kannada film: 90 ಬಿಡಿ ಮನೆಗ್ ನಡಿ: ‘ ಅಮ್ಮಾ ತಾಯೇ ‘ ಖ್ಯಾತಿಯ ವೈಜನಾಥ್ ಬಿರಾದಾರ್ ಕಾಮಿಡಿ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ !
latest news kannada movies Date fixed for release of famous Vaijnath Biradar comedy movie
kannada film: ಬಣ್ಣದ ಲೋಕದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಜನ ಮಾನಸದಲ್ಲಿ ಹೆಸರು ಪಡೆದವರಲ್ಲಿ ಖ್ಯಾತ ನಟ ವೈಜನಾಥ್ ಬಿರಾದಾರ್ ಕೂಡಾ ಒಬ್ಬರು. ವಯಸ್ಸು 50 ಕಳೆಯುತ್ತಾ ಹೋದಂತೆ ಉತ್ಸಾಹ, ಆಸಕ್ತಿ ಕುಗ್ಗುವುದು ಸಹಜ. ಆದರೆ ಬಿರಾದರ್ ಅವರು ಎಂದಿಗೂ ಕುಗ್ಗದ ಉತ್ಸಾಹದ ಚಿಲುಮೆ. ‘ ಅಮ್ಮಾ ತಾಯೇ ‘ ಖ್ಯಾತಿಯ, ತನ್ನ ‘ ಚೆನ್ನಾಗಿದ್ದೀರಾ….’ ಅಂತ ಕಂಕುಳ ಕೆಳಗೆ ಕೈ ಹಾಕಿ ಮೂಸಿ ವಿಚಿತ್ರವಾಗಿ ಆನಂದಿಸುವ ಪಾತ್ರದಲ್ಲಿ ಸದಾ ನೆನಪಿನಲ್ಲಿ ಉಳಿಯುವ ನಟ ವೈಜನಾಥ್ ಬೀರಾದಾರ್. ಹೆಚ್ಚಾಗಿ ಭಿಕ್ಷುಕ ಪಾತ್ರಗಳಲ್ಲಿ ಭಿಕ್ಷುಕನಿಗಿಂತ ನೈಜವಾಗಿ ನಟಿಸಿ ತನ್ನ ಪ್ರತಿಭೆ ಮತ್ತು ಹಾಸ್ಯಪ್ರಜ್ಞೆಯನ್ನು ಮೆರೆದ ಇವರು ಇದೀಗ ತನ್ನ 70 ರ ಆಸುಪಾಸಿನಲ್ಲಿ ನಾಯಕ ನಟನಾಗುತ್ತಿದ್ದಾರೆ.
ಪ್ರತಿ ಬಾರಿ ತೆರೆ ಮೇಲೆ ಕಾಣಿಸಿಕೊಂಡಾಗಲೂ ಕೂಡ ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂಬುದನ್ನೂ ರುಜುವಾತು ಮಾಡುವುದೇ ಇವರ ಕಾಯಕ ಎಂದರು ತಪ್ಪಾಗದು. ತಮ್ಮ 500 ನೇ ಚಿತ್ರವಾಗಿರುವ ’90 ಬಿಡಿ ಮನೀಗ್ ನಡಿ’ ಚಿತ್ರ (kannada film) ಜೂನ್ 29 ರಂದು ಬಿಡುಗಡೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಬಿರಾದಾರ್ ಅವರು ತಮ್ಮ 70 ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಇದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಬಿರಾದಾರ್ ಅಗರಬತ್ತಿ ಮಾರಾಟಗಾರನ ಪಾತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
‘ ನೈಂಟಿ ಹೊಡಿ, ಮನೆಗ್ ನಡಿ ‘ ಎನ್ನುವ ಸಿನಿಮಾ ಟೈಟಲ್ ಗೆ ಸೆನ್ಸಾರ್ ಮಂಡಳಿಯಿಂದ ಅಡ್ಡಿ ಎದುರಾಗಿತ್ತು. ನಂತರ ನೈಂಟಿ ಹೊಡೆಯುವ ಬದಲು ‘ ನೈಂಟಿ ಬಿಡಿ…’ ಎಂದು ಚಿತ್ರತಂಡ ಟೈಟಲ್ ಫಿಕ್ಸ್ ಮಾಡಿಕೊಂಡಿತು. ಕುಡುಕರಿಗೆ ‘ ಹೊಡಿ ಅಂದರೂ ಒಂದೇ ಬಿಟ್ಕೊ, ಬಿಡಿ, ಏರ್ಸು, ಇಳಿಸು, ಹೀರು…’ ಹೀಗೆ ಯಾವುದೇ ಹೆಸರಿನಲ್ಲಿ ಕರೆದರೂ ಆರ್ಥ ಆಗುವ ಕಾರಣ ‘ 90 ಬಿಡಿ ಮನೆಗ್ ನಡಿ ‘ ಚಿತ್ರ ಟೈಟಲ್ ಫೈನಲ್ ಆಗಿತ್ತು.
ಈ ಚಿತ್ರದಲ್ಲಿ ನಾಯಕನಾಗಿ ಎಲ್ಲರನ್ನು ರಂಜಿಸಲು ರೆಡಿಯಾಗಿರುವ ಈ ಸಿನಿಮಾದಲ್ಲಿ ಬಿರಾದರ್ ಅವರ ಒಳಗೆ ಅಡಗಿರುವ ಪ್ರತಿಭೆ ಅನಾವರಣಗೊಳ್ಳುತ್ತಿದೆ. 90 ಬಿಡಿ ಮನೀಗ್ ನಡಿ ಸಿನಿಮಾದಲ್ಲಿ ನೀತಾ ಮೈಂದರಗಿ, ಪ್ರೀತು ಪೂಜಾ, ಧರ್ಮ, ಕರಿಸುಬ್ಬು, ಮತ್ತು ಅಭಯ್ ವೀರ್ ಒಳಗೊಂಡ ತಾರಾಗಣ ಬಣ್ಣ ಹಚ್ಚಿದೆ. ಅಮ್ಮಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ರತ್ನಮಾಲಾ ಬಾದರದಿನ್ನಿ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತ ಮತ್ತು ಶಿವು ಬೆರಗಿ ಅವರ ಹಾಡುಗಳು ಸಮ್ಮಿಲಿತ ಗೊಂಡು ನೋಡುಗರ ಮನ ಗೆಲ್ಲಲು ಅಣಿಯಾಗಿದೆ.
ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ‘ಸಿಂಗಲ್ ಕಣ್ಣ ಹಾರುಸ್ತಿ’ ಹಾಡಿನಲ್ಲಿ ನಟ ಬಿರಾದಾರ್ 20 ವರ್ಷ ವಯಸ್ಸಿನವರಂತೆ ನಟಿಸಿದ್ದು, ಹಾಡು ಈಗಾಗಲೇ ಹಿಟ್ ಲಿಸ್ಟ್‌ನ ಸಾಲಿಗೆ ಸೇರ್ಪಡೆ ಯಾಗಿದೆ. ನಾಗರಾಜ್ ಅರೆಹೊಳೆ ಮತ್ತು ಉಮೇಶ್ ಬಾದರದಿನ್ನಿ ನಿರ್ದೇಶನದ ಈ ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಷ್ಟೇ ಅಲ್ಲದೇ, ಬಿರಾದಾರ್ ಅವರ ಪ್ರತಿಭೆಯನ್ನು ಜಗತ್ತಿಗೆ ಜಗಜ್ಜಾಹೀರು ಮಾಡುವ ಸಲುವಾಗಿ ಅವರ ವಯಸ್ಸನ್ನು ಪರಿಗಣಿಸದೆ ಸಿನಿಮಾದಲ್ಲಿ ಬಿರಾದರ್ ಅವರಿಗೆ ಅವಕಾಶ ನೀಡಿರುವುದನ್ನೂ ನಿರ್ದೇಶಕರು ನಾಗರಾಜ್ ಅರೆಹೊಳೆ ಸಮರ್ಥನೆ ಮಾಡಿಕೊಂಡಿದ್ದಾರೆ. 70 ವರ್ಷ ವಯಸ್ಸಿನವರಾಗಿದ್ದರೂ, ಬಿರಾದಾರ್ ಅವರ ಅಚಲವಾದ ಸಿನಿಮಾ ಉತ್ಸಾಹ ಉಳಿದವರಿಗೆ ಮಾದರಿಯಾಗಿದೆ. ಬೀರಾದರ್ ಹಾಸ್ಯಕ್ಕೆ ಮತ್ತವರ ಜೀವನೋತ್ಸಾಹಕ್ಕೆ ಒಮ್ಮೆಯಾದರೂ ಈ ಚಿತ್ರವನ್ನು ನೋಡಲೇಬೇಕು.