ಬೆಳ್ತಂಗಡಿ: ಮಂಕು ಬೂದಿ ಸಾಧುಗಳ ಕೈಗೆ ಸಿಕ್ಕಿ, ಇರೋ ದುಡ್ಡನ್ನೆಲ್ಲ ಬಾಚಿ ಕೊಟ್ಟ ಯುವಕ, ಅಷ್ಟಕ್ಕೂ ಅಲ್ಲೇನು ನಡೆದಿತ್ತು?

ಮಂಕು ಬೂದಿ ಎರಚಿ ಮನಸ್ಸನ್ನು ವಶಪಡಿಸಿಕೊಂಡು ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳುವ ಗ್ಯಾಂಗ್ ಒಂದು ವೇಣೂರಿನಲ್ಲಿ ಪತ್ತೆಯಾಗಿದೆ. ಸನತ್ ಎಂಬ ಯುವಕನಿಗೆ ಬೂದಿಕೊಟ್ಟು ಮೂಸಿಸಿ ಕಣ್ಕಟ್ಟು ಮಾಡಿ ದುಡ್ಡು ಪೀಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರುನಲ್ಲಿ ನಡೆದಿದೆ. ಇದೀಗ ಪ್ರಕರಣವು ಪೊಲೀಸ್ ಸ್ಟೇಷನ್ ಮೆಟ್ಟಲೇರಿದೆ.

ನಿನ್ನೆ ಬೆಳ್ತಂಗಡಿಯಿಂದ ಮಾರ್ಗವಾಗಿ ಕಾರ್ ಒಂದು ಶೃಂಗೇರಿಗೆ ಹೋಗುತ್ತಿತ್ತು. ಗುಜರಾತ್ ರಿಜಿಸ್ಟ್ರೇಷನ್ ಹೊಂದಿರುವ ಆ ಇಂಡಿಕಾ ಕಾರಿನಲ್ಲಿ ಒಟ್ಟು ನಾಲ್ಕು ಜನ ಸಾಧುಗಳು ಎಂದು ಅನ್ನಿಸುವ ವ್ಯಕ್ತಿಗಳು ಸಂಚರಿಸುತ್ತಿದ್ದರು. ಹಾಗೆ ಶೃಂಗೇರಿಗೆ ಸಾಗುವ ದಾರಿಯಲ್ಲಿ ವೇಣೂರು ಪೇಟೆಯ ಸಮೀಪ ದಾರಿಯಲ್ಲಿ ಸಿಕ್ಕ ಯುವಕನನ್ನು ನೋಡಿ ದಾರಿ ಕೇಳುವ ನೆಪದಲ್ಲಿ ಕಾರು ನಿಲ್ಲಿಸಿದ್ದಾರೆ. ಅಲ್ಲಿ ಬೈಕ್ ಪಾರ್ಕ್ ಮಾಡಿಕೊಂಡು ಫಿಲ್ಟರ್ ಒಬ್ಬರಿಗೆ ಕಾಯುತ್ತಿದ್ದ ಸನತ್ ಎಂಬ ಯುವಕನು ಆ ಸಾಧು ಆಗಂತುಕರಿಗೆ ಶೃಂಗೇರಿಗೆ ಹೋಗುವ ದಾರಿ ಮತ್ತು ದೂರವನ್ನು ತಿಳಿಸಿದ್ದಾರೆ.

ಅಲ್ಲಿ ಆ ಯುವಕನ ಜತೆ ಸಂವಾದಕ್ಕೆ ಇಳಿದ ಸಾಧು ವೇಷಧಾರಿಗಳು ಸನತ್ ಗೆ ಆಶೀರ್ವಾದ ಮಾಡಿದ್ದು ನಂತರ ಒಂದಷ್ಟು ದಕ್ಷಿಣೆ ಕೇಳಿದ್ದಾರೆ. ಆಶೀರ್ವಾದ ನೀಡಿದ ಸ್ವಾಮೀಜಿಗಳಿಗೆ ಮೊದಲು 500 ರೂಪಾಯಿ ತೆಗೆದುಕೊಂಡಿದ್ದಾನೆ. ಆ ಯುವಕ ನಂತರ ಆತನ ಕೈಗೆ ಒಂದಷ್ಟು ಭಸ್ಮ ಸವರಿ, ಅದರ ವಾಸನೆ ನೋಡಲು ಹೇಳಿದ್ದು ಆ ಕ್ಷಣದಲ್ಲಿ ಯುವಕನಿಗೆ ದಿಗ್ಭ್ರಮೆ ಉಂಟಾಗಿದೆ. ಅವರು ಕೇಳಿದ ಹಾಗೆಲ್ಲ ಯುವಕ ಜೇಬಿನಿಂದ ಇರುವ ದುಡ್ಡನ್ನೆಲ್ಲ ಬಾಚಿ ಕೊಟ್ಟಿದ್ದಾನೆ. ಹಾಗೆ ಕಣ್ಣ್ ಕಟ್ಟಿಗೆ ಒಳಗಾದ ಯುವಕ ತನ್ನಲ್ಲಿದ್ದ ಎಲ್ಲಾ ಸುಮಾರು ನಾಲ್ಕುವರೆ ಸಾವಿರದಷ್ಟು ದುಡ್ಡು ಈ ರೀತಿ ಸಾಧು ವೇಷಧಾರಿಗಳ ಕೈಗೆ ಸಾಗಿದೆ. ಆ ಸಂದರ್ಭದಲ್ಲಿ ಯುವಕನಿಗೆ ಫೋನ್ ಕರೆ ಬಂದಿದ್ದರೂ, ಅದರ ಕಡೆ ಕೂಡ ಆತನ ಗಮನವಿರಲಿಲ್ಲ.

ಆದರೆ ಅಷ್ಟರಲ್ಲಿ ಆ ಯುವಕನ ಫಿಟ್ಟರ್ ಗೆಳೆಯ ಅಲ್ಲಿಗೆ ಬಂದಿದ್ದು, ಗೆಳೆಯ ಮಂಕು ಬೂದಿ ಸಾಧುಗಳಿಗೆ ಮೋಸ ಹೋದುದು ಅರಿವಿಗೆ ಬಂದಿದೆ. ಆತ ಪ್ರಶ್ನಿಸಲು ಶುರುವಾದ ಹಿನ್ನೆಲೆಯಲ್ಲಿ ಆ ಸಾಧುಗಳ ತಂಡ ಕಾರು ಸ್ಟಾರ್ಟ್ ಮಾಡಿಕೊಂಡು ಶೃಂಗೇರಿಯ ಕಡೆ ಧಾವಿಸಿದೆ. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಸ್ಥಳೀಯರು ಕಾರನ್ನು ಅಡ್ಡ ಹಾಕಿ ಹಿಡಿದು ಮಂಕು ಸಾಧುಗಳನ್ನು ಪೊಲೀಸ್ ಸ್ಟೇಶನ್ ಗೆ ಕರೆ ತಂದಿದ್ದಾರೆ. ಅಲ್ಲಿ ಪೊಲೀಸರು ತನಿಖೆ ನಡೆಸಿ ಮುಚ್ಚಳಿಕೆ ಬರೆಸಿಕೊಂಡು, ಅವರು ಸೀದಾ ಎಲ್ಲಿಯೂ ಸ್ಥಳೀಯವಾಗಿ ನಿಲ್ಲದೆ, ನೇರವಾಗಿ ತಮ್ಮ ಸ್ವ ಸ್ಥಾನ ಗುಜರಾತ್ ಗೆ ಹೋಗಲು ತಿಳಿಸಲಾಗಿದೆ ಎನ್ನುವ ಸುದ್ದಿ ವರದಿಯಾಗಿದೆ. ಮಂಕು ಬೂದಿ ನೆಪದಲ್ಲಿ ಯಾವ ಕೆಮಿಕಲ್ ಬಳಸಿ ಭ್ರಮೆ ಮೂಡಿಸಿ ದುಡ್ಡು ಬಾಚಿದರು ಎನ್ನುವ ಬಗ್ಗೆ ಸರಿಯಾಗಿ ತನಿಖೆ ನಡೆಸದೆ ಆರೋಪಿಗಳನ್ನು ಬಿಟ್ಟು ಕಳಿಸಿದ ಪೊಲೀಸ್ ನಡೆಯ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಇದೆ.

Leave A Reply

Your email address will not be published.