Karnataka Assembly election 2023: ಚುನಾವಣೆಯಲ್ಲಿ ಏನೆಲ್ಲಾ ಅವಾಂತರ, ಎಡವಟ್ಟುಗಳಾದ್ವು? ಏನೇನು ಗಮನಸೆಳೆದ್ವು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

Karnataka Assembly election 2023 voting complete details

Karnataka Assembly election 2023: ನಿನ್ನೆ ದಿನ (May 10) ಕರ್ನಾಟಕ ವಿಧಾನಸಭೆಗೆ (Karnataka Assembly election 2023) ಏಕ ಹಂತದ ಮತದಾನ(Election) ಅತ್ಯಂತ ಯಶಸ್ವಿಯಾಗಿ ನಡೆದಿದೆ. ಅಲ್ಲಲ್ಲಿ ನಡೆದ ಕೆಲವು ಗದ್ದಲಗಳು ಬಿಟ್ಟರೆ, ಬಹುತೇಕ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ. ರಾಜ್ಯದಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು, ಶೇಕಡಾ 65.69ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ಚುನಾವಣೆ ( Karnataka Assembly election 2023) ಅಂದಮೇಲೆ ಕೆಲವು ಗದ್ದಲ- ಗಲಾಟೆಗಳು ನಡೆಯುವುದು ಸಾಮಾನ್ಯ. ಇದರೆಡೆಯಲ್ಲಿ ಹಲ-ಕೆಲವು ವಿಶೇಷತೆಗಳು ಕೂಡ ನಡೆಯುತ್ತವೆ. ಹಾಗಾದರೆ ನಿನ್ನೆ ದಿನ ರಾಜ್ಯಾದ್ಯಂತ ನಡೆದ ಚುನಾವಣೆಯಲ್ಲಿ ( Karnataka Assembly election 2023) ನಡೆದಂತಹ ಕೆಲವು ಪ್ರಮುಖ ಎಡವಟ್ಟುಗಳು, ಅವಾಂತರಗಳು ಹಾಗೂ ಕೆಲವು ವಿಶೇಷತೆಗಳು ಎಂಬುದರ ಬಗ್ಗೆ ಬೆಳಕು ಚೆಲ್ಲುವಂತಹ ಸಣ್ಣ ಪ್ರಯತ್ನ ಇದಾಗಿದೆ. ಕಂಪ್ಲೀಟ್ ಈ ಸ್ಟೋರಿ ನೋಡಿ.

ಮತಗಟ್ಟೆಗಳಲ್ಲಾದ ಅವಾಂತರಗಳು, ಎಡವಟ್ಟುಗಳು:

ಪಕ್ಷೇತರ ಅಭ್ಯರ್ಥಿ ಕೆಜಿಎಫ್‌ ಬಾಬು ಕ್ರಮ ಸಂಖ್ಯೆಯನ್ನು ಅದಲು ಬದಲು :
ಬೆಂಗಳೂರಿನ(Bangalore) ಚಿಕ್ಕಪೇಟೆ(Chikkapete) ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ (Independent Candidate) ಸ್ಪರ್ಧಿಸಿರೋ ಕೆಜಿಎಫ್ ಬಾಬು(KGF Babu) ಅವರ ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ, ಮತಗಟ್ಟೆಯ ಬಳಿ ಚುನಾವಣಾ ಅಧಿಕಾರಿಗಳು ಮಹಾ ಎಡವಟ್ಟು ಮಾಡಿಕೊಂಡಿದ್ದರು. ಚುನಾವಣಾ ಅಧಿಕಾರಿಗಳು(election Officer’s) ಮತಗಟ್ಟೆಯ ಹೊರಭಾಗದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ, ಹೆಸರು, ಚಿಹ್ನೆಯನ್ನು ಗೋಡೆಯ ಮೇಲೆ ಅಂಟಿಸಿದ್ದಾರೆ. ಆದರೆ, ಬ್ಯಾಲೆಟ್‌ ಪೇಪರ್‌(Balet Paper) ನಲ್ಲಿ ಇರುವ ಕ್ರಮಸಂಖ್ಯೆಗೂ(Serial Number)ಹಾಗೂ ಗೋಡೆಯ ಮೇಲೆ ಅಂಟಿಸಲಾದ ಕ್ರಮಸಖ್ಯೆಯಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ. ಇದರಿಂದಾಗಿ ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗವು ಸ್ಪಷ್ಟನೆ ಕೊಡಲಾಗದೇ ತಪ್ಪು ಒಪ್ಪಿಕೊಂಡಿದೆ.

ವಿಜಯಪುರದಲ್ಲಿ ಮತಯಂತ್ರಗಳನ್ನು ಪುಡಿಗಟ್ಟಿ, ಸಿಬ್ಬಂದಿಗಳನ್ನು ಥಳಿಸಿದ ಗ್ರಾಮಸ್ಥರು:
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ (Basavanabagevadi) ತಾಲೂಕಿನ ಮಸಬಿನಾಳ(Masabinala) ಗ್ರಾಮದಲ್ಲಿ ಘಟನೆ ನಡೆದಿದ್ದು, ಮೀಸಲಿಟ್ಟಿದ್ದ ಮತಯಂತ್ರಗಳನ್ನು ಪುಡಿಪುಡಿ ಮಾಡಲಾಗಿದೆ. ಸಿಬ್ಬಂದಿ ಬಳಕೆ ಮಾಡಿದ ಕಾರನ್ನು ಪಲ್ಟಿ ಮಾಡಿ ಹಾನಿ ಮಾಡಿದ್ದಾರೆ, ಸಿಬ್ಬಂದಿಗೂ ಥಳಿಸಿದ್ದಾರೆ. ಆದರೆ ಗ್ರಾಮಸ್ಥರ ತಪ್ಪು ತಿಳುವಳಿಕೆಯಿಂದ ಘಟನೆ ನಡೆದಿದೆ ಎನ್ನಲಾಗಿದೆ. ಮತಯಂತ್ರ ಕೆಟ್ಟಲ್ಲಿ ಬಳಕೆ ಮಾಡಲು ಇವಿಎಂ(EVM), ವಿವಿಪ್ಯಾಟ್(VV Pat) ‌ಮಷಿನ್‌ಗಳನ್ನು ರಿಸರ್ವ್ ಇಡಲಾಗಿತ್ತು. ಆದ್ರೆ ವಾಪಸ್ ತರೋದನ್ನ ಗಮನಿಸಿ ಜನರು ಸಿಬ್ಬಂದಿಗಳನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸಿಲ್ಲ. ಇದರಿಂದ ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಲಾಗಿದೆ. ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಮತ ಚಲಾಯಿಸಲು ಬಂದಿದ್ದ ವ್ಯಕ್ತಿ ಮತ್ತು ಮಹಿಳೆ ಮತದಾನ ಕೇಂದ್ರದಲ್ಲಿ ಸಾವು
ಹಾಸನ(Hassan) ಜಿಲ್ಲೆಯ ಬೇಲೂರು(Belur) ತಾಲೂಕಿನ ಚಿಕ್ಕೋಲೆ(Chikkole) ಗ್ರಾಮದಲ್ಲಿ ಮತ ಚಲಾಯಿಸಲು ಬಂದಿದ್ದ ಜಯಣ್ಣ (49) ಮತದಾನ ಮಾಡಿ ಹೊರಬಂದ ಬಳಿಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಚುನಾವಣೆ (Election) ಹಿನ್ನೆಲೆ ಇಂದು ಮತದಾನ ನಡೆಯುತ್ತಿದ್ದು, ಜಯಣ್ಣ ಸಹಾ ಮತದಾನದಲ್ಲಿ ಭಾಗಿಯಾಗಿದ್ದರು. ಮತದಾನ ಮಾಡಿ ಹೊರಬಂದ ಅವರು ಮತದಾನ ಕೇಂದ್ರದ ಆವರಣದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ(Belagavi)ಯಲ್ಲಿ ಮತಚಲಾಯಿಸಲು ಬಂದಿದ್ದ ಮಹಿಳೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಸವದತ್ತಿ (Savadatti) ತಾಲೂಕಿನ ಯರಝರ್ವಿ ತಾಲೂಕಿನ ಮತಗಟ್ಟೆಯಲಿ ಈ ಘಟನೆ ಸಂಭವಿಸಿದ್ದು, ಯರಝರ್ವಿ ಗ್ರಾಮದ ಪಾರವ್ವ ಈಶ್ವರ್ ಸಿದ್ನಾಳ (68) ಮತ ಚಲಾಯಿಸಲೆಂದು ಮತಗಟ್ಟೆಗೆ ಬಂದಿದ್ದರು. ಮತದಾನಕ್ಕೂ ಮುನ್ನವೇ ಮತಗಟ್ಟೆಯ ಆವರಣದಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಂದೇ ಮತಗಟ್ಟೆಯಲ್ಲಿ ಸರದಿ ಸಾಲಲ್ಲಿದ್ದ 8000 ಜನರು ಮತದಾನ ಮಾಡದೆ ವಾಪಸ್!
ಬೆಂಗಳೂರು ದಕ್ಷಿಣ (Bangalore South) ವಿಧಾನಸಭಾ ಕ್ಷೇತ್ರದ ದೊಡ್ಡ ನಾಗಮಂಗಲದಲ್ಲಿ ಸುಮಾರು 8000 ಮತದಾರರು ಒಂದೇ ಮತಗಟ್ಟೆ ಕೇಂದ್ರದಲ್ಲಿ (Voting Center) ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಲಾಗದೆ ವಾಪಾಸ್ ಆಗಿದ್ದಾರೆ. ಈ ಬಗ್ಗೆ 176-ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದು, ಒಂದೇ ಮತಗಟ್ಟೆಯಲ್ಲಿ 8000 ಮತದಾರರಿರುವ ಅಂಶವು ತಪ್ಪು ಮಾಹಿತಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ಮತದಾನ ಪ್ರಾರಂಭವಾದ ಸಂದರ್ಭದಲ್ಲಿ 4 ಮತಗಟ್ಟೆಗಳಿಗೆ ಸೇರಿದ ಮತದಾರರು ಮಾಹಿತಿ ಕೊರತೆಯಿಂದಾಗಿ ಒಂದೇ ಸರದಿ ಸಾಲಿನಲ್ಲಿ ಪ್ರವೇಶ ಮಾಡಲು ಯತ್ನಿಸಿದಾಗ ಗೊಂದಲ ಉಂಟಾಗಿದೆ. ವಿಷಯ ತಿಳಿದ ನಂತರ ತಹಶೀಲ್ದಾರ್ ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಸಹಾಯಕ ಚುನಾವಣಾಧಿಕಾರಿ ಇವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಮತದಾರರಿಗೆ, ಚುನಾವಣಾ ಸಿಬ್ಬಂದಿಯವರಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಸರಿಯಾದ ತಿಳುವಳಿಕೆ ನೀಡಿ ಸರದಿ ಸಾಲಿನ ವ್ಯವಸ್ಥೆ ಹಾಗೂ ಮತದಾರರಿಗೆ ಕುಳಿತುಕೊಳ್ಳಲು ಖುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ತದನಂತರ ಸಂಜೆ 06.00 ಗಂಟೆಗೆ ಮತಗಟ್ಟೆ ಸಂಖ್ಯೆ: 327, 329 ಮತ್ತು 329ಎ ರಲ್ಲಿನ ಎಲ್ಲಾ ಮತದಾರರು ಮತದಾನ ಮಾಡಿದ್ದು, ಮತಗಟ್ಟೆ ಸಂಖ್ಯೆ: 328ರಲ್ಲಿ ಮಾತ್ರ ಸರತಿ ಸಾಲಿನಲ್ಲಿದ್ದ 44 ಮಂದಿಗೆ ಟೋಕನ್‌ ನೀಡಿ ಮತದಾನ ಮಾಡಿಸಲಾಗಿರುತ್ತದೆ. ಮತದಾನವು ಸುಗಮವಾಗಿ ನಡೆದಿರುತ್ತದೆ ಎಂದು ತಿಳಿಸಿದ್ದಾರೆ.

ತೋರಿಸಿದ ಚಿಹ್ನೆಗೆ ಅಧಿಕಾರಿಗಳು ಮತ ಹಾಕಿಲ್ಲ ಎಂದು ಆರೋಪಿಸಿ ಧರಣಿ ಕುಳಿತ 85ರ ವೃದ್ಧೆ!:
ಗದಗ(Gadag) ಜಿಲ್ಲೆಯಲ್ಲಿ 85 ವರ್ಷದ ಮುಕ್ತುಂಬೀ ದೊಡ್ಡಮನಿ ಎಂಬ ವೃದ್ಧೆ ಮೊಮ್ಮಗನ ಜೊತೆ ಮತಗಟ್ಟೆಗೆ ಆಗಮಿಸಿದ್ದರು. ಆದರೆ ಅಜ್ಜಿಯೊಂದಿಗೆ ಮೊಮ್ಮಗನನ್ನು ಒಳಗೆ ಬಿಡಲು ಅಧಿಕಾರಿಗಳು ನಿರಾಕರಿಸಿದರು. ಕೊನೆಗೆ ಅಜ್ಜಿ ತೋರಿಸಿದ ಚಿಹ್ನೆಗೆ ಅಧಿಕಾರಿಗಳು ಮತ ಹಾಕದೇ ಬೇರೆ ಗುರುತಿಗೆ ಮತ ಹಾಕಿರುವುದಾಗಿ ವೃದ್ಧೆ ಆರೋಪಿಸಿದ್ದಾರೆ. ಮತಗಟ್ಟೆಯ ಮುಂದೆ ಧರಣಿ ಕುಳಿತಿದ್ದಾರೆ. ತಹಶೀಲ್ದಾರ್​ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಕೂಡಲೇ ಬರುವಂತೆ ಪಟ್ಟು ಹಿಡಿದಿದ್ದರು.

ಮಂಡ್ಯದಲ್ಲಿ ಚುನಾವಣಾಧಿಕಾರಿಗಳ ಪ್ರತಿಭಟನೆ:
ಮಂಡ್ಯ(Mandya) ದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನಿಗಧಿಯಾಗಿದ್ದ ಚುನಾವಣಾ ಅಧಿಕಾರಿಗಳು ಪ್ರತಿಭಟನೆ ಮಾಡಿರುವುದು ಬೆಳಕಿಗೆ ಬಂದಿದೆ. ಊಟದ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಎಂದು ಚುನಾವಣಾಧಿಕಾರಿಗಳು ಗಲಾಟೆ ಮಾಡಿದ್ದಾರೆ. ಕರ್ತವ್ಯಕ್ಕೆ ಹಾಜಾರಾಗುವುದಿಲ್ಲ ಎಂದು ಅಧಿಕಾರಿಗಳು ಪಟ್ಟು ಹಿಡಿದಿರುವುದು ಕಂಡುಬಂದಿದೆ. ‘ವ್ಯವಸ್ಥಿತವಾದ ಊಟದ ವ್ಯವಸ್ಥೆ ಇಲ್ಲ, 50% ರಷ್ಟು ಚುನಾವಣಾ ಅಧಿಕಾರಿಗಳಿಗೆ ಊಟದ ವ್ಯವಸ್ಥೆಯೇ ಇಲ್ಲ. ಅರ್ದಮರ್ಧ ಬೆಂದ ಅನ್ನ ಹಾಕಿದ್ದಾರೆ. ಇದನ್ನು ನಾಯಿ ಕೂಡ ಮೂಸು ನೋಡಲ್ಲ’ ಎಂದು ಚುನಾವಣಾ ಅಧಿಕಾರಿಗಳು ಆರೋಪ ಮಾಡಿದ್ದಾರೆ.

ಮಂಗಳೂರಲ್ಲಿ ಕೈ – ಕಮಲ ಕಾರ್ಯಕರ್ತರ ನಡುವೆ ಘರ್ಷಣೆ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ಧ್ವಂಸ:
ಮಂಗಳೂರಲ್ಲಿ(Mangalore) ಕರ್ನಾಟಕದ ಮತದಾನದ ದಿನವೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಮಂಗಳೂರು ಹೊರವಲಯದ ಮುಡುಶೆಡ್ಡೆ(Madushedde) ಎಂಬಲ್ಲಿ ಈ ಘಟನೆ ನಡೆದಿದೆ. ಈ ಗಲಾಟೆಯಲ್ಲಿ ಮೂಡಬಿದರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ(Mithun Rai) ಕಾರು ದ್ವಂಸವಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್‌ ಹಾಕಿದ ವಿಡಿಯೋ, ಫೋಟೋ ವೈರಲ್‌!
– ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಫೋಟೋ ಅಪಲೋಡ್ ಮಾಡಿಕೊಂಡಿದ್ದಾನೆ.
– ಬೆಳಗಾವಿಯ ಚಿಕ್ಕೋಡಿಯಲ್ಲಿ ಮತದಾನ ಮಾಡಲು ಹೋದ ಯುವಕನೊಬ್ಬ ತಾನು ಮತದಾನ ಮಾಡುವಾ ಯಾವ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದ ಬಗ್ಗೆ ವಿಡಿಯೋ ಮಾಡಿಕೊಂಡು, ಸಾಮಾಜಿಕ ತಾಣಗಳಲ್ಲಿ ಹಂಚಿಕೆ ಮಾಡಿಕೊಂಡಿದ್ದಾನೆ.
– ದೇಶದಲ್ಲಿ ಗೌಪ್ಯವಾಗಿ ಮತದಾನ ಮಾಡಬೇಕೆಂಬ ನಿಯಮವಿದ್ದರೂ, ಬೀದರ್‌ ನಗರದಲ್ಲೊಬ್ಬ ಯುವಕರು ತಾವು ಮತದಾನ ಮಾಡುವ ವಿಡಿಯೋ ಹರಿಬಿಟ್ಟಿದ್ದಾರೆ. ಬೀದರ್ ನ ಭಾಲ್ಕಿ, ಬೀದರ್ ಉತ್ತರ ಸೇರಿದಂತೆ ಹಲವು ಕ್ಷೇತ್ರಗಳ ಕೆಲವರಿಂದ ಮತದಾನ ಮಾಡಿದ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
– ರಾಜ್ಯ ರಾಜಧಾನಿ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ವ್ಯಕ್ತಿಯೊಬ್ಬ ತಾನು ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯರೆಡ್ಡಿಗೆ ಮತದಾನ ಮಾಡಿರುವುದನ್ನು ಫೋಟೋ ತೆಗೆದುಕೊಂಡಿದ್ದಾರೆ.

ಚುನಾವಣೆಯಲ್ಲಿ ನಡೆದ ಕೆಲವು ವಿಶೇಷತೆಗಳು/ ಗಮನ ಸೆಳೆದ ಅಂಶಗಳು

ಹೆಲಿಕಾಪ್ಟರ್‌ನಲ್ಲಿ ಬಂದು ಮತ ಹಾಕಿದ ಹೆಚ್.ಡಿ.ದೇವೇಗೌಡರು:
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (HD Devegowda) ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮತ ಚಲಾಯಿಸಿದರು. ರಾಜ್ಯ ರಾಜಧಾನಿ ಬೆಂಗಳೂರಿನಿಂದ (Bengaluru) ಹೆಲಿಕಾಪ್ಟರ್‌ ಮೂಲಕ ಬಂದ ಹೆಚ್‌.ಡಿ ದೇವೇಗೌಡ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಲ್ಯಾಂಡಿಂಗ್ ಆದರು. ಅದಾದ ಬಳಿಕ ಹೊಳೆನರಸೀಪುರದಿಂದ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ ಹೊಳೆನರಸೀಪುರ ಕ್ಷೇತ್ರದ ಮತಗಟ್ಟೆ ಸಂಖ್ಯೆ 251 ರಲ್ಲಿ ಹಕ್ಕು ಚಲಾವಣೆ ಮಾಡಿದರು.

ಅಮೆರಿಕದಿಂದ ಬಂದು ಮತ ಹಾಕಿದ ಯುವತಿ:
ಬಸವನಗುಡಿ(Basavangudi) ಕ್ಷೇತ್ರದ ಮೇಘನಾ ಅಮೆರಿಕ(America) ದಲ್ಲಿ ಉದ್ಯೋಗಿಯಾಗಿದ್ದಾರೆ. ಇಂದಿನ ಮತದಾನಕ್ಕೆಂದು ಅಮೆರಿಕದಿಂದ ಬಂದಿರುವ ಮೇಘನಾ ಬಸವನಗುಡಿಯಲ್ಲಿ ಮತ ಚಲಾವಣೆ ಮಾಡಿದರು. ಅದಾದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಭಾರತದ ಪ್ರಜೆಯಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ವೋಟ್ ಮಾಡಲು ಅಮೆರಿಕದಿಂದ ಬಂದಿದ್ದೇನೆ. ಇದು ನನ್ನ ಎರಡನೇ ಬಾರಿಯ ಮತದಾನವಾಗಿದೆ ಎಂದು ಹೇಳಿದರು.

ಮತ ಚಲಾಯಿಸಿದ ಬಳಿಕ ಹೆಂಡ, ಮಾಂಸ ಕೊಳ್ಳಲು ವಿಶೇಷ ಟೋಕನ್!
ವಿಜಯಪುರ ವಿಧಾನಸಭಾ ಕ್ಷೇತ್ರ ಒಂದರಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮನೆ ಪ್ರಚಾರ ಮಾಡುವ ವೇಳೆ ಕರಪತ್ರದ ಜೊತೆಗೆ ಕೋಳಿ, ಕುರಿ ಮಾಂಸ ಖರೀದಿಸಲು ಮುಂಗಡವಾಗಿ ಟೋಕನ್ ವಿತರಿಸಿದ್ದಾರೆ. ಮತ ಚಲಾವಣೆ ಮಾಡಿದ ಬಳಿಕ ನಿಗದಿಪಡಿಸಿದ ಮಾಂಸದ ಅಂಗಡಿಯಲ್ಲಿ ಟೋಕನ್ ತೋರಿಸಿ ಮಾಂಸ ಪಡೆದುಕೊಳ್ಳಬಹುದೆಂದು. ಜೊತೆಗೆ ಹಣ, ಹೆಂಡ ಹಾಗೂ ಟೋಕನ್ ನೀಡಿದ ಬಳಿಕ ತಮ್ಮ ಅಭ್ಯರ್ಥಿಗೆ ಮತ ನೀಡುವುದನ್ನು ಖಚಿತಪಡಿಸಿಕೊಳ್ಳಲು ಎಲೆ, ಅಡಿಕೆ ಹಾಗೂ ಹಾಲಿನ ಮೇಲೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಚಾಲೆಂಜ್ ಓಟ್’ ಮಾಡಿದ 95ರ ವೃದ್ಧೆ! 5 ದಿನದ ಬಾಣಂತಿಯಿಂದ ಮತದಾನ:
ಮತದಾನಕ್ಕೆಂದು ಮತಗಟ್ಟೆಗೆ ಬಂದ 95 ವರ್ಷದ ವಯೋವೃದ್ಧೆಯೊಬ್ಬರು ತಮ್ಮ ಮತ ಬೇರೊಬ್ಬರು ಹಾಕಿದ್ದನ್ನು ಕಂಡು ಆಘಾತಕ್ಕೊಳಗಾದರಲ್ಲದೆ, ಚಾಲೆಂಜ್ ಓಟ್ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ.
ಮತ್ತೊಂದೆಡೆ ಯಾದಗಿರಿ ಜಿಲ್ಲೆಯಲ್ಲಿ ಮತದಾನದ ಹಕ್ಕು ಚಲಾಯಿಸಲು 5 ದಿನಗಳ ಬಾಣಂತಿಯೊಬ್ಬಳು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದಲ್ಲದೆ, ಮತದಾನದ ಮಹತ್ವ ಸಾರಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಸಗರ ಗ್ರಾಮದಲ್ಲಿ ನಡೆದಿದೆ.

ಮದುವೆ ಮುಂಚೆ/ ಮದುವೆಯ ಬಳಿಕ ಮತಗಟ್ಟೆಗೆ ಬಂದು ಮತ ಚಲಾಯಿಸಿದ ನವ ದಂಪತಿಗಳು:
– ಮೂಲತಹ ಸಕಲೇಶಪುರದ ನವ ವಿವಾಹಿತ ರೋಹಿತ್ ಧರ್ಮಸ್ಥಳ(Dharmasthala) ದಲ್ಲಿ ವಿವಾಹವಾಗಿ, ಬಳಿಕ ಹಾಸನ ಜಿಲ್ಲೆ, ಸಕಲೇಶಪುರ(Sakaleshapaur) ಪಟ್ಟಣದ ಮತಗಟ್ಟೆ 85ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ.
– ಚಾಮರಾಜನಗರ(Chamarajanagar)ದ ಮೇಲಾಜಿಪುರದ ಮಾದಲಾಂಬಿಕಾ (ಪುಟ್ಟಿ) ಹಾಗೂ ನಂಜನಗೂಡು ತಾಲೂಕಿನ ಕಾರೇಪುರದ ಕೆ.ಎಸ್. ಮಂಜುನಾಥ್ ಅವರ ವಿವಾಹವು ಪಣ್ಯದಹುಂಡಿಯ ಕಲ್ಯಾಣಮಂಟಪದ್ದು, ಹಸೆಮಣೆಯೇರಿದರೂ ಕೂಡ ನವ ವಧೂವರರು ಮದುವೆಯಾದ ಬಳಿಕ ಮೇಲಾಜಿಪುರದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಮಣಿಪಾಲ(Manipal)ದ ಸರಳೇ ಬೆಟ್ಟುವಿನ ವಿಜಯ ನಗರದ ನಿವಾಸಿಯಾಗಿರುವ ಶಿವರಾಜ್ ಮದುವೆ ಮಂಟಪದಿಂದ ಪತ್ನಿ ಸಮೇತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಬಂದು ಮತದಾನ ಮಾಡಿದರು.

– ಕೋಲಾರ(Kolar) ಹಾಗೂ ಮೈಸೂರಲ್ಲಿ(Mysore) ಆಗ ತಾನೆ ಮದುವೆಯಾದ ವಧುವರರು, ಕಲ್ಯಾಣಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸುವ ಮೂಲಕ ಗಮನಸೆಳೆದಿದ್ದಾರೆ. ಕೋಲಾರದಲ್ಲಿ ಮಂಜುನಾಥ್ ಹಾಗೂ ರೂಪಿಣಿ , ಮೈಸೂರಿನ ಪಿರಿಯಾಪಟ್ಟಣದಲ್ಲಿ ಬಿಪಿನ್‌ ಕೆ.ಎನ್‌ ಹಾಗೂ ಅಕ್ಷತಾ ಪಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿ ಅಲ್ಲಿದ್ದವರ ಗಮನ ಸೆಳೆದರು.

ಇನ್ನೂ ಹಲವೆಡೆ ನವ ವಧು ವರರು ಮಟಗಟ್ಟೆಗೆ ಬಂದು ಮತ ಚಲಾಯಿಸಿದರು.

ಬಳ್ಳಾರಿಯಲ್ಲಿ ಎರಡು ಕೈ ಇಲ್ಲದ ದಿವ್ಯಾಂಗನಿಂದ ಮತದಾನ: 
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಕೈ ಇಲ್ಲದ ದಿವ್ಯಾಂಗರೊಬ್ಬರು ಬಳ್ಳಾರಿಯಲ್ಲಿ ಮತದಾನ ಚಲಾಯಿಸಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮುಸ್ತಫಾ ಅವರಿಗೆ ಕೈಗಳೆರಡು ಇಲ್ಲ. ಆದರೂ ಅತ್ಯಂತ ಹುರುಪಿನಿಂದ ಮತಗಟ್ಟೆಗೆ ಬಂದ ಮುಸ್ತಫಾ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಈ ಮೂಲಕ ಉಳಿದವರಿಗೂ ಮಾದರಿಯಾದರು.

ಈ ವೇಳೆ ಚುನಾವಣಾ ಅಧಿಕಾರಿಗಳು ಮುಸ್ತಫಾಗೆ ಎರಡೂ ಕೈ ಇಲ್ಲದ ಕಾರಣ ಕಾಲು ಬೆರಳಿಗೆ ಮತದಾನದ ಶಾಹಿ ಹಾಕಿದರು. ದಿವ್ಯಾಂಗರಾದ ಎಂ.ಡಿ ಮುಸ್ತಫಾ ಅವರು ಮತದಾನ ಮಾಡಿದರು. ಇನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ದಿವ್ಯಾಂಗೆ ಲಕ್ಷ್ಮೀದೇವಿಯೂ ಕೂಡಾ ಕಾಲಿನಿಂದ ಮತಚಲಾಯಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕ ವಿಧಾನಸಭೆ ಚುನಾವಣೆ ‘ಮತದಾನ’ ಮುಕ್ತಾಯ! ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ನೋಡಿ ಮಾಹಿತಿ.

Leave A Reply

Your email address will not be published.