ಉಚಿತ, ಖಚಿತ, ಖಂಡಿತಗಳ ಮಧ್ಯೆ ಯಾವೆಲ್ಲಾ ಗ್ಯಾರಂಟಿ ನೀಡೋದು ನಿಶ್ಚಿತ? ತಲೇನ ಬುರ್ಜಿ ಮಾಡಿ ಶುಕ್ರವಾರತನಕ ಕಾಂಗ್ರೆಸ್ ಚಿಂತಿತ !

Congress: ಪಂಚ ಗ್ಯಾರಂಟಿಗಳ ಮುಂದಿಟ್ಟು ಆ ಮೂಲಕ ಬಹುಮತ ಸರ್ಕಾರ ರಚಿಸಿದೆ. ಕಾಂಗ್ರೆಸ್ ನ (Congress )ಈ ಐದು ಗ್ಯಾರೆಂಟಿಗಳಲ್ಲಿ ಯಾವುದು ಉಚಿತ, ಖಚಿತ ಮತ್ತು ಖಂಡಿತ ಎನ್ನುವುದನ್ನು ಜನ ಕಾದು ಕುಳಿತು ಮನೆಯಲ್ಲೇ ಯೋಜಿಸುತ್ತಿದ್ದಾರೆ. ರಾಜ್ಯದ ಜನರಿಗೆ ಜೂನ್ ತಿಂಗಳಿನಿಂದ ಮನೆಯ ಬಜೆಟ್ ರಿವೈಸ್ ಮಾಡಬೇಕಾಗಿದೆ. ಅವಳಿಗೆ ಬಸ್ ಪ್ರಯಾಣ ಫ್ರೀ, ಇತ್ತ ಮನೆಯಲ್ಲಿ ಕುಂತಿರುವ ಇವಳಿಗೆ (ಅತ್ತೆಗೆ) ಬಸ್ ಪ್ರಯಾಣದ ಜತೆಗೆ 2,000 ರೂಪಾಯಿ ಫ್ರೀ ಆಗಿ ದೊರೆಯಲಿದೆ. ಅದು ಪ್ಯಾಕೆಟ್ ಹಾಲಿಗೆ ಆಗಿ, ಇನ್ನೂ ಮಿಗುತ್ತೆ. ಎರಡು ಬಾರಿ ಪಕ್ಕದ ಸಂತೆಗೆ ಹೋಗಿ ಬಂದರೆ ಚೀಲ ತುಂಬಾ ತರಕಾರಿ ಕೊಳ್ಳಲು ಅಡ್ಡಿಯಿಲ್ಲ. ಇನ್ನೂ ಸ್ವಲ್ಪ ಹಣ ಉಳಿದರೆ ಅದರಲ್ಲಿ ಅಗ್ಗದ ಒಂದು ಸೀರೆ ಕೊಂಡರಾಯ್ತು. ಹಾಗಿದೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆಯ ನಂತರದ ಕ್ಯಾಲ್ಕುಲೇಷನ್.

 

ಕೆಲ ಮಾಧ್ಯಮ ವರ್ಗದ ‘ ಅದರ ‘ ಅಭ್ಯಾಸ ಇರುವವರು ಈಗ ಉಲ್ಲಸಿತ. ಇನ್ನು ಕ್ವಾಟ್ರು ಕೊಳ್ಳಲು ಮಗನ ಮುಂದೆ ಕೈ ಚಾಚಬೇಕಿಲ್ಲ ಅನ್ನೋದು ಸೀತಕ್ಕನ ಖಚಿತ ನಂಬಿಕೆ. ಅತ್ತೆ ಸೊಸೆ ಇಬ್ರ ಲೈಫೂ ಇನ್ನು ಜಿಂಗಾಲಾಲ !
ಈ ಮಧ್ಯೆ ಸದ್ಯಕ್ಕೆ ಯಾವೆಲ್ಲಾ ಗ್ಯಾರಂಟಿಗಳನ್ನ ನೀಡೋದು ನಿಶ್ಚಿತ? ತಲೇನ ಎಗ್ ಬುರ್ಜಿ ಮಾಡಿಕೊಂಡು ಕಾಂಗ್ರೆಸ್ ಗ್ಯಾರಂಟಿ ಯೋಜನೆ ರೂಪಿಸುವುದರಲ್ಲಿ ಚಿಂತಿತ. ನಾಳೆ ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ಘೋಷಣೆ ಮಾಡುವುದು ಎಂದಿತ್ತು. ಇದೀಗ ಸರ್ಕಾರದ ಚಿಂತನೆ ಮುಗಿದಿಲ್ಲ. ಹಾಗಾಗಿ ನಾಳೆ ಇದ್ದ ಗ್ಯಾರಂಟೀ ಘೋಷಣೆ. ಒಂದು ದಿನ ಮುಂದೆ ಹೋಗಿದೆ. ಪ್ಲಾನಿಂಗ್ ಪೈಕಿ ಕೇವಲ ಮೂರು ಗ್ಯಾರೆಂಟಿ ಯೋಜನೆಗಳನ್ನ ಶುಕ್ರವಾರ ಘೋಷಣೆ ಮಾಡಲಿದೆ ಎನ್ನಲಾಗಿದೆ.

ಭಾಗ್ಯದ ಗ್ಯಾರೆಂಟಿ ಬರಲವ್ವ:

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಮಂತ್ರಿ ಮಾಗಧ ಸದಸ್ಯರು ಅಧಿಕಾರಿಗಳ ಜೊತೆ ಇಂದು ‘ ಗ್ಯಾರಂಟಿ ‘ ಸಭೆ ನಡೆಸಿ ಜೂನ್ 2 ರಂದು ನಡೆಯುವ ಸಂಪುಟ ಸಭೆಯಲ್ಲಿ ಮೂರು ಭರವಸೆಗಳ ಜಾರಿಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಬಹುತೇಕ 3 ಗ್ಯಾರಂಟಿಗಳ ಭವಿಷ್ಯ ಶುಕ್ರವಾರ ನಿರ್ಧಾರ ಆಗಲಿದೆ ಎನ್ನೋದು ಖಚಿತ.

ಐದು ಗ್ಯಾರಂಟಿ ಪೈಕಿ ಮಹಿಳೆಯರಿಗೆ ಉಚಿತ ಬಸ್ಸು ಸಂಚಾರ, ಉಚಿತ ಅಕ್ಕಿ ವಿತರಣೆ ಹಾಗೂ 200 ಯೂನಿಟ್ ವಿದ್ಯುತ್ ಫ್ರೀ – ಈ ಮೂರು ಯೋಜನೆ ಜೂನ್ 2 ರಿಂದಲೆ ಜಾರಿ ಮಾಡಲಾಗುವುದು ಎನ್ನಲಾಗಿದೆ. ಇದರ ಜತೆಗೆ ಇನ್ನುಳಿದ 2 ಯುವ ನಿಧಿಯ ನಿರುದ್ಯೋಗ ಭತ್ಯೆ ಹಾಗೂ ಗೃಹಿಣಿಯರಿಗೆ 2000 ರೂಪಾಯಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮತ್ತೆ ಕನಿಷ್ಟ 3 ರಿಂದ 6 ತಿಂಗಳು ತಿಂಗಳು ತಡವಾಗಲಿದೆ ಎಂದು ತಿಳಿದುಬಂದಿದೆ.

ಯುವ ನಿಧಿಯ ನಿರುದ್ಯೋಗ ಭತ್ಯೆ ಜಾರಿ ತಡ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸಕಾರಣ ಇದೆ. ಅದು ಪ್ರಣಾಳಿಕೆಯಲ್ಲಿ ‘ಪದವಿ ಮುಗಿದ 180 ದಿನದಲ್ಲಿ ( 6 ತಿಂಗಳು) ಉದ್ಯೋಗ ಸಿಗದಿದ್ದರೆ’ ಎಂದು ಹೇಳಿದೆ. ಅದರಂತೆ ಈ ಅಕಾಡಮಿಕ್ ಇಯರ್ ನಲ್ಲಿ ಪದವಿಯನ್ನು ಮೊನ್ನೆ ಮುಗಿಸಿದವರಿಗೆ ಹಣ ನೀಡಲು ಇನ್ನೂ 5 ತಿಂಗಳು ಸಮಯವಕಾಶ ಇದೆ. ಅಷ್ಟರಲ್ಲಿ ನಿಖರ ಅಂಕಿ ಅಂಶ ಸಂಗ್ರಹಿಸಿ ಜಾರಿ ಮಾಡಬಹುದು. ಸಂಪನ್ಮೂಲ ಕ್ರೋಢೀಕರಣ ಮಾಡಲು ಕೂಡಾ ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಬೀಸೋ ದೊಣ್ಣೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎನ್ನೋದು ಸಿದ್ದು ಸೇರಿ, ಡಿಕೆಶಿ ಕೂಡಿಸಿ ಉಳಿದ ಕಾಂಗ್ರೆಸ್ ಮಂದಿಯ ಪ್ಲಾನು.

ಆದ್ದರಿಂದ ಆ ಒಂದು ಗ್ಯಾರಂಟಿಗೆ ಜನರಿಂದ ತಕ್ಷಣಕ್ಕೆ ಪ್ರತಿರೋಧ ಬರುವ ಸಾಧ್ಯತೆ ತೀರಾ ಕಮ್ಮಿ. ಹಾಗಾಗಿ ಅದನ್ನು ಮುಂದೂಡಲು ಸಭೆಯಲ್ಲಿ ನಿರ್ಧಾರ ಮಾಡುವ ಸಾಧ್ಯತೆ ಇದೆ.
ಜೊತೆಗೆ ಮಹಿಳೆಯರಿಗೆ 2,000 ಮಾಸಾಶನ ವಿಚಾರದಲ್ಲಿ ಸಮರ್ಪಕವಾಗಿ ಅಂಕಿ ಅಂಶ ಸಂಗ್ರಹಕ್ಕೆ 2 ತಿಂಗಳ ಸಮಯ ಬೇಕಾಗುತ್ತದೆ. ಹೀಗಾಗಿ ಬಹುತೇಕ ಆಗಸ್ಟ್ ನಿಂದ ಆಚೆಗೆ ಮಹಿಳಾ 2000 ಮಾಶಾಸನ ಜಾರಿಗೆ ನಿರ್ಧಾರ ಮಾಡಲಾಗಿದೆ.

Leave A Reply

Your email address will not be published.