Film actresses : ಕನ್ನಡ ಚಿತ್ರಗಳ ಮೂಲಕ ನಟನೆಗೆ ಪದಾರ್ಪಣೆ ಮಾಡಿ ಭಾರತೀಯ ಸಿನಿರಂಗದಲ್ಲಿ ಮಿಂಚುತ್ತಿರೋ ನಟಿಮಣಿರಿವರು!!
Film actresses: ಬಾಲಿವುಡ್(Bollywood) ಹಾಗೂ ಟಾಲಿವುಡ್(Tollywood) ಚಿತ್ರರಂಗಗಳಲ್ಲಿ ಮಿಂಚುತ್ತಿರುವ ಸಿನಿ ನಟಿಯರಲ್ಲಿ( film actresses) ಹೆಚ್ಚಿನವರು ಕನ್ನಡದವರೆ. ಐಶ್ವರ್ಯ ರೈ ಆದಿಯಾಗಿ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೊಣೆ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ಕೀರ್ತಿ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಕನ್ನಡದ ಸಿನಿ ತಾರೆಯರು ಕನ್ನಡದವು ಎಂಬುದು ಹೆಮ್ಮೆಯ ಸಂಗತಿ. ಅಂದಹಾಗೆ ಇದರೊಂದಿಗೆ ಸ್ಯಾಂಡಲ್‌ವುಡ್ ಮೂಲಕ ಚಿತ್ರ ರಂಗವನ್ನು ಪ್ರವೇಶಿಸಿದ ಕೆಲ ನಟಿಯರು ಇಂದು ಇತರ ಭಾಷೆಗಳಲ್ಲಿ ಜನಪ್ರಿಯ ನಟಿಯರಾಗಿ ಮಿಂಚುತ್ತಿದ್ದಾರೆ. ಸೋ, ಹೀಗೆ ಕನ್ನಡ ಚಿತ್ರರಂಗದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಫೇಮಸ್ ನಟಿಯರ ಪರಿಚಯ ಇಲ್ಲಿದೆ ನೋಡಿ.
ಜಯಲಲಿತಾ : 1964ರಲ್ಲಿ ತೆರೆಕಂಡ ಕನ್ನಡದ ಚಿನ್ನದ ಗೊಂಬೆ ಸಿನಿಮಾ ಮೂಲಕ ಜಯಲಲಿತಾ ನಟನೆಗೆ ಕಾಲಿಟ್ಟರು. ಬಿ.ಆರ್.ಪಂತುಲು ನಿರ್ದೇಶನದ ಈ ಸಿನಿಮಾ ಒಳ್ಳೆಯ ಯಶಸ್ಸು ಗಳಿಸಿತು. ನಂತರ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಜಯಲಲಿತಾ, ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.
ಬಾಲಿವುಡ್ ನಟಿ ರೇಖಾ : ಬಾಲಿವುಡ್ ನಟಿ ರೇಖಾ 1969ರಲ್ಲಿ ವರನಟ ರಾಜ್‌ಕುಮಾರ್ ಅಭಿನಯದ ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999 ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ಅದೇ ವರ್ಷ ಅಂಜನಾ ಸಫರ್ ಮೂಲಕ ಹಿಂದಿ ಸಿನಿಮಾರಂಗಕ್ಕೆ ಕಾಲಿಟ್ಟರು.
ಸೌಂದರ್ಯ : ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಪ್ರಬುದ್ಧ ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಸೌಂದರ್ಯ, ತಮ್ಮ 27 ನೇ ವಯಸ್ಸಿನಲ್ಲಿ ವಿಧಿವಶವಾಗಿದ್ದು ದುರಂತ. ಸೌಂದರ್ಯ 1992ರಲ್ಲಿ ತೆರೆಕಂಡ ಕನ್ನಡದ `ಗಂಧರ್ವ’ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತೆಲಗು ಚಿತ್ರರಂಗಕ್ಕೆ ಹೋದ ಇವರು, ಅಲ್ಲಿ ಅಭೂತಪೂರ್ವ ಯಶಸ್ಸು ಕಂಡು `ಆಧುನಿಕ ಮಹಾನಟಿ ಸಾವಿತ್ರಿ’ ಎಂದೇ ಖ್ಯಾತಿ ಪಡೆದಿದ್ದರು.
ದೀಪಿಕಾ ಪಡುಕೋಣೆ : ಬಾಲಿವುಡ್ ದೀವಾ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದರು. ಇವರ ತಂದೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ. ಇವರು 2006ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ `ಐಶ್ವರ್ಯ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದರು. ನಂತರ ಅದೇ ವರ್ಷ ಶಾರುಖ್ ಖಾನ್ ಅಭಿನಯದ `ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಮುಂದೆ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಬೆಳೆದ ದೀಪಿಕಾ, ಹಾಲಿವುಡ್‌ನಲ್ಲೂ ಅಭಿನಯಿಸಿದ್ದಾರೆ. ಐಶ್ವರ್ಯ ಬಳಿಕ ಇವರು ಕನ್ನಡ ಚಿತ್ರರಂಕ್ಕೆ ಮರಳಲೇ ಇಲ್ಲ.
ರಕುಲ್ ಪ್ರೀತ್ ಸಿಂಗ್ : ಸದ್ಯ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್ ಕನ್ನಡದ `ಗಿಲ್ಲಿ’ ಸಿನಿಮಾ ಮೂಲಕ ನಟನೆಗೆ ಎಂಟ್ರಿಕೊಟ್ಟರು. ಇದು ತಮಿಳಿನ `7G ರೇನ್ ಬೋ’ ಚಿತ್ರದ ರಿಮೇಕ್. ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಗಿಲ್ಲಿ ಸಿನಿಮಾದ ನಾಯಕ. ರಕುಲ್ ಪ್ರೀತ್ ಸಿಂಗ್ `ಗಿಲ್ಲಿ’ ಸಿನಿಮಾ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿಲ್ಲ.
ರೇಖಾ ವ್ಯಾದವ್ಯಾಸ್ : ಬೆಂಗಳೂರಿನಲ್ಲಿ ಜನಿಸಿದ ರೇಖಾ ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದರು. 2001ರಲ್ಲಿ ತೆರೆಗೆ ಬಂದ `ಚಿತ್ರ’ ಇವರ ನಟಿಸಿದ ಮೊದಲ ಚಲನಚಿತ್ರ. ನಂತರ ಕಿಚ್ಚ ಸುದೀಪ್ ಅವರ `ಹುಚ್ಚ’ ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದರು. ಇದೇ ಸಮಯದಲ್ಲಿ ತೆಲಗು ಚಿತ್ರರಂಗ ಪ್ರವೇಶಿಸಿದರು.
ನಿತ್ಯಾ ಮೆನನ್ : ನಿತ್ಯಾ ಮೆನನ್ 2006ರಲ್ಲಿ ಸಂತೋಷ್ ರಾಜ್ ನಿರ್ದೇಶನದಲ್ಲಿ ತೆರೆಕಂಡಿರುವ 7 o’ clcok ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಸಿನಿಜೀವನವನ್ನು ಆರಂಭಿಸಿದರು. ನಂತರ ಇವರು ಜೋಶ್, ಮೈನಾ, ಕೋಟಿಗೊಬ್ಬ 2 ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ತಮಿಳು ಭಾಷೆಗಳ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ : 2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ, ಇಂದು ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದರು. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಸಾನ್ವಿ ಎಂಬ ಪಾತ್ರ ಮಾಡಿದ್ದು, ಈ ಪಾತ್ರ ಅವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತ್ತು. ಬಳಿಕ ಚಮಕ್, ಅಂಜನಿಪುತ್ರ, ಯಜಮಾನ ಮತ್ತು ಪೊಗರು ಸಿನಿಮಾಗಳಲ್ಲಿ ನಟಿಸಿದರು. ನಂತರ ಛಲೋ ಸಿನಿಮಾದಿಂದ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಶ್ಮಿಕಾಗೆ ಗೀತಾ ಗೋವಿಂದಂ ಚಿತ್ರ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿತು. ಸದ್ಯ ಟಾಲಿವುಡ್, ಕಾಲಿವುಡ್, ಬಾಲಿವುಡಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.