karnataka election results 2023: ರಾಜ್ಯದಲ್ಲಿ ಅತಂತ್ರದ ಆತಂಕ! ಮೂರೂ ಪಕ್ಷಗಳಿಂದ ಪ್ಲ್ಯಾನ್‌ ‘ಎ’, ‘ಬಿ’ ಸಿದ್ಧ. ಏನಿದೆ ಅದರಲ್ಲಿ?

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ಜಿದ್ದಾಜಿದ್ದಿ ಪೈಪೋಟಿಯಿಂದ ಕೂಡಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಸಮೀಕ್ಷೆಗಳು ಅತಂತ್ರ ಸ್ಥಿತಿಯ ಭವಿಷ್ಯ ನುಡಿದಿದ್ದು, ಮೂರೂ ಪಕ್ಷಗಳಿಂದ ಪ್ಯಾನ್‌ ಎ ಮತ್ತು ಬಿ ಸಿದ್ಧಪಡಿಸಿಕೊಂಡಿವೆ. ಏನು ಆ ಪ್ಲಾನ್? ಏನಿದೆ ಅದರಲ್ಲಿ?

ಕಾಂಗ್ರೆಸ್-
ಕೈ ಅಭ್ಯರ್ಥಿ ಹಿಡಿದಿಡಲು ಹೋದ ಜಿಲ್ಲಾ ಉಸ್ತುವಾರಿಗಳು: ಆಪರೇಷನ್‌ ಕಮಲವೂ ಸೇರಿದಂತೆ ಯಾವುದೇ ಅನನುಕೂಲಕರ ಬೆಳವಣಿಗೆಗೆ ಅವಕಾಶ ನೀಡದಿರಲು ನಿರ್ಧರಿಸಿರುವ ಕಾಂಗ್ರೆಸ್‌ ನಾಯಕರು, ಇಂದು ಫಲಿತಾಂಶ ಪ್ರಕಟವಾಗಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೇ ಅವರನ್ನು ಬೆಂಗಳೂರಿಗೆ ಕರೆತರುವ ಹೊಣೆಗಾರಿಕೆ ನೀಡಿ ತಲಾ ಇಬ್ಬರು ಉಸ್ತುವಾರಿಗಳನ್ನು ರಾಜ್ಯದ ಪ್ರತಿ ಜಿಲ್ಲೆಗೂ ಕಳುಹಿಸಿಕೊಟ್ಟಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನಾದಿನವಾದ ಶುಕ್ರವಾರ ಕಾಂಗ್ರೆಸ್‌ ನಾಯಕರು ತೀವ್ರ ಚಟುವಟಿಕೆಯಿಂದ ಇದ್ದಾರೆ.

‘ಕೈ’ ಹೊಸ ಶಾಸಕರು ಇಂದೇ ರೆಸಾರ್ಟಿಗೆ?
– ಬೆಂಗಳೂರಿಗೆ ಕರೆತರಲು ಉಸ್ತುವಾರಿಗಳ ನೇಮಕ
– ಕಾರ್ಯತಂತ್ರದ ಬಗ್ಗೆ ನಾಯಕರ ತೀವ್ರ ಚರ್ಚೆ
– ಫಲಿತಾಂಶದ ಮುನ್ನಾ ದಿನ ಖರ್ಗೆ ನೇತೃತ್ವದಲ್ಲಿ ನಾಯಕರ ಸರಣಿ ಸಭೆ
– ‘ಆಪರೇಷನ್‌ ಕಮಲ’ಕ್ಕೆ ಅವಕಾಶ ನೀಡದಿರಲು ಕಾಂಗ್ರೆಸ್‌ ನಿರ್ಧಾರ
– ನಿರ್ಣಾಯಕ ದಿನವಾದ ಶನಿವಾರ ಹೇಗೆಲ್ಲಾ ಸಜ್ಜಾಗಬೇಕು ಎಂದು ಚರ್ಚೆ
– ಪ್ರತಿ ಜಿಲ್ಲೆಗೂ ತಲಾ ಇಬ್ಬರು ಉಸ್ತುವಾರಿಗಳನ್ನು ಕಳುಹಿಸಲು ತೀರ್ಮಾನ
– ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುತ್ತಿದ್ದಂತೆ ಬೆಂಗಳೂರಿಗೆ ಕರೆತರುವ ಹೊಣೆ
– ಪರಿಸ್ಥಿತಿ ನೋಡಿಕೊಂಡು ರೆಸಾರ್ಚ್‌ಗೆ ಕರೆದೊಯ್ಯಲು ತೀರ್ಮಾನ.

ಬಿಜೆಪಿ-
ಹಲವು ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಮುನ್ನಡೆ:
ಅತಂತ್ರ ಸ್ಥಿತಿ ನಿರ್ಮಾಣವಾಗುವ ಭೀತಿ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯು ಫಲಿತಾಂಶ ಹೊರಬೀಳುವ ಮೊದಲೇ ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರು ಹಾಗೂ ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸಲು ಮುಂದಾಗಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದರ ನೇತೃತ್ವ ವಹಿಸಿಕೊಂಡಿದ್ದು, ಹಲವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಅತಂತ್ರ ಸನ್ನಿವೇಶ ನಿರ್ಮಾಣವಾದಲ್ಲಿ ತಮ್ಮ ಜತೆಗಿರುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷೇತರ ಸ್ಪರ್ಧಿಗಳಿಗೆ ಬಿಜೆಪಿಯಿಂದ ಗಾಳ:
– ಬಂಡಾಯ ಅಭ್ಯರ್ಥಿಗಳನ್ನೂ ಸಂಪರ್ಕಿಸಲು ಯತ್ನ
– ಅತಂತ್ರ ಸ್ಥಿತಿ ಬಂದರೆ ಬೆಂಬಲಿಸುವಂತೆ ಮನವೊಲಿಕೆ
– ಅತಂತ್ರ ಫಲಿತಾಂಶದ ಸಾಧ್ಯತೆ ಕುರಿತು ಮತಗಟ್ಟೆಸಮೀಕ್ಷೆಯಲ್ಲಿ ಮಾಹಿತಿ
– ಯಡಿಯೂರಪ್ಪ ನಿವಾಸದಲ್ಲಿ ಬೊಮ್ಮಾಯಿ ಸೇರಿ ಕೆಲ ನಾಯಕರಿಂದ ಸಭೆ
– ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರು, ಬಂಡಾಯ ಅಭ್ಯರ್ಥಿಗಳ ಸಂಪರ್ಕ
– ಹಲವರ ಜತೆ ದೂರವಾಣಿ ಮಾತುಕತೆ ನಡೆಸಿದ ಬಸವರಾಜ ಬೊಮ್ಮಾಯಿ
– ಆಪ್ತರ ಮೂಲಕವೂ ಪಕ್ಷೇತರರು, ಬಂಡಾಯಗಾರರ ಸಂಪರ್ಕಿಸಲು ಯತ್ನ.

ಜೆಡಿಎಸ್-
ಶಾಸಕರನ್ನು ಹಿಡಿದಿಡಲು ಜೆಡಿಎಸ್‌ನಿಂದ ಕಸರತ್ತು: ಬೆಂಗಳೂರು: ಅತಂತ್ರ ಪರಿಸ್ಥಿತಿ ಸಾಧ್ಯತೆ ಇದೆ ಎಂಬ ಮತಗಟ್ಟೆಸಮೀಕ್ಷೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಶಾಸಕರನ್ನು ಹೈಜಾಕ್‌ ಮಾಡಬಹುದು ಎಂಬ ಭೀತಿಯಿಂದ ಜೆಡಿಎಸ್‌ ತನ್ನವರನ್ನು ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಈ ಸಂಬಂಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ರಾಜಕೀಯ ರಣತಂತ್ರ ರೂಪಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಗೆಲ್ಲುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಜಿ.ಟಿ.ದೇವೇಗೌಡ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮೈತ್ರಿಗೆ ಜೆಡಿಎಸ್‌ನ ‘ಪಂಚರತ್ನ’ ಷರತ್ತು
– ಪ್ರಣಾಳಿಕೆ ಜಾರಿಗೆ ಒಪ್ಪುವ ಪಕ್ಷಕ್ಕೆ ಜೆಡಿಎಸ್‌ ಬೆಂಬಲ?
– ಸಿಂಗಾಪುರದಲ್ಲೇ ಮೈತ್ರಿ ಲೆಕ್ಕಾಚಾರ ಹಾಕಿದ ಎಚ್‌ಡಿಕೆ
– ಹಳೆಯ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಈಗಲೇ ಎಚ್ಚರಿಕೆ
– ಬೆಂಬಲ ಕೇಳಿದ ಪಕ್ಷಕ್ಕೆ ಷರತ್ತು ವಿಧಿಸಲು ಎಚ್‌ಡಿಕೆ ಸಿದ್ಧತೆ.

Leave A Reply

Your email address will not be published.