Arecanut leaf spot disease: ಅಡಿಕೆ ಬೆಳೆಗಾರರಿಗೆ ರೋಗ ಮಾಹಿತಿ: ಎಲೆ ಚುಕ್ಕಿ ರೋಗಕ್ಕೆ ಪರಿಣಾಮಕಾರಿ ಔಷಧಿ ಯಾವುದು ಗೊತ್ತುಂಟೋ ?!

Arecanut : ಕೇರಳದಲ್ಲಿ (Kerala) ಈಗಾಗಲೇ ಮುಂಗಾರು ಮಳೆ ಪ್ರವೇಶವಾಗಿದೆ. ರಾಜ್ಯದಲ್ಲಿಯೂ ಮಳೆಯ ಅಬ್ಬರ ಜೋರಾಗಿಯೇ ಇದೆ. ಈ ರಾಜ್ಯದಲ್ಲಿ ಮುಂಗಾರು ಮಾರುತ ತಡವಾಗಿ ಬರುತ್ತಿದೆ. ಕರ್ನಾಟಕದ (Karnataka) ರೈತಾಪಿ ವರ್ಗ ಮಳೆಗಾಲದ ನಿರೀಕ್ಷೆಯಲ್ಲಿದ್ದಾರೆ. ಗದ್ದೆಯ ಬಿತ್ತನೆಗೆ, ಉಳುಮೆಗೆ ಮತ್ತು ತೋಟದ ಆರಂಭಿಕ ಕೆಲಸಕಾರ್ಯಗಳು ಭರದಿಂದ ಸಾಗುತ್ತಿವೆ. ಬೇಸಿಗೆಯ ಬೇಗೆ ಸುಡುತ್ತಿದ್ದ ಅಡಿಕೆ (Arecanut)ಕೃಷಿ ಮಳೆಯ ಆಗಮನದಿ ಸಂತಸದಿಂದಿವೆ. ಈ ಮಧ್ಯೆ ಅಡಿಕೆ ಬೆಳೆಗಾರರಿಗೆ ಮಹತ್ವದ ಮಾಹಿತಿ ಇಲ್ಲಿದೆ.

 

ಮಳೆಗಾಲ ಆರಂಭ ಆಗಿರುವುದರಿಂದ ಅಡಿಕೆ ಕೃಷಿಗೆ ಎಲೆಚುಕ್ಕೆ ರೋಗವೂ ಆಕ್ರಮಿಸುತ್ತಿದೆ. ಎಲೆ ಚುಕ್ಕೆ ರೋಗಕ್ಕೆ ತುತ್ತಾದ ಮರಗಳ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆ ಹುಟ್ಟಿಕೊಳ್ಳುತ್ತವೆ. ಈ ಚಿಕ್ಕ ಚಿಕ್ಕ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಳ್ಳುತ್ತಾ ಇಡೀ ಅಡಕೆ ಮರದ ಸೋಗೆಗಳಿಗೆ ವ್ಯಾಪಿಸುತ್ತವೆ. ಇದೇ ಅಡಕೆ ಮರದ ಅವನತಿಗೆ ಕಾರಣವಾಗುತ್ತದೆ. ಅಡಿಕೆ ಸೋಗೆಗಳು ಸೊರಗಿ, ಒಣಗಿ ಅಡಕೆ ಮರ ಬಲಹೀನಗೊಳ್ಳುತ್ತಾ ಹೋಗುತ್ತದೆ. ನಂತರ ಅಡಕೆ ಇಳುವರಿ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಬಹುದೊಡ್ಡ ನಷ್ಟ ಉಂಟಾಗುತ್ತದೆ. ಹಾಗಾಗಿ ಈ ರೋಗವನ್ನು ನಿಯಂತ್ರಣ ಮಾಡಲು ಇಲ್ಲಿದೆ ಕೆಲವು ಮುಂಜಾಗ್ರತೆ ಕ್ರಮಗಳು.

 

ನಿರ್ವಹಣೆ ಕ್ರಮಗಳು ಹೀಗಿವೆ:-

 

• ರೋಗ ಉಂಟಾಗಿರುವ ಅಡಿಕೆ ಗರಿಗಳು, ಒಣಗಿರುವ, ಹಳದಿಯಾಗಿರುವ ಗರಿಗಳನ್ನು ಅಡಿಕೆ ತೋಟದಿಂದ ತೆಗೆದು ಬೇರೆಡೆ ರಾಶಿ ಹಾಕಿ ಅದನ್ನು ಸುಟ್ಟು ಹಾಕಿ. ಇದರಿಂದ ಇತರ ಅಡಿಕೆ ಮರಗಳಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ.

• ರೋಗ ಪೀಡಿತ ಅಡಿಕೆ ಸಸಿಗಳನ್ನು ಬೇರೆಡೆಗೆ ಕೊಂಡೊಯ್ಯಬೇಡಿ. ಇತರ ಸಸಿಗಳಿಗು ಹರಡುತ್ತದೆ.

• ಮುಂಗಾರು ಪ್ರಾರಂಭದಲ್ಲಿ ಅಡಿಕೆ ಗೊನೆಗಳಿಗೆ ಜೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ ಅಡಿಕೆ ಎಲೆಗಳಿಗೂ ಸಿಂಪಡಿಸಿ.

 

• ಹೆಚ್ಚು ಬಾಧೆಯಿರುವ ತೋಟಗಳಲ್ಲಿ ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಇಲ್ಲದಾಗ ಪ್ರೋಪಿಕೋನಝೋಲ್ (Propiconazole 25, EC) ಶಿಲೀಂದ್ರನಾಶಕವನ್ನು ಸಿಂಪಡಿಸಿ.

• ಈ ಶಿಲೀಂದ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿ ಲೀಟರ್ ಪ್ರಮಾಣದಂತೆ ಎಲೆಗಳಿಗೆ ಸಿಂಪಡಿಸಿ.

• ನಂತರ ಕಾರ್ಬರ್ಬೆನ್ಡಜಿಮ್ 12% + ಮ್ಯಾಂಕೋಜೆಟ್ 63% + (ಒಂದು ಲೀಟರ್ ನೀರಿಗೆ ಎರಡು ಗ್ರಾಂ) ಅಥವಾ ಅಂರ್ತವ್ಯಾಪಿ ಶಿಲೀಂದ್ರನಾಶಕಗಳಾದ ಹೆಕ್ಸಾಕೊನಝೋಲ್ (Hexaconazole 5 %) ಅಥವಾ ಟೆಬುಕೊನಝೋಲ್ (Tebuconazole, 38.9 %) ಶಿಲೀಂಧ್ರನಾಶಕವನ್ನು ಸಿಂಪಡಿಸಿ.

 

• ತೋಟದ ಮಣ್ಣು ಪರೀಕ್ಷಿಸಿ ನಂತರ ಅದರ ಆಧಾರದ ಮೇಲೆ

ಗೊಬ್ಬರ ಹಾಕಿ.

• ಅಡಿಕೆ ಮರಕ್ಕೆ 12 ಕಿಲೋಗ್ರಾಂ ಹಟ್ಟಿಗೊಬ್ಬರ ಮತ್ತು ಹಸಿರೆಲೆ, ಯೂರಿಯ (220 ಗ್ರಾಂ), ರಾಕ್ ಫಾಸ್ಫೇಟ್ (200 ಗ್ರಾಂ) ಮತ್ತು ಪೋಟಾಷ್ (240-350 ಗ್ರಾಂ) ನೀಡಬೇಕು.

• ರಸಗೊಬ್ಬರಗಳನ್ನು ಕನಿಷ್ಟ ಎರಡು ಕಂತುಗಳಲ್ಲಿ ನೀಡಬೇಕು.

• ಕೃಷಿ ಬಗೆಗಿನ ಮಾಹಿತಿಗೆ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಅಥವಾ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ :ಕೊಡಗಿನಲ್ಲಿ ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ

Leave A Reply

Your email address will not be published.