ಗೃಹಜ್ಯೊತಿ ಹೊಸ ಮಾರ್ಗ ಸೂಚಿ ಪ್ರಕಟ: ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೆ ವಿದ್ಯುತ್ ಯೂನಿಟ್ ನಿಗದಿ ಮಾಡಿ ಆದೇಶ
Gruhajyothi :ಗೃಹಜ್ಯೋತಿ ಯೋಜನೆಯ ಇನ್ನೊಂದು ಅನುಮಾನಕ್ಕೆ ಸರ್ಕಾರ ಸ್ಪಷ್ಟನೆ ನೀಡಿದೆ. ಹೊಸ ಬಾಡಿಗೆದಾರರು ಮತ್ತು ಹೊಸ ಮನೆ ಕಟ್ಟಿದವರಿಗೆ ಗೃಹಜ್ಯೋತಿ (Gruhajyothi)ಯೋಜನೆ ಕತೆ ಏನು? ಉಳಿದವರ ಹಾಗೆ ವಿದ್ಯುತ್ ಬಿಲ್ಲಿನಲ್ಲಿ ವಾರ್ಷಿಕ ಸರಾಸರಿ ತೆಗೆಯಲು ಆಗದ ಹೊಸ ಮನೆಯ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಯೂನಿಟ್ ಗಳನ್ನು ನಿಗದಿ ಮಾಡುವುದು ಹೇಗೆ ಎಂಬ ಅನುಮಾನಕ್ಕೆ ಸರಕಾರ ಈಗ ಪರಿಹಾರ ಸೂಚಿಸಿದೆ.
ಹೊಸ ಮನೆ ಕಟ್ಟಿದವರಿಗೆ ಮಾಸಿಕ 53 ಯುನಿಟ್ ಜತೆಗೆ ಶೇ.10 ರಷ್ಟು ಉಚಿತ ವಿದ್ಯುತ್ ಲಭ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಇದು ಹೊಸ ಮನೆಯನ್ನು ಪ್ರವೇಶಿಸಿದವರಿಗೂ ಮತ್ತು ಹೊಸ ಮನೆ ಕಟ್ಟಿದವರಿಗೂ ಅನ್ವಯವಾಗಲಿದೆ.
ನಿನ್ನೆ ವಿಧಾನಸೌಧದಲ್ಲಿ ಇಂಧನ ಇಲಾಖೆ ಅಧಿಕಾರಿಗಳ ಜತೆ ಹೊಸ ಬಾಡಿಗೆದಾರರು ಮತ್ತು ಹೊಸಮನೆ ಕಟ್ಟಿದವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಕಲ್ಪಿಸುವ ಕುರಿತು ಸಭೆ ನಡೆಸಿದ್ದರು. ತದನಂತರ ಸುದ್ದಿಗಾರರ ಜತೆ ಮಾತನಾಡಿದ ಜಾರ್ಜ್, ಹೊಸದಾಗಿ ಮನೆ ನಿರ್ಮಿಸಿದವರಿಗೆ ಮತ್ತು ಹೊಸ ಬಾಡಿಗೆದಾರರಿಗೆ ಸರಾಸರಿ 53 ಯುನಿಟ್ ಜತೆಗೆ ಶೇ.10 ರಷ್ಟು ಎಕ್ಸ್ಟ್ರಾಯುನಿಟ್ ಬಳಕೆ ಮಿತಿಯನ್ನು ವಿಧಿಸಲು ನಿರ್ಧರಿಸಲಾಗಿದೆ. ಅದರಂತೆ ಒಟ್ಟು 58 ಯುನಿಟ್‌ವರೆಗೆ ಉಚಿತ ವಿದ್ಯುತ್ ಸಿಗಲಿದೆ. ಒಂದು ವರ್ಷದವರೆಗೆ ಲೆಕ್ಕ ಸಿಗದವರಿಗೆ ಇದು ಅನ್ವಯವಾಗಲಿದೆ. 12 ತಿಂಗಳ ನಂತರ ಸರಾಸರಿಯನ್ನು ತೆಗೆದುಕೊಂಡು ಹೊಸ ಸರಾಸರಿ ನಿಗದಿ ಮಾಡಲಾಗುವುದು. ಅಲ್ಲಿಯವರೆಗೆ 53 ಯುನಿಟ್ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಿ ಬಳಕೆಯ ಮಿತಿ ಇರಲಿದೆ. ವರ್ಷದ ಬಳಿಕ ಸರಾಸರಿಯನ್ನು ಗಮನಿಸಿ ಅವರಿಗೂ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು.
‘200 ಯುನಿಟ್ ಉಚಿತ ವಿದ್ಯುತ್ ಷರತ್ತು ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಈಗಿನ ವಿದ್ಯುತ್ ದರ ಏರಿಕೆ ತೀರ್ಮಾನವು ನಮ್ಮ ಕಾಂಗ್ರೆಸ್ ಸರ್ಕಾರದ್ದಲ್ಲ. ಇದು ಈ ಹಿಂದಿನ ಬಿಜೆಪಿ ಸರ್ಕಾರದ ಸಮಯದಲ್ಲಾಗಿದ್ದು, ಈಗ ನಾವು ಜಾರಿ ಮಾಡುತ್ತಿದ್ದೇವೆ’ ಎಂದು ಸಚಿವ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
‘ಕೆಇಆರ್‌ಸಿ ದರ ಏರಿಕೆ ಮಾಡಿರುವುದನ್ನು ನಾವು ಜಾರಿ ಮಾಡಲೇಬೇಕಾಗುತ್ತದೆ. ದರವನ್ನು ಕೆಇಆರ್‌ಸಿ ಯುನಿಟ್‌ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿದೆ. ಜತೆಗೆ ಸ್ಲಾಬ್‌ಗಳಲ್ಲೂ ಬದಲಾವಣೆ ಮಾಡಿದೆ. ವಿದ್ಯುತ್ ದರ ಏರಿಕೆಯಲ್ಲಿ ತಪ್ಪಾಗಿದ್ದರೆ, ಅದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ನಂತರ ಕೆಇಆರ್‌ಸಿ ಮುಂದೆ ಪರಿಶೀಲನೆ ಬಗ್ಗೆ ಅರ್ಜಿ ಸಲ್ಲಿಸುವ ಕುರಿತು ತೀರ್ಮಾನ ಮಾಡುತ್ತೇವೆ ಎಂದು’ ಇಂಧನ ಸಚಿವ ಜಾರ್ಜ್ ಹೇಳಿದರು.
ಇದನ್ನೂ ಓದಿ : 5 ದಿನಗಳಲ್ಲಿ 50 ಲಕ್ಷ ಮನೆಗಳ ಬಾಗಿಲಿಗೇ ಬರಲಿದೆ ಬಿಜೆಪಿ ನಾಯಕರ ದಂಡು!!ಕಾರಣವೇನು?