ಒಡಿಶಾ ರೈಲು ದುರಂತದ ಸಂದರ್ಭ ಶವಗಳನ್ನು ಇರಿಸಲಾಗಿದ್ದ ಶಾಲೆ ನೆಲಸಮ: ಶಾಲೆಗೆ ಬರಲು ಮಕ್ಕಳು ಹಿಂದೇಟು ಹಿನ್ನೆಲೆ

Odisha Train Crash:ಒಡಿಶಾ ಭೀಕರ ರೈಲು ಅಪಘಾತದಲ್ಲಿ (Odisha Train Crash) ಮೃತಪಟ್ಟವರ ದೇಹಗಳನ್ನು ಇರಿಸಲಾಗಿದ್ದ ಬಹನಾಗ್‍ನ (Bahanaga) ಸರ್ಕಾರಿ ಶಾಲೆಯನ್ನು (School) ಇಂದು, ಶುಕ್ರವಾರ ಕೆಡವಲಾಗಿದೆ.

 

ಈ ಶಾಲೆಯಲ್ಲಿ ಕಳೆದ ಶುಕ್ರವಾರ ಭೀಕರ ರೈಲು ಅಪಘಾತದಿಂದ ಸತ್ತ ಶವಗಳನ್ನು ಸಾಲು ಸಾಲಾಗಿ ಇರಿಸಲಾಗಿತ್ತು. ಶಾಲೆಯಲ್ಲಿ ಶವಗಳನ್ನು ಇರಿಸಿದ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದರು. ರೈಲು ಅವಘಡದ ನಂತರ ಶಾಲೆಯ ಕೆಲವು ಹಿರಿಯ ವಿದ್ಯಾರ್ಥಿಗಳು ಮತ್ತು ಎನ್‍ಸಿಸಿ ಕೆಡೆಟ್‍ಗಳು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆದರೆ ಕಿರಿಯ ವಿದ್ಯಾರ್ಥಿಗಳು ಶಾಲೆಯಲ್ಲಿ ಶವ ಮಲಗಿಸಿದ ಕಾರಣಕ್ಕೆ ಭಯಗೊಂಡಿದ್ದರು.

 

ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕಿದ ಕಾರಣದಿಂದ ಶಾಲಾ ಆಡಳಿತ ಮಂಡಳಿ ಸರಕಾರಕ್ಕೆ ಶಾಲೆಯನ್ನು ಕೆಡವಲು ಮನವಿ ಮಾಡಿತ್ತು. ಅಲ್ಲದೆ, ಈ ಶಾಲಾ ಕಟ್ಟಡ 65 ವರ್ಷ ಹಳೆಯದಾಗಿದ್ದು, ಈ ಸಂದರ್ಭದಲ್ಲಿ ಹೊಸ ಶಾಲೆ ನಿರ್ಮಿಸಿ ಕೊಡುವಂತೆ ಬೇಡಿಕೆ ಇಡಲಾಗಿತ್ತು. ಮಕ್ಕಳ ಭಯ ಮತ್ತು ಪೋಷಕರ ಆತಂಕ ದೂರ ಮಾಡಲು ಶಾಲಾ ಆವರಣದಲ್ಲಿ ಧಾಮಿಕ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಪ್ರಮಿಳಾ ಸ್ವೈನ್ ತಿಳಿಸಿದ್ದಾರೆ.

 

ಕಳೆದ ಶುಕ್ರವಾರ ಜೂ. 2 ರಂದು ಒಡಿಶಾದ ಬಾಲಾಸೂರ್‌ನ ರೈಲು ಅಪಘಾತದಲ್ಲಿ 278 ಜನ ಸಾವಿಗೀಡಾಗಿದ್ದರು. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಒಂದು ಶಾಲಾ ಕಟ್ಟಡವನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿತ್ತು. ಅದನ್ನೀಗ ಕೆಡವಲಾಗಿದೆ, ಆ ಜಾಗದ ಪಕ್ಕದಲ್ಲೇ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ.

 

ಇದನ್ನೂ ಓದಿ:Women Career: ಈ ಕಂಪನಿ ನೀಡುತ್ತೆ ಮಹಿಳೆಯರಿಗೆ ಸೆಕೆಂಡ್ ಚಾನ್ಸ್, ಮತ್ತೆ ಶುರು ಮಾಡ್ಕೊಳ್ಳಿ !

 

Leave A Reply

Your email address will not be published.