸಿಬಿಐ ತನಿಖೆಗೆ ಒಳಪಡಿಸಲಾಯಿತು. ಸಿಬಿಐನ ಚೆನ್ನೈನ ವಿಶೇಷ ಅಪರಾಧ ವಿಭಾಗವು ವಹಿಸಿಕೊಂಡಿತು. 2016ರಲ್ಲಿ ತನಿಖೆ ಪೂರ್ಣಗೊಳಿಸಿ ಸಿಬಿಐ ವರದಿ ಸಲ್ಲಿಸಿತ್ತು. ಮೊನ್ನೆ, ಜೂನ್ 16 ರ ಆದೇಶದಲ್ಲಿ, ನ್ಯಾಯಾಧೀಶ ಸಿಬಿ ಸಂತೋಷ್ ರವರು, ಆರೋಪಿ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಾಕ್ಷಿಗಳಿಲ್ಲದಿರುವುದನ್ನು ಗಮನಿಸಿದ್ದು, ಇದ್ದ ಓರ್ವ ಆರೋಪಿ ಸಂತೋಷ ರಾವ್ ನನ್ನು ಖುಲಾಸಗೊಳಿಸಿದ್ದರು.
ಆಗ ಆರೋಪಿ ಸಂತೋಷ್ ರಾವ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಸಂತ್ರಸ್ತೆಯ ಪೋಷಕರಿಗೆ ಪರಿಹಾರವನ್ನು ಪಾವತಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂದೆ ಆದೇಶ ಪ್ರತಿಯನ್ನು ಸಲ್ಲಿಸಲು ಸೂಚಿಸಿದರು. ಆರೋಪಿಯು ಆಪಾದಿತ ಅಪರಾಧದೊಂದಿಗೆ ಎಲ್ಲಿಯೂ ಸಂಬಂಧ ಹೊಂದಿಲ್ಲ ಮತ್ತು ಆತನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಕೋರ್ಟು ಸ್ಪಷ್ಟವಾಗಿ ಹೇಳಿದೆ. ಡಿಎನ್‌ಎ ವರದಿಯಲ್ಲಿಯೂ ಆರೋಪಿಗಳ ವಿರುದ್ಧ ಯಾವುದೇ ಸಕಾರಾತ್ಮಕ ಸಾಕ್ಷ್ಯಗಳಿಲ್ಲ. ಆರೋಪಿಯ ಬಟ್ಟೆಯ ಮೇಲೆ ಯಾವುದೇ ಸೆಮಿನಲ್ ಕಲೆಗಳು ಅಥವಾ ಸಂತ್ರಸ್ತೆ ಕೂದಲು ಕಂಡುಬಂದಿಲ್ಲ. ವಶಪಡಿಸಿಕೊಂಡ ವಸ್ತುಗಳಲ್ಲಿ ಕಂಡುಬಂದಿರುವ ಮಣ್ಣು ಮತ್ತು ಯೋನಿ ಸ್ವ್ಯಾಬ್‌ನಲ್ಲಿ ಕಂಡುಬರುವ ಮಣ್ಣು ಒಂದೇ ಆಗಿದ್ದು, ಆರೋಪಿಯ ಬಟ್ಟೆಯಲ್ಲಿ ಕಂಡುಬಂದಿಲ್ಲ ಎಂದು ಅವರು ನ್ಯಾಯಾಧೀಶರು ಹೇಳಿದ್ದರು.
ಇನ್ನೂ ಒಂದು ಮಹತ್ವದ ಆಶ್ಚರ್ಯಕರ ಸಂಗತಿಯೆಂದರೆ, ಘಟನೆ ನಡೆದ ಸ್ಥಳದಿಂದ ಏನೂ ಪತ್ತೆಯಾಗಿರಲಿಲ್ಲ. ಒಂದು ವೇಳೆ ಹೇಳಿದ ಸ್ಥಳದಲ್ಲಿ ಅತ್ಯಾಚಾರ ನಡೆದಿದ್ದರೆ, ಆರೋಪಿಗಳ ಕೂದಲು, ಹೆಜ್ಜೆ ಗುರುತುಗಳು, ಯಾವುದೇ ಸುಳಿವುಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ಕರೆಸಲು ತನಿಖಾಧಿಕಾರಿಗೆ ಏನು ಅಡ್ಡಿಯಾಯಿತು? ಎಂದು ಕೋರ್ಟು ಪ್ರಶ್ನಿಸಿದೆ. ಅಲ್ಲದೆ, ಪ್ರಾಸಿಕ್ಯೂಷನ್‌ನಿಂದ ಕೊನೆಯದಾಗಿ ನೋಡಿದ ಯಾವುದೇ ಸಿದ್ಧಾಂತವನ್ನು ಸ್ಥಾಪಿಸಲಾಗಿಲ್ಲ ಮತ್ತು ಆರೋಪಿಗಳು ಸಂತ್ರಸ್ತ ಬಾಲಕಿಯನ್ನು ಏಕಾಂಗಿಯಾಗಿ ಪೊದೆಗಳೊಳಗೆ ಎಳೆದೊಯ್ದು ಅಪರಾಧ ಮಾಡಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷಿಯಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದು ಗಮನಾರ್ಹವಾಗಿದೆ.
ಅಲ್ಲದೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಾಕ್ಷ್ಯವು ಯೋನಿ ಸ್ವ್ಯಾಬ್ ಅನ್ನು ಸರಿಯಾಗಿ ಸಂಗ್ರಹಿಸಿಲ್ಲ, ಯೋನಿ ಸ್ವ್ಯಾಬ್ ಅನ್ನು ಒಣಗಿಸಿ ಪ್ಯಾಕ್ ಮಾಡಬೇಕು, ಆದರೆ ವೈದ್ಯರು ಆ ಕೆಲಸ ಮಾಡಿಲ್ಲ. ಹೀಗಾಗಿ ಡಿಎನ್‌ಎ ವರದಿಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶವಿಲ್ಲ ,ಏಕೆಂದರೆ ಸಂಗ್ರಹಿಸಿದ್ದ ಮಾದರಿಗಳಲ್ಲಿ ಫಂಗಸ್ ಬೆಳೆದಿದ್ದವು ಎಂದು ಅದು ಹೇಳಿದೆ.
ಆರೋಪಿಗಳ ಬಗ್ಗೆ ತನಿಖಾ ಸಂಸ್ಥೆಯಿಂದ ಯಾವುದೇ ಸುಳಿವು ಇಲ್ಲದಿರುವಾಗ, ಯೋನಿ ಸ್ವ್ಯಾಬ್ ಅನ್ನು ಪರೀಕ್ಷಿಸುವ ತಜ್ಞರ ವರದಿಯು ಆರೋಪಿಯನ್ನು ಅಪರಾಧದೊಂದಿಗೆ ಸಂಪರ್ಕಿಸಲು ಉತ್ತಮ ಸಾಕ್ಷ್ಯವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಆದರೆ ಅದನ್ನು ಅಧಿಕಾರಿಗಳು ಸಮಸ್ತವಾಗಿ ನಡೆಸಿಲ್ಲ ಎಂದು ಹೇಳಿದೆ ಮಕ್ಕಳ ನ್ಯಾಯಾಲಯ. 2016 ರಲ್ಲಿ ಶಂಕಿತ ಆರೋಪಿಗಳಾದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ನಂತರ ಆ ಆದೇಶವನ್ನು ಕೋರ್ಟು ರದ್ದು ಮಾಡಿತ್ತು.
ಈ ಮೂಲಕ ಸೌಜನ್ಯ ಗೌಡ ಅವಳ ಪೋಷಕರು ಮತ್ತು ಅವರ ಹೋರಾಟಕ್ಕೆ ಬೆನ್ನಿಗೆ ನಿಂತ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೋರಾಟಗಾರರ ವಾದಕ್ಕೆ ಪುಷ್ಠಿ ಬಂದಿದೆ. ತನಿಖೆ ಸರಿಯಾಗಿ ಆಗಿಲ್ಲ, ಅಮಾಯಕರನ್ನು ಆರೋಪಿ ಮಾಡಲಾಗಿದೆ, ಧರ್ಮಸ್ಥಳದ ಪ್ರಭಾವಿಗಳನ್ನು ರಕ್ಷಿಸಲಾಗಿದೆ ಎಂಬ ವಾದಕ್ಕೆ ಪೂರಕವಾಗಿ, ಇತ್ತೀಚೆಗೆ ಆರೋಪಿಯಾಗಿದ್ದ ಸಂತೋಷ ರಾವ್ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾಗಿದ್ದ. ಹಾಗಾದರೆ ಅತ್ಯಾಚಾರ ಕೊಲೆ ಮಾಡಿದ್ದು ಯಾರು ಎನ್ನುವ ಬಗ್ಗೆ ಮತ್ತೆ ಸೌಜನ್ಯ ಪೋಷಕರು ಪ್ರಶ್ನೆಯನ್ನು ಎತ್ತಿದ್ದರು. ಅದಕ್ಕೆ ಪೂರಕವಾಗಿ ಇದೀಗ ಮಕ್ಕಳ ನ್ಯಾಯಾಲಯವು ಅಧಿಕಾರಿ ವರ್ಗ ಸರಿಯಾದ ತನಿಖೆ ನಡೆಸಿಲ್ಲ ಸೂಕ್ತ ಸಾಕ್ಷಿಗಳನ್ನು ಸಂಗ್ರಹಿಸಿಲ್ಲ ಎಂದಿದೆ. ಇದೀಗ ಇರುವ ಪ್ರಶ್ನೆ ಏನೆಂದರೆ ಅಧಿಕಾರಿ ವರ್ಗದ ಮೇಲೆ ಇದ್ದ ಒತ್ತಡ ಯಾವುದು, ಯಾವ ಕಾರಣಕ್ಕಾಗಿ ಅತ್ಯಂತ ಪ್ರಮುಖ ಸಾಕ್ಷಗಳಾದ ಕೊಲೆಯಾದ ಸೌಜನ್ಯ ಗೌಡಳ ಯೋನಿಯ ಸ್ಯಾಂಪಲ್, ಬಟ್ಟೆ ಬರೆ ಇರರ ಪರಿಕರಗಳನ್ನು. ಕಾಪಿಟ್ಟಿಲ್ಲ ? ಸಾಲು ಸಾಲು ಅಧಿಕಾರಿಗಳು ತಪ್ಪು ಮಾಡುತ್ತಾ ಹೋದರೆ ಅದಕ್ಕೆ ಒಂದು ಕಾರಣ ಇರಬೇಕಲ್ಲ ? ಅಧಿಕಾರಿಗಳು, ವೈದ್ಯರು ಸರಣಿ ತಪ್ಪು.ಮಾಡಲು ಕಾರಣ ಆದ ಪ್ರಭಾವಿಗಳು ಯಾರು ? ಮುಂತಾದ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತದೆ.
ಹಾಗಾಗಿ ಸೌಜನ್ಯ ಗೌಡಗೆ ನ್ಯಾಯ ಇನ್ನೂ ಸಿಕ್ಕಿಲ್ಲ ಎನ್ನುವುದು ಸೌಜನ್ಯಾ ಗೌಡ ಹೆತ್ತವರ ಅಳಲು ಮತ್ತು ಆಕ್ರೋಶ. ಈ ನಿಟ್ಟಿನಲ್ಲಿ ಸೌಜನ್ಯ ಪೋಷಕರು ಮತ್ತು ಸೌಜನ್ಯ ಗೌಡ ಪರ ಹೋರಾಟಗಾರರು ಇತ್ತೀಚಿಗೆ ಸರಣಿ ಪತ್ರಿಕಾ ಗೋಷ್ಠಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಮೂಡುಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಆಪಾದಿತರು ಪತ್ರಿಕಾ ಗೋಷ್ಠಿ ನಡೆಸಿದ್ದರು. ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಮಕ್ಕಳ ನ್ಯಾಯಾಲಯ ಇದೀಗ ಹೇಳುವ ಮೂಲಕ ಸೌಜನ್ಯಪರ ಹೋರಾಟದ ಮನೋಭಾವನೆಯನ್ನು ಇವತ್ತಿಗೂ ಉಳಿಸಿಕೊಂಡು ಪೋಷಕರಿಗೆ ಮತ್ತು ಹೋರಾಟಗಾರರಿಗೆ ಸಣ್ಣ ಮಟ್ಟದ ಬೆಂಬಲ ದೊರೆತಿದೆ ಎನ್ನಲೇ ಬೇಕಾಗುತ್ತದೆ.
ಇದನ್ನೂ ಓದಿ : ಮಂಗಳೂರು ಮೂಲದ ವಿದ್ಯಾರ್ಥಿ ತಿರುಪತಿಯ ಜಲಪಾತದಲ್ಲಿ ಬಿದ್ದು ಸಾವು!