ಕಡಬ: ಕಾಡಾನೆ ಕಂಡು ಓಡುವಾಗ ಬಿದ್ದು ವ್ಯಕ್ತಿಗೆ ಗಾಯ- ಡಿಎಫ್‌ಓ
Wild elephant at kadaba
Kadaba : ಕಾಡಾನೆ ಕಂಡುಬಂದ ಹಿನ್ನಲೆಯಲ್ಲಿ ರಕ್ಷಣೆಗೆ ಓಡಿ ಬರುತ್ತಿದ್ದ ವೇಳೆ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಇಚ್ಲಂಪಾಡಿ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಇಚ್ಲಂಪಾಡಿಯ(Kadaba) ನಡುಮನೆ ಕ್ರಾಸ್ ಬಳಿ ರವಿವಾರ ಅಪರಾಹ್ನ ಸಂಭವಿಸಿದೆ.
ಘಟನೆಯಲ್ಲಿ ವಿಜುಕುಮಾರ್ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕಾಡಾನೆ ಕಂಡುಬಂದಿದ್ದು, ಈ ವೇಳೆ ಹಿಂತಿರುಗಿ ಓಡುವ ವೇಳೆ ವಿಜುಕುಮಾರ್ ಆಯಾ ತಪ್ಪಿ ಬಿದ್ದಿದ್ದು, ಈ ವೇಳೆ ಕೈ ಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವ್ಯಕ್ತಿಯನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆದೊಯ್ಯಲಾಗಿದೆ. ಗಾಯಾಳು ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ಎರಡು ಕಾಡಾನೆ ಇತ್ತು ಎನ್ನಲಾಗಿದೆ.
ಮುಂಜಾಗ್ರತೆ
ಕಾಡಾನೆ ಧರ್ಮಸ್ಥಳ-ಸುಬ್ರಹ್ಮಣ್ಯ ಹೆದ್ದಾರಿ ಸಮೀಪ ಕಂಡುಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ಮುಂಜಾಗ್ರತಾ ಹಿನ್ನಲೆಯಲ್ಲಿ ಯಾತ್ರಿಕರು, ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗದಂತೆ ಕಾಡಾನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಿದ್ದಾರೆ. ಜಾಗೃತಿ ವಹಿಸಲು ಸೂಚಿಸಲಾಗಿದೆ.
ಎಡವಿಬಿದ್ದು ಗಾಯ; ಡಿಎಫ್ಒ
ಕಾಡಾನೆ ಇದ್ದಿದ್ದು ಹೌದು ಆದರೆ ಕಾಡಾನೆ ದಾಳಿ ನಡೆಸಿಲ್ಲ. ವ್ಯಕ್ತಿ ಓಡುವ ವೇಳೆ ಬಿದ್ದು ಗಾಯಗೊಂಡಿದ್ದಾರೆ ಎಂದು ನಮಗೆ ಮಾಹಿತಿ ಲಭ್ಯವಾಗಿದೆ. ಗಾಯಾಳು ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ ಎಂದು ಡಿಎಫ್ಒ ಡಾ.ದಿನೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಗಾಯಾಳು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ನಿರಾಕರಿಸಿದ ಅರಣ್ಯ ಅಧಿಕಾರಿಗಳು ಕಾಡಾನೆ ದಾಳಿ ನಡೆಸಿಲ್ಲ, ಕಾಡಾನೆ ಕಂಡು ಓಡುವ ವೇಳೆ ಬಿದ್ದು ಗಾಯಗೊಂಡಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಘಟನೆ ಗೊಂದಲಕ್ಕೂ ಕಾರಣವಾಗಿದೆ.
ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಕೆಲ ತಿಂಗಳ ಹಿಂದೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾಗಿದ್ದರು. ಆ ಬಳಿನ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಿ ಒಂದು ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿ, ಮತ್ತೆ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.