V.Somanna: ವರುಣಾದಲ್ಲಿ ಈಗ ಸೋಮಣ್ಣ ತರುಣ | ಕ್ಷೇತ್ರ ಸುತ್ತಿ ವರುಣಾದಲ್ಲಿ 100 ಪರ್ಸೆಂಟ್ ಗೆಲ್ಲುವ ವಿಶ್ವಾಸವಿದೆ ಎಂದ ಸೋಮಣ್ಣ !
V.Somanna : ವರುಣ ಕ್ಷೇತ್ರದ ರಣಕಣ ಕೆಂಪಾಗಿದೆ. ವಾದ ಪ್ರತಿವಾದ ವಿವಾದವಾಗಿ ಪರಿಣಮಿಸುತ್ತಿದೆ. ಎರಡು ಕ್ಷೇತ್ರದಲ್ಲಿ ಈಗ ಸೋಮಣ್ಣ ತರುಣ. ಆ ಮಟ್ಟಿಗೆ ಬಿರುಸಿನ ಪ್ರಚಾರದಲ್ಲಿ ವಿ ಸೋಮಣ್ಣ ಭಾಗಿಯಾಗಿದ್ದಾರೆ. ವರುಣಾ (Varuna) ಕ್ಷೇತ್ರದಲ್ಲಿ ಓಡಾಡಿ ಈಗ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ. ಜನರ ಪ್ರೀತಿ, ವಿಶ್ವಾಸ, ಮಮಕಾರ ನನ್ನ ಮೇಲಿದೆ. ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶವಿದೆ ಎಂದು ವರುಣಾದ ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (V.Somanna) ಹೇಳಿದ್ದಾರೆ.
ವಿ.ಸೋಮಣ್ಣ ಹೊರಗಿನವರು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ (Mysore) ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಜನರು ಈ ಬಾರಿ ನನಗೆ ಆಶೀರ್ವಾದ ಮಾಡುವ ನಂಬಿಕೆ ತುಂಬಾ ಜಾಸ್ತಿಯಿದೆ. ‘ ಇಲ್ಲಿ ಯಾರು ಹೊರಗಿನವರು, ಯಾರು ಒಳಗಿನವರು ‘ ಎನ್ನುವುದಕ್ಕಿಂತ ಹೆಚ್ಚಾಗಿ ಅಧಿಕಾರ ಇದ್ದಾಗ ಮತ್ತು ಇಲ್ಲದ ಕಾಲದಲ್ಲಿ ಯಾರು ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಸಿದ್ದರಾಮಯ್ಯ ಕೊಪ್ಪಳ (Koppal) ಹಾಗೂ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡಲಿಲ್ವಾ? ಆಗ ಅವರು ಹೊರಗಿನ ಜನ ಅಲ್ವಾ ? ಇದರ ಬಗ್ಗೆ ಸಿದ್ರಾಮ ಸರ್ ಯಾಕ್ ಮಾತಾಡುವುದಿಲ್ಲ. ಸಿದ್ದರಾಮಯ್ಯ ವಾಸ್ತವಾಂಶ ಮಾತನಾಡಿದರೆ ಒಳ್ಳೆಯದು ‘ ಎಂದು ಸಣ್ಣದಾಗಿ ತಿರುಗೇಟು ನೀಡಿದ್ದಾರೆ ಸೋ..ಅಣ್ಣ !
ಸಿಎಂ-ಲಿಂಗಾಯತಗಳು ಭ್ರಷ್ಟ ಸಿಎಂಗಳು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ” ಲಿಂಗಾಯತ ಸಿಎಂ ವಿಚಾರ ನಾನು ಚರ್ಚೆ ಮಾಡಲ್ಲ. ಅದರ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ನಮ್ಮ ಕರ್ತವ್ಯ ಅಲ್ಲ. ರಾಜಕಾರಣಿಗಳು ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಎಸ್.ಆರ್ ಬೊಮ್ಮಾಯಿ, ಯಡಿಯೂರಪ್ಪನವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಅಷ್ಟೇ ನಾ ಹೇಳಬಲ್ಲೆ .ಅದು ದೇಶಕ್ಕೆ ಗೊತ್ತಿದೆ. ” ಎಂದು ಅವರು ಹೇಳಿದರು.
” ಒಂದು ಬಾರಿ ಭಾವುಕರಾಗಿ ಮಾತನಾಡಿ ಎರಡೇ ನಿಮಿಷಕ್ಕೆ ಉಲ್ಟಾ ಹೊಡೆಯುವ ವ್ಯವಸ್ಥೆಯನ್ನು ನಾನು ನೋಡಿದ್ದೇನೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ. ಇದನ್ನು ಸಿದ್ದರಾಮಯ್ಯ ಮನವರಿಕೆ ಮಾಡಿಕೊಂಡು ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಜಾತಿ ನಿಮಿತ್ತ ಮಾತ್ರ ಇದನ್ನು ವೈಭವೀಕರಿಸಬಾರದು” ಎಂದು ಸೋಮಣ್ಣ ಅವರು ತಿಳಿಸಿದರು.
‘ ಈಗ ಎಲ್ಲಾ ವರ್ಗದ ಜನರು ಸೋಮಣ್ಣನಂತಹ ಕೆಲಸಗಾರರು ಬೇಕು ಎಂದು ಕೇಳುತ್ತಿದ್ದಾರೆ. ಮತದಾರರು ಹತ್ತಾರು ಭಾರಿ ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ. ವಸತಿ ಸಚಿವರಾಗಿ ಸೋಮಣ್ಣ ಏನು ಕೆಲಸ ಮಾಡಿದ್ದಾರೆ ಎಂಬುದು ಸಿದ್ದರಾಮಯ್ಯಗೆ ಗೊತ್ತಿದೆ. ನನ್ನ ಬಗ್ಗೆ ಸಿದ್ದರಾಮಯ್ಯನವರೇ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ” ಎಂದು ಸೋಮಣ್ಣ ಹೇಳಿದ್ದಾರೆ.
ಇದನ್ನೂ ಓದಿ: Sachin tendulkar : ನೀವೇ ನಿಜವಾದ ಸಚಿನ್ ಅಂತ ಗ್ಯಾರಂಟಿ ಏನು ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!