ಕಾಂಗ್ರೆಸ್‌ ಶಾಸಕನನ್ನು ಪ್ರೀತಿಯಿಂದ ಅಪ್ಪಿಕೊಂಡು ಅಭಿನಂದಿಸಿದ ಬಿಜೆಪಿ ಸಂಸದ ಅನಂತಕುಮಾರ್‌ ಹೆಗಡೆ

ರಾಜಕೀಯದ ಆಟ ಏನೇ ಇರಲಿ, ಇದರಲ್ಲಿ ಹೆಚ್ಚಾಗಿ ದ್ವೇಷ ಕಟ್ಟಿಕೊಳ್ಳುವುದು ಕಾರ್ಯಕರ್ತರು. ಆದರೆ ಅಧಿಕಾರದಲ್ಲಿರುವ ಮಹನೀಯರೆಲ್ಲ ತನ್ನ ವಿರೋಧ ಪಕ್ಷದವರೊಟ್ಟಿಗೆ ಊಟ ಮಾಡುವುದು, ಸಂಭಾಷಣೆ ನಡೆಸುವುದು ಹಾಗೆನೇ ಬಿಗಿದಪ್ಪಿಕೊಂಡು ಸಂತಸ ವ್ಯಕ್ತಪಡಿಸುವುದು ಇವೆಲ್ಲ ಮಾಮೂಲು. ಆದರೆ ಇವೆಲ್ಲವನ್ನೂ ನೋಡಿಯೂ ನೋಡದ ಹಾಗೆ ಇರುವವರು ಅಂದರೆ ಅದು ಪ್ರತಿಯೊಂದು ಪಕ್ಷದ ಕಾರ್ಯಕರ್ತರು.

ಈಗ ಈ ವಿಷಯ ಯಾಕೆ ಬಂತು ಎಂದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಸದ ಅನಂತಕುಮಾರ್‌ ಹೆಗಡೆ ಅವರು ಕಾರವಾರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರನ್ನು ಭಾರೀ ಸಂತಸದಿಂದ ಆಲಂಗಿಸಿ ಸಂತಸ ವ್ಯಕ್ತ ಪಡಿಸಿದ ಫೋಟೋವೊಂದು ಶುಕ್ರವಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದನ್ನು ಉಂಟು ಮಾಡಿದೆ.

ವಿಧಾನಸಭಾ ಚುನಾವಣೆ ಮುಗಿದ ನಂತರ ಇವರಿಬ್ಬರು ಭೇಟಿ ಇದೇ ಮೊದಲು. ಈ ಅಪ್ಪುಗೆಯ ಖುಷಿಯನ್ನು ಬಿಜೆಪಿ ಕಾಂಗ್ರೆಸ್‌ ತನ್ನದೇ ಮಾತಿನಲ್ಲಿ ವಿವಿಧ ರೀತಿಯಲ್ಲಿ ಕೊಂಡಾಡಿದೆ. ಬಿಜೆಪಿಯ ಫೈರ್‌ ಬ್ರಾಂಡ್‌ ನಾಯಕ ಎಂದೇ ಪ್ರಸಿದ್ಧಿ ಪಡೆದಿರುವ ಹೆಗಡೆ ಅವರು ವಿಧಾನಸಭಾ ಚುನಾವಣಾ ಸಮಯದಲ್ಲಿ ಯಾವುದೇ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರಲಿಲ್ಲ. ಅಷ್ಟು ಮಾತ್ರವಲ್ಲದೇ ಪ್ರಧಾನಿ ಮೋದಿ ಅಂಕೋಲಕ್ಕೆ ಬಂದಾಗಲೂ ಸಂಸದ ಅನಂತ ಕುಮಾರ್‌ ಹೆಗಡೆ ಗೈರಾಗಿರುವುದು ಎದ್ದು ಕಾಣುತ್ತಿತ್ತು.

ಅಂದ ಹಾಗೆ ಅನಂತಕುಮಾರ್‌ ಹೆಗಡೆ ಅವರು ಈ ಹಿಂದೆ ಸತೀಶ್‌ ಸೈಲ್‌ ಅವರನ್ನು ಬಿಜೆಪಿಗೆ ಕರೆ ತರಲು ಪ್ರಯತ್ನಪಟ್ಟಿದ್ದಾಗಿಯೂ ಆದರೆ ಇದಕ್ಕೆ ಪಕ್ಷದ ವರಿಷ್ಠರು ಒಪ್ಪಿರಲಿಲ್ಲ. ಅನಂತರ ಸತೀಶ್‌ ಸೈಲ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಆದರೆ ಇದೀಗ ಅನಂತ್‌ ಕುಮಾರ್‌ ಹೆಗಡೆ ಅವರು ಶಾಸಕ ಸತೀಶ್‌ ಸೈಲ್‌ ಅವರನ್ನು ಬಹಳ ಪ್ರೀತಿಯಿಂದ ಅಪ್ಪಿಕೊಂಡಿರುವುದು ನೋಡಿದರೆ ಇದರ ಒಳಮರ್ಮ ತಿಳಿಯದೆ ಇದೊಂದು ಫೋಟೋ ಭಾರೀ ಚರ್ಚೆಗೆ ಗುರಿಯಾಗಿರುವುದಂತೂ ನಿಜ.

Leave A Reply

Your email address will not be published.