BS Yediyurappa: ನಾನು ರಕ್ತದಲ್ಲಿ ಬರೆದು ಕೊಡುವೆ, ಆತ ವಿನ್ ಆಗಲ್ಲ: ಯಡಿಯೂರಪ್ಪ ಕೋಪದಿಂದ ಹೀಗಂದದ್ದು ಯಾರ ಬಗ್ಗೆ ?

BS Yediyurappa: ” ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಜಗದೀಶ ಶೆಟ್ಟ‌ರ್ ಅವರು ದಯನೀಯ ಸೋಲು ಅನುಭವಿಸಬೇಕು. ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಯಾವುದೇ ಕಾರಣಕ್ಕೂ ಅವರು ಗೆಲ್ಲಲು ಸಾಧ್ಯವಿಲ್ಲ. ಇದನ್ನು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ” ಎಂದು ಮಾಜಿ ಸಿಎಂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪನವರು ( BS Yediyurappa) ಶೆಟ್ಟರ್ ಗೆ ಸವಾಲು ಹಾಕಿದ್ದಾರೆ.

“ಇವತ್ತಿನಿಂದ ನಾನು ಶೆಟ್ಟ‌ರ್ ಅವರ ಹೆಸರು ಹೇಳಲು ಇಷ್ಟ ಪಡುವುದಿಲ್ಲ. ಅವರು ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ. ಅವರನ್ನು ಯಾವುದೇ ಕಾರಣಕ್ಕೂ ನಾವು ಕ್ಷಮಿಸಲು ಸಾಧ್ಯವಿಲ್ಲ. ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಜನ ಸುಮ್ಮನೆ ಬಿಡಬಾರದು “ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರ ರಾತ್ರಿ ನಡೆದ ಬಿಜೆಪಿ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಹೋಟೆಲ್‌ನಲ್ಲಿ ಆಯೋಜನೆ ಆಗಿದ್ದ ಧಾರವಾಡ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದರು.

” ಇವತ್ತು ನಾವು ಸಭೆ ಕರೆದುದಕ್ಕೆ ಒಂದು ಕಾರಣ ಇದೆ. ಜಗದೀಶ ಶೆಟ್ಟರ್ ಬಗ್ಗೆ ವೀರಶೈವ ಲಿಂಗಾಯತರಿಗೆ ವಾಸ್ತವ ಸಂಗತಿ ತಿಳಿಸಲೆಂದು ಈ ಸಭೆ ಕರೆಯಲಾಗಿದೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ವಿಧಾನಸಭೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಿ.ಬಿ. ಶಿವಪ್ಪ ಅವರು ವಿರೋಧ ಪಕ್ಷದ ನಾಯಕರಾಗಲು ಹಟ ಹಿಡಿದಾಗ ನಾವು ಶೆಟ್ಟರ್ ಪರವಾಗಿ ನಿಂತಿದ್ದೆವು. ಇದೆಲ್ಲವನ್ನೂ ಶೆಟ್ಟರ್ ಅವರು ಮರೆತಿದ್ದಾರೆ” ಎಂದು ಯಡಿಯೂರಪ್ಪನವರು ಕಿಡಿ ಕಾರಿದ್ದಾರೆ.

” ಈ ಸಲ ಕೆಲವು ಅಗತ್ಯ ಕಾರಣಗಳಿಗಾಗಿ ನಿಮ್ಮನ್ನು ಅಭ್ಯರ್ಥಿಯಾಗಿ ಮಾಡಲಾಗಲಿಲ್ಲ. ಕೇಂದ್ರದಲ್ಲಿ ಉನ್ನತ ಸ್ಥಾನ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾಯಂತವರು ಹೇಳಿದರೂ ನೀವು ಕೇಳಲಿಲ್ಲ. ಅವರಿಗೆ ನಾವೇನು ಅನ್ಯಾಯ ಮಾಡಿದ್ದೇವೆ ? ಪಕ್ಷಕ್ಕೆ ದ್ರೋಹ ಮಾಡಿ ಅವರು ಕಾಂಗ್ರೆಸ್ ಸೇರಿದ್ದಾರೆ. ಈ ಚುನಾವಣೆಯಲ್ಲಿ ಶೆಟ್ಟರ್ ಪರ ನಿಲ್ಲದೆ, ಮಹೇಶ್’ರನ್ನು ಭಾರಿ ಅಂತರದಲ್ಲಿ ಗೆಲ್ಲಿಸಿ “ಎಂದು ಯಡಿಯೂರಪ್ಪನವರು ಮನವಿ ಮಾಡಿದ್ದಾರೆ.

” ಮೊನ್ನೆ ಬೆಂಗಳೂರಿನಲ್ಲಿಯೂ 30 ಜನ ಮುಖಂಡರನ್ನು ಕರೆದು ಚರ್ಚಿಸಿರುವೆ. ಲಿಂಗಾಯತರ ಕಡೆಗಣನೆ ಮಾಡುತ್ತಿದೆ ಎನ್ನುತ್ತಲೇ ಕಾಂಗ್ರೆಸ್ ನನ್ನ ಬಗ್ಗೆ ಕೂಡಾ ಅನುಕಂಪ ತೋರಿದೆ. ಆದರೆ ನಾನು ಈ ಮೊದಲೇ ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದೆ. ಪಕ್ಷದ ಸಂಘಟನೆಗಾಗಿ ನಾನು ರಾಜ್ಯವಿಡೀ ಸುತ್ತುವುದಾಗಿ ಕೂಡಾ ಹೇಳಿದ್ದೆ. ಈಗ ಅದನ್ನೇ ನಾನು ಮಾಡುತ್ತಿರುವೆ. ಜನರು ಕಾಂಗ್ರೆಸ್‌ನ ಯಾವ ಅಪಪ್ರಚಾರಕ್ಕೂ ಕಿವಿಗೊಡಬೇಡಿ. ನೀವು ಯಾವ ಸಮೀಕ್ಷೆಗಳ ಕುರಿತೂ ತಲೆ ಕೆಡಿಸಿಕೊಳ್ಳಬೇಡಿ. ಈ ಯಡಿಯೂರಪ್ಪನಿಗೆ ನಾಡು, ನಾಡಿನ ಜನತೆಯ ನಾಡಿ ಮಿಡಿತ ಎಲ್ಲವೂ ಗೊತ್ತಿದೆ. ಯಾರ ಸಹಾಯವೂ ಇಲ್ಲದೆ ಸರ್ಕಾರ ರಚಿಸುವಂತೆ ಸಹಕಾರ ನೀಡಿ. ಅಭ್ಯರ್ಥಿಗಳ ಗೆಲುವಿಗೆ ಚುನಾವಣೆ ಮುಗಿಯೋವರೆಗೂ ಶ್ರಮಿಸಬೇಕು. ಶೆಟ್ಟರ್ ಅಪ್ತರ ಮತ್ತು ಬೆಂಬಲಿಗರ ಜೊತೆ ಮಾತನಾಡಬೇಕು. ಕಾಂಗ್ರೆಸ್ ಕೈ ಹಿಡಿದು ಹೊರಟಿದ್ದಾರೆ. ಸವಾಲಾಗಿ ಸ್ವೀಕರಿಸಿ” ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತಾಡಿದರು.

ಇದನ್ನೂ ಓದಿ: Priyanka Gandhi: ಮೈಸೂರು ಮೈಲಾರಿ ಹೋಟೆಲಿನಲ್ಲಿ ದೋಸೆ ಹುಯ್ದ ಪ್ರಿಯಾಂಕಾ ಗಾಂಧಿ | ಕರಟಿದ ದೋಸೆಯ ಕ್ವಾಲಿಟಿ ಹೇಳಿತ್ತು ಆಕೆಯ ಅನುಭವ – ವಿಡಿಯೋ ರಿಪೋರ್ಟ್ !

Leave A Reply

Your email address will not be published.