Belthangady: ಗಂಗಾಧರ ಗೌಡ ಮನೆಗೆ ಐಟಿ ದಾಳಿ ವೇಳೆ ಬರೋಬ್ಬರಿ 30 ಲಕ್ಷ ಹಣದ ಕಂತೆ ಪತ್ತೆ, ಪರಿಶೀಲನೆ ಮುಂದುವರಿಕೆ
IT Raid Belthangady: ಮಾಜಿ ಸಚಿವ ಗಂಗಾಧರ ಗೌಡ ಮತ್ತು ಅವರ ಮಗ ರಂಜನ್ ಗೌಡ ಅವರ ಮನೆಗೆ ಐಟಿ ರೈಡ್ ಆಗಿದೆ. ಇದೀಗ ಬೃಹತ್ ಪ್ರಮಾಣದ ಹಣ ಪತ್ತೆಯಾಗಿದೆ. ಗಂಗಾಧರ ಗೌಡರಿಗೆ (IT Raid Belthangady) ಸೇರಿದ ಜಾಗದಲ್ಲಿ 30 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇದನ್ನು ಐ ಟಿ ತಂಡ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿಯ ಮಾಜಿ ಸಚಿವರೂ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಗಂಗಾಧರ ಗೌಡ ಮತ್ತು ಮಗ ರಂಜನ್ ಗೌಡ ಅವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಆಗಿದ್ದು, ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯ ಬೆನ್ನಲ್ಲೇ ಈ ದಾಳಿ ನಡೆದಿದೆ.
ಒಟ್ಟು ಮೂರು ಸ್ಥಳಗಳಿಗೆ ಇಂದು ಏ.24 ರಂದು ಬೆಳಗ್ಗೆ ದಾಳಿ ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯ ಮೇಲೆ, ಲಾಯಿದಲ್ಲಿರುವ ಪ್ರಸನ್ನ ಎಜುಕೇಶನ್ ಇನ್ಸಿಟ್ಯೂಷನ್ ಮತ್ತು ಇಂದಬೆಟ್ಟು ನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಈಗ ಸಿಕ್ಕ ಹಣ ಅಕ್ರಮ ಹಣವೇ, ಅಥವಾ ಅದಕ್ಕೆ ದಾಖಲೆ ಇದೆಯೇ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಗಬೇಕಿದೆ.
ಈ ಸಲ ತಮಗೆ ಅಥವಾ ತಮ್ಮ ಮಗ ರಂಜನ್ ಗೌಡರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು ಗೌಡರು. ಆದರೆ ಅವರಾಗಲಿ ಮಗನಾಗಲಿ ಟಿಕೆಟ್ ಪಡೆಯಲು ವಿಫಲರಾಗಿದ್ದರು. ಅಲ್ಲದೆ, ಕ್ಷೇತ್ರದ ಹಳೆಯ ಹುಲಿ ವಸಂತ ಬಂಗೇರ ಅವರು ಕೂಡಾ ಟಿಕೆಟ್ ವಂಚಿತರಾಗಿದ್ದಾರೆ. ಗೌಡ ದ್ವಯರು ತಮಗೆ ಟಿಕೆಟ್ ಮಿಸ್ ಆದ ಕಾರಣ ತಟಸ್ಥವಾಗಿ ಉಳಿದಿದ್ದರು. ಈ ನಡುವೆ ಐಟಿ ಗೌಡರ ಕುಟುಂಬಕ್ಕೆ ಬಿಸಿ ಮುಟ್ಟಿಸಿದೆ.
ಇಂದು ಬೆಳಗ್ಗೆ 5 ರಿಂದ 5.30 ರ ಸುಮಾರಿಗೆ ಇನೋವಾ ಕಾರಿನಲ್ಲಿ ಬಂದ ಪೊಲೀಸರು ಮಣೆ ಬಾಗಿಲು ಬಡಿದಿದ್ದರು. ಮುಂಜಾನೆಯ ಸಿಹಿನಿದ್ದೆಯಲ್ಲಿ ಇದ್ದಾಗ ರೈಡ್ ಆಗಿದೆ. ಪೊಲೀಸರ ಜೊತೆ ಬಂದ ಐಟಿ ಅಧಿಕಾರಿಗಳು ಬಂದು ದಾಳಿ ಮಾಡಿದ್ದು ಇನ್ನೂ ಪರಿಶೀಲನೆ ಮುಂದುವರಿದಿದೆ.