Koppal: ನುಗ್ಗಾಡಿ ಹತ್ತಿ ಸೀಟು ಪಡೆಯುವ ಮಹಿಳಾ ಶಕ್ತಿ ಎದುರು ಬೆಪ್ಪಾಗಿ ಬಸ್ಸು ಮಿಸ್ಸು ಮಾಡಿಕೊಂಡ ಪುರುಷರು !

Koppal: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ನುಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇವುಗಳ ಪೈಕಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ (ಶಕ್ತಿ ಯೋಜನೆಗೆ) ಈಗಾಗಲೇ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ನಾರಿಮಣಿಯರು ಉಚಿತ ಪ್ರಯಾಣವನ್ನು ಸಂಭ್ರಮಿಸುತ್ತಿದ್ದಾರೆ. ಆದರೆ, ಮಹಿಳೆಯರೇ ತುಂಬಿದ ಬಸ್ಸಿನಲ್ಲಿ ಪುರುಷರ ಪರದಾಟ ಯಾರಿಗೂ ಬೇಡ!. ಹೌದು, ಬಸ್ಸಿಗಾಗಿ ನುಗ್ಗಾಡಿ ಹತ್ತಿ ಸೀಟು ಪಡೆಯುವ ಮಹಿಳಾ ಶಕ್ತಿ ಎದುರು ಪುರುಷರು ಬೆಪ್ಪಾಗಿ ನಿಂತು ಬಸ್ಸು ಮಿಸ್ಸು ಮಾಡಿಕೊಳ್ಳುತ್ತಿದ್ದಾರೆ.

 

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಜೂ. 11 ರಂದು ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಿದರು. ಅಂತೆಯೇ ಜಿಲ್ಲಾ ಕೇಂದ್ರಗಳಲ್ಲೂ ಚಾಲನೆ ದೊರೆಯಿತು. ಇದೀಗ ಮಹಿಳೆಯರು ಭಾರೀ ಖುಷಿಯಿಂದ ಬಸ್ಸು ಪೂರ್ತಿ ಆಕ್ರಮಿಸಿಕೊಳ್ಳುತ್ತಿದ್ದಾರೆ. ಚಾಲನೆ ಸಿಕ್ಕಿದ ಮೊದಲ ದಿನವೇ ಮಧ್ಯರಾತ್ರಿ 12 ಗಂಟೆಯ ತನಕ ಕೊಪ್ಪಳ (Koppal) ಜಿಲ್ಲೆಯಲ್ಲಿ ಎಂಟು ಸಾವಿರ ಜನ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ನಲ್ಲಿ ಸಂಚರಿಸಿದ್ದಾರೆ.

 

ಉಚಿತ ಬಸ್ ಪ್ರಯಾಣದ ಹಿನ್ನೆಲೆ ಬಸ್ಸಿನಲ್ಲಿ ಪುರುಷರು ಸಂಖ್ಯೆ ಕಡಿಮೆಯಾಗಿದೆ. ಮಹಿಳೆಯರೇ ಬಸ್ಸಿಗಾಗಿ ಮುನ್ನುಗ್ಗುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯರೇ ಯಥೇಚ್ಛವಾಗಿದ್ದು, ಬರುವ ಹೋಗುವ ಎಲ್ಲಾ ಬಸ್ಸುಗಳು ಫುಲ್ ಫುಲ್!. ಮಹಿಳೆಯರಂತೂ ಉಚಿತ ಟಿಕೆಟ್ ಎಂದು ತವರು ಮನೆ, ಟ್ರಿಪ್ ಎಂದು ಸುತ್ತಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ ’ಸರ್ಕಾರದಿಂದ ಈಗ ಮಹಿಳೆಯರಿಗೆ ಉಚಿತ ಪ್ರಯಾಣವಿದೆ. ಎಲ್ಲರೂ ಟೂರ್‌ ಹೋಗೋಣ’ ಎನ್ನುವ ಚರ್ಚೆ ಬಸ್‌ಗಳಲ್ಲಿದ್ದ ಮಹಿಳಾ ಪ್ರಯಾಣಿಕರಿಂದ ಕೇಳಿ ಬಂದಿದ್ದೂ ಇದೆ.

 

ಇಲ್ಲಿ ಸಾಮಾನ್ಯವಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬಸ್‌ ನಿಲ್ದಾಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ಉಚಿತ ಬಸ್ ಪ್ರಯಾಣದಿಂದಾಗಿ ಬಸ್ ಬಂದರೆ ನೋಡನೋಡುತ್ತಲೇ ಮಹಿಳೆಯರು ಬಸ್ ಪೂರ್ತಿ ತುಂಬಿ ಹೋಗುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾದು ಕಾದು, ಮನೆಗೆ ಹೋಗಲು ತಡವಾಗುತ್ತದೆ, ಅಲ್ಲದೆ ಬಸ್ ರಷ್ ನಿಂದಾಗಿ ಬಾಗಿಲು ಬಳಿ ನಿಲ್ಲುವ ಸನ್ನಿವೇಶ ಎದುರಾಗುತ್ತದೆ ಎಂಬ ಧ್ವನಿ ಕೇಳಿಬರುತ್ತಿದೆ. ಈ ರೀತಿಯ ಸಮಸ್ಯೆ ಕೊಪ್ಪಳ ಮಾತ್ರವಲ್ಲದೆ ಎಲ್ಲಾ ಕಡೆಯಲ್ಲೂ ಇದೆ ಎಂದೇ ಹೇಳಬಹುದು. ಕಂಡೆಕ್ಟರ್ ಗಳಿಗೆ ಪ್ರಯಾಣಿಕರನ್ನು ನಿರ್ವಹಣೆ ಮಾಡಲು ಪ್ರಯಾಸ ಪಡುವ ಪರಿಸ್ಥಿತಿ ಎದುರಾಗಿದೆ. ಕೆಲವೆಡೆ ನಿಗದಿಯಷ್ಟೇ ಬಸ್‌ಗಳಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇದು ಸಾರಿಗೆ ಸಿಬ್ಬಂದಿಗೂ ತಲೆನೋವೇ ಸರಿ!.

ಇದನ್ನೂ ಓದಿ :ವಿದ್ಯುತ್ ಬಿಲ್ ನಾವು ಹೆಚ್ಚು ಮಾಡಿಲ್ಲ!ಸಚಿವ ಜಾರ್ಜ್ ಆರೋಪಕ್ಕೆ ಬೊಮ್ಮಾಯಿ ಪ್ರತ್ಯುತ್ತರ !

Leave A Reply

Your email address will not be published.